ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಳ ದಸರಾ ಆಚರಣೆಗೆ ನಿರ್ಧಾರ

17ರಂದು ಘಟ ಸ್ಥಾಪನೆ, 23ರಂದು ಅಷ್ಟಮಿ, 24ಕ್ಕೆ ಖಂಡೆಪೂಜೆ, 25ಕ್ಕೆ ವಿಜಯದಶಮಿ ಆಚರಣೆಗೆ ಸಿದ್ಧತೆ
Last Updated 10 ಅಕ್ಟೋಬರ್ 2020, 14:06 IST
ಅಕ್ಷರ ಗಾತ್ರ

ಕಲಬುರ್ಗಿ: ಕೊರೊನಾ ವೈರಾಣು ಹರಡುವ ಭೀತಿಯ ಹಿನ್ನೆಲೆಯಲ್ಲಿ ಪ್ರಸಕ್ತ ದಸರಾ ಹಬ್ಬವನ್ನು ಅತ್ಯಂತ ಸಂಕ್ಷಿಪ್ತವಾಗಿ ಆಚರಿಸಲು, ವಿವಿಧ ಸಮಾಜಗಳು ಹಾಗೂ ಸಂಘಟನೆಗಳ ಮುಖಂಡರ ಸಭೆಯಲ್ಲಿ ನಿರ್ಧರಿಸಲಾಗಿದೆ.

ಇಲ್ಲಿನ ಅಯ್ಯಾರವಾಡಿಯ ಭವಾನಿ ಮಂದಿರದಲ್ಲಿ ಶನಿವಾರ ಸೇರಿದ ವಿವಿಧ ಸಮಾಜಗಳ ಮುಖಂಡರು, ಸುರಕ್ಷಿತ ಅಂತರ ಕಾಪಾಡಿಕೊಂಡು ಹೇಗೆ ಹಬ್ಬ ಆಚರಿಸಲು ಸಾಧ್ಯ, ಇದರಿಂದ ಆಗಬಹುದಾದ ಅಡತಡೆಗಳು ಏನು ಎಂಬುದರ ಬಗ್ಗೆಯೂ ಸುದೀರ್ಘವಾಗಿ ಚರ್ಚಿಸಿದರು.

ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜ ಪ್ರಮುಖರಾದ ಸುಭಾಷ ಕಮಲಾಪುರ ಮಾತನಾಡಿ, ‘ಶಕ್ತಿ ದೇವತೆಗಳ ಆರಾಧನೆ ಮಾಡುವ ನಾಡಿನ ದೊಡ್ಡ ಹಬ್ಬ ದಸರಾ ಮತ್ತು ನವರಾತ್ರಿ. ಆದರೆ, ಈ ಬಾರಿ ಕೊರೊನಾ ಕಾಟದಿಂದಾಗಿ ಎಲ್ಲ ರಾಷ್ಟ್ರೀಯ ಹಬ್ಬಗಳನ್ನೂ ಕೈಬಿಡಲಾಗಿದೆ. ಹಾಗಾಗಿ, ಪ್ರಸಕ್ತ ದಸರಾ ಹಾಗೂ ನವರಾತ್ರಿಯ ಉತ್ಸವಗಳನ್ನು ಸಾಂಕೇತಿಕವಾಗಿ ಆಚರಿಸುವುದು ಸೂಕ್ತ. ಇದರಿಂದ ಸಮಾಜದಲ್ಲಿ ವೈರಾಣು ಹರಡುವುದರಿಂದ ತಪ್ಪಿಸಬಹುದು’ ಎಂದು ಅಭಿಪ್ರಾಯಪಟ್ಟರು.

‘ಈ ಬಾರಿ ಅಧಿಕ ಮಾಸ ಬಂದಿದ್ದರಿಂದ ಅಷ್ಟಮಿ ಮತ್ತು ನವಮಿ ದಿನಾಂಕಗಳಲ್ಲಿ ಗೊಂದಲ ಉಂಟಾಗಿದೆ. ಪಕ್ಕದ ಮಹಾರಾಷ್ಟ್ರ ರಾಜ್ಯದ ತುಳಜಾಪುರದ ತುಳಜಾ ಭವಾನಿ ಮಂದಿರದಲ್ಲಿ ಈ ಸಲ ಅಷ್ಟಮಿ ಮತ್ತು ನವಮಿಗಳನ್ನು ಒಂದೇ ದಿನ ಆಚರಿಸಲಾಗುತ್ತಿದೆ. ಆದರೆ, ಅಲ್ಲಿನ ದೇವಸ್ಥಾನವನ್ನೂ ಮುಚ್ಚಲಾಗಿದೆ. ಇಲ್ಲಿ ಯಾವ ದಿನಗಳು ಕ್ಯಾಲೆಂಡರ್‌ ಪ್ರಕಾರ ಸೂಕ್ತ ಎಂಬುದರ ಕುರಿತು ಚರ್ಚಿಸೋಣ. ಭಕ್ತರ ಮಧ್ಯೆ ಅಂತರ ಕಾಯ್ದುಕೊಳ್ಳಲು ಅಲ್ಲಿ ಯಾವ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ. ಸಾಂಪ್ರದಾಯಿಕ ಆಚರಣೆಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದರ ಬಗ್ಗೆಯೂ ಸಮಗ್ರವಾಗಿ ತಿಳಿದುಕೊಂಡು ಮುಂದುವರಿಯೋಣ’ ಎಂದೂ ಹೇಳಿದರು.

ಏನೇನು ಕಾರ್ಯಕ್ರಮ?: ಅಕ್ಟೋಬರ್‌17ರಂದು ದೇವಿಯ ಘಟ ಸ್ಥಾಪನೆ ಮಾಡುವುದು, 23ರಂದು ಅಷ್ಟಮಿ ಪೂಜೆ, 24ರಂದು ನವಮಿ ಹಾಗೂ ಖಂಡೇ ಪೂಜೆ ಮತ್ತು 25ರಂದು ವಿಜಯದಶಮಿ ಹಾಗೂ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಸಲು ಸಭೆಯಲ್ಲಿ ಸೇರಿದ ಮುಖಂಡರು ಸಹಮತ ವ್ಯಕ್ತಪಡಿಸಿದರು.

ಅದರಂತೆ ಸಾರ್ವಜನಿಕರು ತಮ್ಮ ಮನೆಗಳಲ್ಲಿಯೇ ಪೂಜೆಯ ವಿಧಿ ವಿಧಾನಗಳನ್ನು ಸರಳವಾಗಿ ಆಚರಿಸಬೇಕು, ದೇವಾಲಯಗಳಿಗೆ ನೈವೇದ್ಯ ತರುವುದು, ಕಾಯಿ ಒಡೆಯುವುದು, ಕರ್ಪೂರ, ಆರತಿ ಬೆಳಗುವುದು ಸೇರಿದಂತೆ ಎಲ್ಲ ರೀತಿಯ ಆಚರಣೆಗಳನ್ನೂ ಮಾಡಬಾರದು ಎಂದು ಮನವಿ ಮಾಡಿದರು.

ಕಲಬುರ್ಗಿ ಮರಾಠ ಸಮಾಜ ಅಧ್ಯಕ್ಷ ಆರ್.ಬಿ.ಜಗದಾಳೆ, ಜಿಲ್ಲಾ ವೀರಶೈವ ಸಮಾಜ ಗೌರವಾಧ್ಯಕ್ಷ ಗಣೇಶ ಅಣಕಲ್‌, ಮುಖಂಡರಾದ ಪ್ರತಾಪ ಕಾಕಡೆ, ರಾಜು ಕಾಕಡೆ, ಸೇರಿದಂತೆ ಮರಾಠ, ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜ, ಆರ್ಯ ಸಮಾಜ, ಲಿಂಗಾಯತ ಇನ್ನಿತರ ಸಮಾಜಗಳ ಪ್ರಮುಖರು ಚರ್ಚೆಯಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT