ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಿ ನೋಡಿದರೂ ಮಾಸ್ಕ್‌ ಮಾಸ್ಕ್‌!

ಮುಖಗವಸು ಮೊರೆಹೋದ ವಿದ್ಯಾರ್ಥಿಗಳು, ಬಾಯಿಗೆ ಬಟ್ಟೆ ಕಟ್ಟಿಕೊಂಡೇ ಜಾತ್ರೆಗೆ ಬಂದ ಜನ
Last Updated 14 ಮಾರ್ಚ್ 2020, 11:37 IST
ಅಕ್ಷರ ಗಾತ್ರ

ಕಲಬುರ್ಗಿ: ನಗರದಲ್ಲಿ ಇಡೀ ದಿನ ಕೊರೊನಾದ್ದೇ ಕಿರಿಕಿರಿ. ಶಾಲೆ, ಕಾಲೇಜು ಆವರಣ, ಬಸ್‌ ನಿಲ್ದಾಣ, ರೈಲ್ವೆ ಸ್ಟೇಷನ್‌, ಶರಣಬಸವೇಶ್ವವರ ಜಾತ್ರೆ, ಆಸ್ಪತ್ರೆ, ಹೋಟೆಲ್‌, ಬ್ಯಾಂಕ್‌... ಪ್ರತಿ ಮೂಲೆಮೂಲೆಯಲ್ಲೂ ಈ ಮಹಾಮಾರಿಯದ್ದೇ ಚರ್ಚೆ ನಡೆಯಿತು.

ಕೋವಿಡ್‌ ಸೋಂಕಿತ ವ್ಯಕ್ತಿ ಸಾವಿನ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು. ಶುಕ್ರವಾರ ಬೆಳಕಾಗುವಷ್ಟರಲ್ಲಿ ಜನರಲ್ಲಿ ಆತಂಕದ ಕಾರ್ಮೋಡ ಕವಿಯಿತು. ಮನೆಯಿಂದ ಹೊರಬಿದ್ದ ಪ್ರತಿಯೊಬ್ಬರೂ ಮುಖಗವಸು ಹಾಕಿಕೊಂಡೇ ಬಂದರು. ವಿದ್ಯಾರ್ಥಿಗಳು, ಸರ್ಕಾರಿ– ಖಾಸಗಿ ನೌಕರರು, ವ್ಯಾಪಾರಿಗಳು, ಗ್ರಾಹಕರು ಹೀಗೆ... ಯಾರೆಲ್ಲರ ಬಾಯನ್ನೂ ಮಾಸ್ಕ್‌– ಕರವಸ್ತ್ರಗಳು ಬಂದ್‌ ಮಾಡಿದವು.

ನಗರದ ಬ್ಯಾಂಕ್‌, ಎಟಿಎಂ ಹಾಗೂ ಕೆಲವು ರೆಸ್ಟೊರೆಂಟ್‌ಗಳ ಮುಂದೆ ‘ಮಾಸ್ಕ್‌ ಹಾಕಿಕೊಂಡೇ ಬನ್ನಿ’ ಎಂದು ಬೋರ್ಡ್‌ ಹಾಕಲಾಗಿತ್ತು. ಕನ್ನಡ ಭವನ, ವೀರಶೈವ ಕಲ್ಯಾಣ ಮಂಟಪ ಸೇರಿದಂತೆ ವಿವಿಧೆಡೆ ಆಯೋಜಿಸಿದ್ದ ಸಭೆ–ಸಮಾರಂಭಗಳನ್ನು ರದ್ದು ಮಾಡಲಾಯಿತು. ಬಹಳಷ್ಟು ಜನ ಮನೆಯಲ್ಲೇ ಇದ್ದುಕೊಂಡು, ಕೊರೊನಾ ಕುರಿತ ಸುದ್ದಿಗಳನ್ನು ವೀಕ್ಷಿಸಿ ಕಾಲ ಕಳೆದರು.

ನಿಲ್ದಾಣಗಳಲ್ಲಿ ವಿರಳ ಜನ

ಯಾವಾಗಲೂ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಇಲ್ಲಿನ ರೈಲ್ವೆ ಸ್ಟೇಷನ್‌ ಹಾಗೂ ಬಸ್‌ ನಿಲ್ದಾಣಗಳಲ್ಲಿ ಪರಿಸ್ಥಿತಿ ಎಂದಿನಂತೆ ಇರಲಿಲ್ಲ. ಜನಸಂಖ್ಯೆ ವಿರಳವಾಗಿತ್ತು. ಬಂದವರೆಲ್ಲ ಮಾಸ್ಕ್‌ ಹಾಕಿಕೊಂಡೇ ಪ್ರಯಾಣಿಸಿದರು. ರೈಲ್ವೆ ಹಾಗೂ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿ ಕೂಡ ಮುಖಗವಸು ಹಾಕಿಕೊಂಡು ಕರ್ತವ್ಯಕ್ಕೆ ಹಾಜರಾದರು.

ಗೊಂದಲ ಗೂಡಾದ ಶಾಲೆಗಳು

ಪರೀಕ್ಷಾ ಕೇಂದ್ರಗಳನ್ನು ಹೊರತುಪಡಿಸಿ ಜಿಲ್ಲೆಯ ಎಲ್ಲ ಶಾಲೆ– ಕಾಲೇಜುಗಳಿಗೂ ಜಿಲ್ಲಾಧಿಕಾರಿ ಶುಕ್ರವಾರದಿಂದ ರಜೆ ಘೋಷಿಸಿದ್ದರು. ಇದರ ಮಾಹಿತಿ ಇಲ್ಲದ ಬಹುಪಾಲು ವಿದ್ಯಾರ್ಥಿಗಳು ಎಂದಿನಿಂತೆ ಶಾಲೆಯತ್ತ ಹೆಜ್ಜೆ ಹಾಕಿದರು. ಅಷ್ಟರಲ್ಲಿ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಪಾಡಿಗೆ ತಾವು ರಜೆ ಘೋಷಿಸಿದವು. ಮತ್ತೆ ಕೆಲವರು ಮಧ್ಯಾಹ್ನ ಮಕ್ಕಳನ್ನು ಮರಳಿ ಮನೆಗೆ ಕಳುಹಿಸಿದರು.

ಸಂಜೆಯ ವೇಳೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು 15 ದಿನ ಎಲ್ಲ ಶಾಲೆಗಳಿಗೂ ರಜೆ ಘೋಷಿಸಿದ್ದರಿಂದ ಮಕ್ಕಳು ಮನೆಯತ್ತ ಹೆಜ್ಜೆ ಹಾಕಿದರು.

ಮಾಲ್‌, ಥಿಯೇಟರ್‌ ಬಂದ್‌

ಜಿಲ್ಲಾಧಿಕಾರಿ ಆದೇಶದ ಹಿನ್ನೆಲೆಯಲ್ಲಿ ನಗರದ ದೊಡ್ಡ ಮಾಲ್‌ಗಳು ಶುಕ್ರವಾರ ಕದ ಮುಚ್ಚಿದವು. ಇಲ್ಲಿನ ಮಿರಾಜ್‌ ಸಿನಿಮಾಸ್‌, ಮುಕ್ತಾ ಹಾಗೂ ಶೆಟ್ಟಿ ಮಲ್ಟಿಪ್ಲೆಕ್ಸ್‌ ಥಿಯೇಟರ್‌ ಹಾಗೂ ಸಂಗಮ, ತ್ರಿವೇಣಿ ಥಿಯೇಟರ್‌ಗಳಲ್ಲಿ ಚಲನಚಿತ್ರ ಪ್ರದರ್ಶನ ಬಂದ್‌ ಮಾಡಲಾಯಿತು.

ಏಷಿಯನ್‌ ಮಾಲ್‌, ಶ್ರದ್ಧಾ ಮಾಲ್‌, ಸನ್‌ಸಿಟಿ, ಆರ್ಚಿಡ್‌, ಗೋಲ್ಡ್‌ಹಬ್‌, ಪ‍್ರೈಮ್‌ ಮಾಲ್‌, ಪ್ರಕಾಶ್‌ ಏಷಿಯನ್‌ ಮಾಲ್‌ ಸೇರಿದಂತೆ ಎಲ್ಲ ಕಡೆಯೂ ಸುತ್ತಾಡಿದ ಅಧಿಕಾರಿಗಳು ಅವುಗಳಲ್ಲಿನ ಮಳಿಗೆಗಳನ್ನು ಬಂದ್‌ ಮಾಡಿಸಿದರು. ಆದರೆ, ಮಧ್ಯಾಹ್ನದ ಹೊತ್ತಿಗೆ ಕೆಲವು ಮಾಲ್‌ಗಳು ಮತ್ತೆ ಷಟರ್ ತೆರೆದು ವ್ಯಾಪಾರು ಶುರು ಮಾಡುವ ಮೂಲಕ ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿದ್ದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT