ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಮತದಾರರ ಪಟ್ಟಿಯಿಂದ ಶಾಸಕರ ಹೆಸರೇ ಡಿಲೀಟ್‌

ಅಫಜಲಪುರ ಟಿಎಪಿಸಿಎಂ ಚುನಾವಣೆಗೆ ಸರ್ಕಾರದ ಗಿಮಿಕ್‌: ಎಂ.ವೈ. ಪಾಟೀಲ ಆರೋಪ
Last Updated 29 ಅಕ್ಟೋಬರ್ 2020, 12:15 IST
ಅಕ್ಷರ ಗಾತ್ರ

ಕಲಬುರ್ಗಿ: ‘ಅಫಜಲಪುರ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಸಂಸ್ಕರಣಾ ಸಮಿತಿ (ಟಿಎಪಿಸಿಎಂ)ಯ ಮತದಾರರ ಪಟ್ಟಿಯಿಂದ ನನ್ನ ಹೆಸರನ್ನೇ ತೆಗೆದು ಹಾಕಲಾಗಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸುವ ಉದ್ದೇಶದಿಂದ ಬಿಜೆಪಿ ಈ ಕುತಂತ್ರ ಮಾಡಿದೆ’ ಎಂದು ಈ ಸಮಿತಿಯ ಸಂಸ್ಥಾಪಕರಲ್ಲಿ ಒಬ್ಬರಾದ ಶಾಸಕ ಎಂ.ವೈ.ಪಾಟೀಲ ದೂರಿದರು.‌

‘ನವೆಂಬರ್ 5ರಂದು ಟಿಎಪಿಸಿಎಂ ಚುನಾವಣೆ ನಡೆಯಲಿದೆ. ಅಷ್ಟರೊಳಗೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿ, ಸಂಸ್ಥಾಪಕ ಅಧ್ಯಕ್ಷನಾಗಿದ್ದ ನನ್ನ ಹೆಸರನ್ನೇ ಕಿತ್ತೆಸೆದಿದ್ದಾರೆ. ಇವರ ಕುತಂತ್ರ ಯಾವ ಮಟ್ಟಕ್ಕೆ ಎಂಬುದು ಇದರಿಂದ ಬಹಿರಂಗವಾಗಿದೆ’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಕಳೆದ ಬಾರಿ ಒಟ್ಟು 1,465 ಮತದಾರರು ಇದ್ದರು. ಈ ಬಾರಿ ಪರಿಷ್ಕೃತ ಪಟ್ಟಿಯಲ್ಲಿ ಕೇವಲ 271 ಜನ ಮಾತ್ರ ಮತದಾರರು ಇದ್ದಾರೆ. ಸುಮಾರು 1,200 ಮತದಾರರನ್ನು ಕೈಬಿಡಲಾಗಿದೆ. ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಮತ್ತು ಅವರ ಕುಟುಂಬ ಹಾಗೂ ಬಿಜೆಪಿ ಕಾರ್ಯಕರ್ತರ ಹೆಸರಗಳನ್ನು ಮಾತ್ರ ಪಟ್ಟಿಯಲ್ಲಿ ಉಳಿಸಿಕೊಳ್ಳಲಾಗಿದೆ’ ಎಂದು ಕಿಡಿಕಾರಿದರು.‌

‘ಸಮಿತಿಯ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ನಿರ್ದೇಶಕರ ಚುನವಣೆಯಲ್ಲಿ ಬಿಜೆಪಿ ವಾಮ ಮಾರ್ಗದಿಂದ ಅಧಿಕಾರ ಹಿಡಿಯಲು ಹುನ್ನಾರ ನಡೆಸಿದೆ.‌ ಟಿಎಪಿಸಿಎಂ ಅನ್ನು ತನ್ನ ವಶದಲ್ಲಿಟ್ಟುಕೊಳ್ಳುವ ದುಸ್ಸಾಹಸಕ್ಕೆ ಕೈ ಹಾಕಿದೆ. ಪರಿಷ್ಕೃತ ಪಟ್ಟಿಯನ್ನು ಯಾರ ಗಮನಕ್ಕೂ ತಂದಿಲ್ಲ. ನೋಟಿಸ್ ಬೋರ್ಡ್‌ನಲ್ಲೂ ಅಂಟಿಸಿಲ್ಲ. ಬಿಜೆಪಿಯ ನಿಷ್ಠರನ್ನು ಮಾತ್ರ ಪಟ್ಟಿಯಲ್ಲಿ ಸದಸ್ಯರನ್ನಾಗಿ ಮುಂದುವರಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯಾರನ್ನೂ ಉಳಿಸಿಕೊಂಡಿಲ್ಲ’ ಎಂದೂ ಆಕ್ರೋಶ ಹೊರಹಾಕಿದರು.

‘ಸರ್ಕಾರದ ಈ ನಡೆಯ ವಿರುದ್ಧ ನ್ಯಾಯಾಲಯದ ಮೊರೆ ಹೋಗಲು ಚಿಂತನೆ ನಡೆಸಿದ್ದೇನೆ. ಸರ್ಕಾರದ ಈ ಕ್ರಮ ಖಂಡನೀಯ. ಇದರ ವಿರುದ್ಧ ಪ್ರತಿಭಟನೆಯನ್ನು ನಡೆಸುತ್ತೇನೆ’ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ತುಕಾರಾಮ ಪಾಟೀಲ, ಮತೀನ್ ಪಟೇಲ್, ಪ್ರಶಾಂಶ ಜಮಾದಾರ, ಮುಖಂಡರಾದ ಮಹಾಂತೇಶ ಪಾಟೀಲ, ಸಿದ್ದು ಸಿರಸಗಿ ಇದ್ದರು.

‘ನೆರೆ ನಿರ್ವಹಣೆಯಲ್ಲಿ ಸರ್ಕಾರ ವಿಫಲ’

ಕಲಬುರ್ಗಿ: ‘ಜಿಲ್ಲೆಯ ಜನ ಪ್ರವಾಹ, ಅತಿವೃಷ್ಟಿ, ಕೊರೊನಾದಿಂದ ತತ್ತರಿಸಿಹೋಗಿದ್ದಾರೆ. ಆದರೂ ಬಿಜೆಪಿಯವರಿಗೆ ಚುನಾವಣೆಯೇ ಮಹತ್ವದ್ದಾಗಿದೆ’ ಎಂದು ಶಾಸಕ ಎಂ.ವೈ.ಪಾಟೀಲ ಟೀಕಿಸಿದರು.

‘ಭೀಮಾ ನದಿಪಾತ್ರದ 59 ಗ್ರಾಮಗಳು ಜಲಾವೃತಗೊಂಡಿವೆ. 1.10 ಲಕ್ಷ ಎಕರೆ ಕೃಷಿ ಭೂಮಿ ಮುಳುಗಡೆಯಾಗಿ ತೊಗರಿ, ಕಬ್ಬು ಸೇರಿದಂತೆ ಎಲ್ಲ ಬೆಳೆಗಳು ಹಾನಿಯಾಗಿವೆ. ಸಾವಿರಾರು ಜನ ಸಂತ್ರಸ್ತರಾಗಿದ್ದಾರೆ. ಆದರೂ ಸರ್ಕಾರ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಭೇಟಿ ನೀಡಿಲ್ಲ. ಕಂದಾಯ ಸಚಿವರು ಕಾಟಾಚಾರಕ್ಕೆ ಬಂದು ಹೋಗಿದ್ದಾರೆ. ನೆರೆ ಸಮಸ್ಯೆಯನ್ನು ನಿಭಾಯಿಸುವಲ್ಲಿ ಈ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದರು.

‘ಕಳೆದ ವರ್ಷದ ಪ್ರವಾಹದಿಂದ ಆದ ಹಾನಿಗೆ ಘೋಷಣೆ ಮಾಡಿದ ಪರಿಹಾರವೇ ಇನ್ನೂ ರೈತರಿಗೆ ಮುಟ್ಟಿಲ್ಲ. ಈ ವರ್ಷವೂ ಸಿಗುತ್ತದೆ ಎಂಬ ಭರವಸೆ ಇಲ್ಲ. ಹೀಗಾಗಿ, ಕೇಂದ್ರ ಸರ್ಕಾರ ಜಿಲ್ಲೆಯನ್ನು ರಾಷ್ಟ್ರೀಯ ವಿಪತ್ತು ಜಿಲ್ಲೆ ಎಂದು ಘೋಷಣೆ ಮಾಡಬೇಕು’ ಎಂದೂ ಶಾಸಕರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT