ಕಲಬುರಗಿ: ‘ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ಕಳೆದ 15 ವರ್ಷಗಳಿಂದ ಗುಲಬರ್ಗಾ ಜಿಲ್ಲಾ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಸಂಘದ ಅಧ್ಯಕ್ಷರಾಗಿದ್ದಾರೆ. ಸಂಘದ ಹೆಸರಿನಲ್ಲಿ ಸಿಎ ನಿವೇಶನ ಪಡೆದು ಸಮುದಾಯ ಭವನವನ್ನು ಕಟ್ಟಿಕೊಂಡು, ಅದನ್ನು ವಾಣಿಜ್ಯ ಉದ್ದೇಶಕ್ಕಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಆರೋಪಿಸಿದರು.
‘ಸರ್ಕಾರದ ಅನುದಾನವನ್ನು ಬಳಸಿಕೊಂಡು ಸಮುದಾಯ ಭವನ ನಿರ್ಮಿಸಲಾಗಿದೆ. ಭವನದ ಮುಂಭಾಗದಲ್ಲಿ ಮಳಿಗೆಗಳನ್ನು ಮಾಡಿ, ಬಾಡಿಗೆ ಪಡೆಯುತ್ತಿದ್ದಾರೆ. ಸಮುದಾಯ ಭವನಕ್ಕೂ ಬಾಡಿಗೆ ವಿಧಿಸಿ ಹಣ ಪಡೆಯುತ್ತಿದ್ದಾರೆ. ಇದು ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಸಿಎ ನಿವೇಶನ ಹಿಂಪಡೆಯುವಂತೆ ಪ್ರಾಧಿಕಾರದ ಸಭೆಯಲ್ಲಿ ಪ್ರಸ್ತಾಪಿಸುತ್ತೇನೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಕೇಂದ್ರ ಬಸ್ ನಿಲ್ದಾಣದ ಪಕ್ಕದಲ್ಲಿ ಸುಮಾರು 30 ಸಾವಿರ ಚದರ ಅಡಿ ನಿವೇಶನದಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಿಸಲಾಗುತ್ತಿದೆ. ಪಾಲಿಕೆಯಿಂದ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ₹1 ಕೋಟಿ ತೆರಿಗೆ ಭರಿಸದೆ, ಆ ಮೊತ್ತವನ್ನು ಕಡಿಮೆ ಮಾಡಿಸಿಕೊಂಡು ವಂಚಿಸಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ನೀಡಿದ್ದ ಅವಧಿಯೂ ಮುಗಿದಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ತೆರಿಗೆ ವಸೂಲಿಗೆ ಸೂಚಿಸಲಾಗುವುದು’ ಎಂದರು.
ಸಿಎ ನಿವೇಶನ ಸಂಬಂಧ ಜೆಡಿಎಸ್ ಮುಖಂಡ ಕೃಷ್ಣಾರೆಡ್ಡಿ ಆರೋಪಕ್ಕೆ ಪ್ರತಿಕ್ರಿಯಿಸಿದ ಶಾಸಕರು, ‘ಗೊಲ್ಲಾಳೇಶ್ವರ ಶಿಕ್ಷಣ ಸಂಸ್ಥೆಗೆ ಶಿಕ್ಷಣದ ಉದ್ದೇಶಕ್ಕಾಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಿಎ ನಿವೇಶ ಪಡೆಯಲಾಗಿದೆ. ಪ್ರಸ್ತುತ ಕನ್ನಡ ಮಾಧ್ಯಮ ಶಾಲೆ ನಡೆಸುತ್ತಿದ್ದು, ಮುಂದುವರಿದ ಭಾಗವಾಗಿ ಪಿಯು ಶಿಕ್ಷಣ ನೀಡಲಾಗುತ್ತಿದೆ. ಯಾವುದೇ ನಿವೇಶನ ದುರ್ಬಳಕೆ ಮಾಡಿಕೊಂಡಿಲ್ಲ. ಕೃಷ್ಣಾರೆಡ್ಡಿ ಅವರು ತಿಳಿದುಕೊಂಡು ಮಾತನಾಡಲಿ’ ಎಂದು ಕಿಡಿಕಾರಿದರು.
‘ಗೊಲ್ಲಾಳೇಶ್ವರ ಶಿಕ್ಷಣ ಸಂಸ್ಥೆಗೆ ಸಿಎ ನಿವೇಶನ ದುರ್ಬಳಕೆ ಮಾಡಿಕೊಂಡಿದ್ದು ಸಾಬೀತುಪಡಿಸಿದರೆ ರಾಜೀನಾಮೆ ಕೊಡುತ್ತೇನೆ. ರಾಜಕೀಯ ನಿವೃತ್ತಿಗೂ ಸಿದ್ಧ. ತಂದೆ, ತಾಯಿ ಶಾಸಕರಾಗಿದ್ದಾಗ ದತ್ತಾತ್ರೇಯ ಪಾಟೀಲ ರೇವೂರ ಅವರು ಅಧಿಕಾರ ನಡೆಸುತ್ತಿದ್ದರು. 40 ವರ್ಷಗಳ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಹಚ್ಚಿಕೊಂಡಿಲ್ಲ. ನನ್ನ ಮಕ್ಕಳು ಆಡಳಿತದಲ್ಲಿ ಕೈ ಹಾಕಿದರೆ ನಾನೇ ಅವರನ್ನು ಮನೆಯಿಂದ ಹೊರಗೆ ಹಾಕುತ್ತೇನೆ’ ಎಂದರು.
ಕಾಂಗ್ರೆಸ್‌ನ ಪ್ರಮುಖರಾದ ಎಂ.ಬಿ.ಪಾಟೀಲ, ಲಿಂಗರಾಜ ಕಣ್ಣಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.