ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ತಾಪಮಾನ ತಗ್ಗಿಸಲು ‘ಹಸಿರು ಕ್ರಾಂತಿ’

20 ಸಾವಿರ ಸಸಿಗಳನ್ನು ನೆಟ್ಟ ‘ನಾಲ್ಕು ಚಕ್ರ’ ಟ್ರಸ್ಟ್‌ ಸದಸ್ಯರು
ಪ್ರಭು ಬ. ಅಡವಿಹಾಳ
Published 4 ಆಗಸ್ಟ್ 2024, 5:27 IST
Last Updated 4 ಆಗಸ್ಟ್ 2024, 5:27 IST
ಅಕ್ಷರ ಗಾತ್ರ

ಕಲಬುರಗಿ: ಬಿಸಿಲ ನಗರಿ ಕಲಬುರಗಿ ಅಂದಾಕ್ಷಣ ದಕ್ಷಿಣ ಕರ್ನಾಟಕದ ಬಹುತೇಕರು ಉಸ್ಸಪ್ಪಾ.. ಎಂದು ನಿಟ್ಟುಸಿರು ಬಿಡುವುದೇ ಜಾಸ್ತಿ. ಬೇಸಿಗೆಯಲ್ಲಿ ಇಲ್ಲಿನ ತಾಪಮಾನಕ್ಕೆ ಒಗ್ಗಿಕೊಳ್ಳಲಾಗದೇ ಬಹುತೇಕ ಸರ್ಕಾರಿ ನೌಕರರು ವರ್ಗಾವಣೆ ಪಡೆದುಕೊಳ್ಳುವುದೇ ಹೆಚ್ಚು.

ಬೇಸಿಗೆಯಲ್ಲಿ ಇಲ್ಲಿನ ತಾಪಮಾನ 45 ಡಿಗ್ರಿ ಆಸುಪಾಸಿನಲ್ಲಿ ಇರುತ್ತದೆ. ತಾಪಮಾನ ಹೆಚ್ಚಳಕ್ಕೆ ಮಳೆ, ಮರಗಳ ಕೊರತೆ ಕಾರಣ. ಹೀಗಾಗಿ ‘ನಾಲ್ಕು ಚಕ್ರ’ ಎಂಬ ಚಾರಿಟೇಬಲ್‌ ಟ್ರಸ್ಟ್‌ ಕಳೆದ ನಾಲ್ಕು ವರ್ಷಗಳಿಂದ ಹಸಿರು ಕ್ರಾಂತಿ ನಡೆಸುತ್ತಿದೆ.

ಸುಮಾರು 15 ಜನರ ಈ ತಂಡ ಅರಣ್ಯ ಇಲಾಖೆಯಿಂದ ಬೇವು, ಹೆಬ್ಬೇವು, ಹೊಂಗೆ, ಸಾಗವಾನಿ, ಮಹಾಗನಿಯಂತಹ ಆಮ್ಲಜನಕ ಬಿಡುಗಡೆ ಮಾಡುವ 5,000 ಸಸಿಗಳನ್ನು ಪ್ರತಿವರ್ಷ ಖರೀದಿಸಿ ನೆಡುತ್ತಾರೆ. ಸಿನ್ನೂರ ಮತ್ತು ಕೆಸರಟಗಿ ಸಾಮಾಜಿಕ ಅರಣ್ಯ ಇಲಾಖೆ ಕಚೇರಿಯಿಂದ ಪ್ರತಿ ಸಸಿಗೆ ₹12 ರಂತೆ ಬೆಲೆ ನೀಡಿ ಖರೀದಿಸಿ ತರುತ್ತಾರೆ. ಅವುಗಳನ್ನು ಪಾಲಿಕೆ ಉದ್ಯಾನಗಳು, ಬಡಾವಣೆಗಳು, ಶಾಲಾ ಆವರಣ, ದೇವಾಲಯ, ಮಸೀದಿ, ಚರ್ಚ್‌ ಆವರಣದಲ್ಲಿ ನೆಡುತ್ತಾರೆ.

ಕಲಬುರಗಿಯನ್ನು ಮಲೆನಾಡಿನಂತೆ ಹಸಿರು ಸಿರಿ ಮಾಡಬೇಕು ಎಂಬುದು ನಮ್ಮ ಉದ್ದೇಶ. ಇದಕ್ಕೆ ಸಾರ್ವಜನಿಕರೂ ಕೈಜೋಡಿಸಿ ಸಸಿಗಳನ್ನು ನೆಟ್ಟರೆ ನಮ್ಮ ಸಂಕಲ್ಪ ಈಡೇರುತ್ತದೆ
ಮಾಲಾ ಕಣ್ಣಿ, ಟ್ರಸ್ಟ್‌ ಮುಖ್ಯಸ್ಥೆ

ನಗರದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ 220 ಉದ್ಯಾನಗಳು ಇದ್ದು, ಅಲ್ಲಿ ನೆಟ್ಟ ಸಸಿಗಳಿಗೆ ಬೇಸಿಗೆಯಲ್ಲಿ ನೀರುಣಿಸುವ ಜವಾಬ್ದಾರಿಯನ್ನು ಪಾಲಿಕೆಯವರೇ ವಹಿಸಿಕೊಂಡಿದ್ದಾರೆ. ಶಾಲಾ ಆವರಣದಲ್ಲಿ ನೆಟ್ಟ ಸಸಿಗಳ ಪೋಷಣೆ ಜವಾಬ್ದಾರಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಈಗಾಗಲೇ ಈ ಟ್ರಸ್ಟ್‌ನವರು ಕಳೆದ 4 ವರ್ಷಗಳಲ್ಲಿ ಸುಮಾರು 20 ಸಾವಿರ ಸಸಿಗಳನ್ನು ನೆಟ್ಟಿದ್ದಾರೆ. ಅವುಗಳಲ್ಲಿ ಸುಮಾರು 18 ಸಾವಿರ ಗಿಡಗಳಾಗಿ ಬೆಳೆದುನಿಂತಿದೆ.

ಖಾಸಗಿ ಕೆಲಸದಲ್ಲೇ ಇರುವ ಈ ಟ್ರಸ್ಟ್‌ನ ಸದಸ್ಯರು ನಗರ ವ್ಯಾಪ್ತಿಯಲ್ಲಿ ಅಷ್ಟೇ ಅಲ್ಲದೇ ತಮ್ಮ ಕಾರ್ಯವ್ಯಾಪ್ತಿಯನ್ನು ತಾಲ್ಲೂಕು ಮತ್ತು ಕಲಬುರಗಿ ನಗರದ ಸುತ್ತಲಿನ ಪ್ರವಾಸಿ ತಾಣಗಳಿಗೂ ವಿಸ್ತರಿಸಿದ್ದಾರೆ. ಪ್ರತಿ ಭಾನುವಾರ ಸ್ವಚ್ಛತಾ ಅಭಿಯಾನ ನಡೆಸಿ ಸಸಿ ನೆಡುತ್ತಾರೆ.

ಸಸಿಗಳನ್ನು ನೆಡಲು ತಗ್ಗು ತೆಗೆಯಬೇಕು. ಹೀಗಾಗಿ ಟ್ರಸ್ಟ್‌ನ ಸದಸ್ಯರೇ ಹಣ ಸೇರಿಸಿ ತಗ್ಗು ತೋಡುವ ಯಂತ್ರವನ್ನೂ ಖರೀದಿಸಿದ್ದಾರೆ. ಮಳೆಗಾಲದಲ್ಲೇ ಇವರು ಸಸಿಗಳನ್ನು ನೆಡುವುದರಿಂದ ನೀರಿನ ಸಮಸ್ಯೆ ಅಷ್ಟಾಗಿ ಕಾಡುವುದಿಲ್ಲ. ಇನ್ನು ನೆಟ್ಟ ಸಸಿಗಳ ಬೆಳವಣಿಗೆ ಗಮನಿಸಿ ವರ್ಷದ ಬಳಿಕ ಬೆಳೆದು ನಿಂತ ಗಿಡಗಳ ವಿಡಿಯೊ ಮಾಡಿ ಜನರಿಗೆ ತಲುಪಿಸುವ ಕೆಲಸ ಮಾಡುತ್ತಾರೆ. ಜನರೂ ಸಸಿಗಳನ್ನು ನೆಡಲಿ ಎಂಬ ಉದ್ದೇಶದಿಂದ ವಿಡಿಯೊ ಹಂಚಿಕೊಳ್ಳುತ್ತಾರೆ. ಇನ್ನು ಮನೆ ಆವರಣದಲ್ಲಿ ಜಾಗವಿದ್ದು, ಸಸಿಗಳನ್ನು ನೆಡುವ ಉದ್ದೇಶವಿರುವ ಜನರಿಗೆ ಟ್ರಸ್ಟ್‌ನವರು ಸಸಿಗಳನ್ನು ಉಚಿತವಾಗಿಯೂ ಹಂಚುತ್ತಾರೆ. ಸಂಪರ್ಕಕ್ಕೆ ಮೊ. 9741299995

ಕಲಬುರಗಿ ತಾಲ್ಲೂಕಿನ ನಂದೂರ (ಕೆ) ಶಾಲಾ ಆವರಣದಲ್ಲಿ ಸಸಿಗಳನ್ನು ನೆಟ್ಟು ವಿದ್ಯಾರ್ಥಿಗಳಿಗೆ ಪೋಷಣೆ ಜವಾಬ್ದಾರಿ ಹಂಚಲಾಯಿತು
ಕಲಬುರಗಿ ತಾಲ್ಲೂಕಿನ ನಂದೂರ (ಕೆ) ಶಾಲಾ ಆವರಣದಲ್ಲಿ ಸಸಿಗಳನ್ನು ನೆಟ್ಟು ವಿದ್ಯಾರ್ಥಿಗಳಿಗೆ ಪೋಷಣೆ ಜವಾಬ್ದಾರಿ ಹಂಚಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT