ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಕಿಯಲ್ಲಿ ಸಚಿವ ಅಶೋಕ ಗ್ರಾಮವಾಸ್ತವ್ಯ 20ಕ್ಕೆ

ಜಿಲ್ಲಾಧಿಕಾರಿ ಯಶವಂತ ಗುರುಕರ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ: ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗಿ
Last Updated 9 ಆಗಸ್ಟ್ 2022, 4:23 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲಾಧಿಕಾರಿಗಳ ನಡೆ–ಹಳ್ಳಿ ಕಡೆ ಗ್ರಾಮ ವಾಸ್ತವ್ಯದ ಅಂಗವಾಗಿ ಇದೇ 20ರಂದು ಕಂದಾಯ ಸಚಿವ ಆರ್. ಅಶೋಕ ಸೇಡಂ ತಾಲ್ಲೂಕಿನ ಅಡಕಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದು, ಕಾರ್ಯಕ್ರಮ ಯಶಸ್ಸಿಗೆ ಎಲ್ಲಾ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಸೂಚಿಸಿದರು.

ಸೋಮವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ‘ಸಚಿವರು ಅಂದು ಬೆಳಗಿನಿಂದ ಸಂಜೆಯವರೆಗೆ ಗ್ರಾಮಸ್ಥರ ಅಹವಾಲು ಆಲಿಕೆ, ವಿವಿಧ ಯೋಜನೆಗಳ ಶಂಕುಸ್ಥಾಪನೆ, ಲೋಕಾರ್ಪಣೆ ಕಾರ್ಯಕ್ರಮಕ್ಕೆ ಚಾಲನೆ, ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾತ್ರಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ’ ಎಂದರು.

ಅಂದು ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಅಡಕಿ ಗ್ರಾಮದಲ್ಲಿ ಹಾಜರಿರಬೇಕು. ರಾತ್ರಿ ಅಲ್ಲಿಯೇ ವಾಸ್ತವ್ಯ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ವೇದಿಕೆ ಕಾರ್ಯಕ್ರಮಕ್ಕೆ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆವರಣದ 54 ಸಾವಿರ ಚದರ್‌ ಮೀಟರ್‌ ವ್ಯಾಪ್ತಿಯಲ್ಲಿ ಪೆಂಡಾಲ್ ಹಾಕಲಾಗುತ್ತಿದೆ. ವಿವಿಧ ಇಲಾಖೆಯ ಮಹತ್ವಾಕಾಂಕ್ಷೆ ಯೋಜನೆಗಳ ಸುಮಾರು 20 ಸಾವಿರ ಫಲಾನುಭವಿಗಳಿಗೆ ಸಚಿವರು ಸೌಲಭ್ಯಗಳನ್ನು ವಿತರಣೆ ಮಾಡಲಿದ್ದು, ಫಲಾನುಭವಿಗಳನ್ನು ಕರೆತರುವ ವ್ಯವಸ್ಥೆ ಆಯಾ ಇಲಾಖೆಯ ಅಧಿಕಾರಿಗಳೇ ಮಾಡಬೇಕು ಎಂದು ಸೂಚನೆ ನೀಡಿದರು.

ಸ್ಥಳದಲ್ಲಿ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಮುಂಜಾಗ್ರತವಾಗಿ ಅಂಬುಲೆನ್ಸ್ ವಾಹನ, ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ಆರೋಗ್ಯ ಶಿಬಿರ ಆಯೋಜಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸೇಡಂ ಉಪವಿಭಾಗಾಧಿಕಾರಿ ಕಾರ್ತಿಕ್ ಮತ್ತು ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳು ಇವರಿಗೆ ಅಗತ್ಯ ಸಹಕಾರ ನೀಡಬೇಕು ಎಂದರು.

ಮಳಿಗೆ ಸ್ಥಾಪನೆ: ಕಾರ್ಯಕ್ರಮದ ಅಂಗವಾಗಿ ಕೃಷಿ, ರೇಷ್ಮೆ, ಆರೋಗ್ಯ, ತೊಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ, ಪ್ರವಾಸೋದ್ಯಮ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಭೂದಾಖಲೆಗಳು, ಕಾರ್ಮಿಕ ಇಲಾಖೆ ಹೀಗೆ ಪ್ರಮುಖ ಇಲಾಖೆಗಳು ಮಳಿಗೆ ಸ್ಥಾಪಿಸಿ, ಇಲಾಖೆಯ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಯೋಜನೆಗಳ ಕುರಿತು ಕಿರು ಹೊತ್ತಿಗೆಗಳನ್ನು ವಿತರಿಸಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಮಳಿಗೆಯಲ್ಲಿ ಹಾಜರಿರಬೇಕು ಎಂದರು.

ಸಾಂಸ್ಕೃತಿಕ ಕಾರ್ಯಕ್ರಮ: ಸಂಜೆ ಶಾಲಾ ಮಕ್ಕಳು ಮತ್ತು ಸ್ಥಳೀಯ ಕಲಾವಿದರಿಂದ ದೇಶ ಭಕ್ತಿಯ ಸಾಂಸ್ಕೃತಿಕ ಕಾರ್ಯಕ್ರಮ ಇರಲಿದ್ದು, ಐತಿಹಾಸಿಕ ಮಳಖೇಡ ಕೋಟೆ, ರಾಷ್ಟ್ರಕೂಟರ ಬಗ್ಗೆ ಕಾರ್ಯಕ್ರಮದಲ್ಲಿ ಬೆಳಕು ಚೆಲ್ಲುವಂತಾಗಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಶಿಕ್ಷಣ ಇಲಾಖೆ ಇದರ ಜವಾಬ್ದಾರಿ ನಿರ್ವಹಿಸಬೇಕು ಎಂದು ಯಶವಂತ ಗುರುಕರ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ಗಿರೀಶ್ ಡಿ. ಬದೋಲೆ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಉಪವಿಭಾಗಾಧಿಕಾರಿ ಮೋನಾ ರೋತ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT