ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲೆಮಾರಿ ಜನರಿಗೆ ಶಾಶ್ವತ ಸೂರು ಕಲ್ಪಿಸಿ

ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಅವರಿಗೆ ಮನವಿ
Last Updated 31 ಜುಲೈ 2021, 11:57 IST
ಅಕ್ಷರ ಗಾತ್ರ

ಕಲಬುರ್ಗಿ: ‘ಅಲೆಮಾರಿ ಸಮುದಾಯದ ಜನರಿಗೆ ಆಶ್ರಯ ಕಾಲೊನಿ ನಿರ್ಮಿಸಬೇಕು’ ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ,ಅಖಿಲ ಕರ್ನಾಟಕ ಹೆಳವ ಸಮಾಜದ ಜಿಲ್ಲಾ ಘಟಕದಿಂದ ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.

ನಗರಕ್ಕೆ ಶನಿವಾರ ಭೇಟಿ ನೀಡಿದ ರವೀಂದ್ರ ಶೆಟ್ಟಿ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಿದ ಮುಖಂಡರು ಮನವಿ ಕೂಡ ಸಲ್ಲಿಸಿದರು.

‘ಅಲೆಮಾರಿ ಸಮುದಾಯ ಇಂದಿಗೂ ಶಾಶ್ವತವಾಗಿ ನೆಲೆ ಕಾಣದೆ ಹೊಟ್ಟೆಪಾಡಿಗಾಗಿ ಊರೂರು ಅಲೆಯುವಂತಾಗಿದೆ. ಅಲೆಮಾರಿ ಬುಡಕಟ್ಟು ಜನಜೀವನವೇ ಅತಂತ್ರ ಸ್ಥಿತಿಯಲ್ಲಿವೆ. ಇವರ ಪರಿಸ್ಥಿತಿ ಸುಧಾರನೆಗಾಗಿ ಅಲೆಮಾರಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ವಿದ್ಯಾರ್ಥಿ ನಿಲಯದ ಪ್ರವೇಶಾತಿಯಲ್ಲಿ ವಿಶೇಷ ಮೀಸಲಾತಿ ನೀಡಬೇಕು. ಜಿಲ್ಲೆಗೊಂದು ಸಭಾಭವನ ನಿರ್ಮಿಸಬೇಕು. ಸರ್ಕಾರಿ ಗೈರಾಣ ಭೂಮಿಯನ್ನು ಅಲೆಮಾರಿ ಜನರ ವಸತಿಗಾಗಿ ಬಳಸಬೇಕು’ ಎಂದೂ ಕೋರಿದರು.

‘ಸಮುದಾಯದ ವಿದ್ಯಾವಂತ‌ ಮುಖಂಡರನ್ನು ಗುರುತಿಸಿ ಜಿಲ್ಲಾ ಸಲಹಾ ಸಮಿತಿಯ ನಾಮನಿರ್ದೇಶಕರನ್ನಾಗಿ ಮಾಡಬೇಕು. ಎಲ್ಲ ಜಿಲ್ಲೆಗಳಲ್ಲಿ ಉದ್ಯೋಗ ಆಧರಿತ ತರಬೇತಿ ಕೇಂದ್ರಗಳನ್ನು ಸ್ಥಾಪಿಸಬೇಕು’ ಎಂದು ಅಖಿಲ ಕರ್ನಾಟಕಹೆಳವ ಸಮಾಜದ ನಿರ್ದೇಶಕರ ಬಸವರಾಜ ಹೆಳವರ ಯಾಳಗಿ ಕೋರಿದರು.

ಸಮಘಟನೆಯ ಜಿಲ್ಲಾ ಘಟಕದ ಅದ್ಯಕ್ಷ ಸಾಯಬಣ್ಣ ಹೆಳವರ, ‘ಭೂ ಖರೀದಿ (ಭೂ ಒಡೆತನ) ಯೋಜನೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಬಾರದು. ನಮ್ಮ ಸಮುದಾಯದವರಿಗೆ ನೇರ ಸಾಲ ಯೋಜನೆಗಳಲ್ಲಿ ನೀಡುತ್ತಿರುವ ಸಾಲದ ಮೊತ್ತವನ್ನು ₹ 50 ಸಾವಿರದಿಂದ ₹ 1 ಲಕ್ಷಕ್ಕೆ ಹೆಚ್ಚಿಸಬೇಕು. ಶೇ 50ರಷ್ಟು ಸಹಾಯಧನ ನೀಡಬೇಕು. ಅಲೆಮಾರಿ ಆಶ್ರಯ ಯೋಜನೆ ಅಡಿಯಲ್ಲಿ ಜಿಲ್ಲೆಯಿಂದ 2015–16ನೇ ಸಾಲಿನಲ್ಲಿ ವಸತಿಗಾಗಿ ಸಲ್ಲಿಸಿದ 444 ಅರ್ಜಿಗಳು ಇನ್ನೂ ಅನುಮೋದನೆಗೊಂಡಿಲ್ಲ. ಈ ಎಲ್ಲ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದಕೆ.ರವೀಂದ್ರ ಶೆಟ್ಟಿ, ‘ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಡಿಯಲ್ಲಿ ಒಟ್ಟು 46 ಜಾತಿ ಸಮುದಾಯಗಳಿದ್ದು, ಇಂದಿಗೂ ಗುಡಿಸಲುಗಳನ್ನು ಹಾಕಿಕೊಂಡು ವಾಸಿಸುತ್ತಿವೆ. ಅವರಿಗೆ ಶಾಶ್ವತ ಸೂರು ಕಲ್ಪಿಸಿ ರಾಜ್ಯವನ್ನು ಗುಡಿಸಲು ಮುಕ್ತ ಮಾಡುವ ಕನಸಿದೆ. ಅಲೆಮಾರಿ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಅಲೆಮಾರಿ ಸಮುದಾಯವು ನಿವೇಸನ ಸೇರಿದಂತೆ ಮೂಲಸೌಕರ್ಯಗಳಿಂದ ವಂಚಿತವಾಗಿದ್ದು, ನಿಗಮದಿಂದ ಸಮುದಾಯದ ಆರ್ಥಿಕ ಸಬಲತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇತರೆ ಸಮುದಾಯಗಳಂತೆ ಗೌರವಯುತ ಜೀವನ ನಡೆಸಲು ಎಲ್ಲಾ ಅವಕಾಶಗಳನ್ನು ಕಲ್ಪಿಸಲಾಗುವುದು’ ಎಂದೂ ಅವರು ಭರವಸೆ ನೀಡಿದರು.

ಸಂಘಟನೆಯ ರಾಜ್ಯ ನಿರ್ದೇಶಕ ರವಿಕುಮಾರ ರುಸ್ತಾಂಪುರ, ಜಿಲ್ಲಾ ಘಟಕದ ಗೌರವಾದ್ಯಕ್ಷ ಮಲ್ಲಿಕಾರ್ಜುನ ಆರ್‌. ಹೆಳವರ ಹೆಬ್ಬಾಳ, ನಾಗಪ್ಪ ಹೆಳವರ, ಅಶೋಕ ದೆಗಲಮಡಿ, ಲಕ್ಷ್ಮಣ ಹೆಳವರ, ತಿಪ್ಪಣ್ಣ ಹೆಳವರ ರಾಂಪೂರಹಳ್ಳಿ, ಅಶೋಕ ಹೆಳವರ ಹಾಗೂ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT