ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿಗಳಿಗೆ ‘ಕೋಟಾ’ ತಲುಪುವುದೇ ಚಿಂತೆ!

ವಿಧಾನ ಪರಿಷತ್‌ನ ಈಶಾನ್ಯ ಶಿಕ್ಷಕರ ಮತ ಕ್ಷೇತ್ರದ ಮತಗಳ ಎಣಿಕೆ 10ರಂದು
Last Updated 6 ನವೆಂಬರ್ 2020, 20:30 IST
ಅಕ್ಷರ ಗಾತ್ರ

ಕಲಬುರ್ಗಿ: ವಿಧಾನಪರಿಷತ್‌ನ ಈಶಾನ್ಯ ಶಿಕ್ಷಕರ ಮತ ಕ್ಷೇತ್ರದ ಮತಗಳ ಎಣಿಕೆ ನ.10ರಂದು ನಡೆಯಲಿದ್ದು, ಸೋಲು–ಗೆಲುವಿನ ಚರ್ಚೆ ಜೋರಾಗಿದೆ. ಇನ್ನೊಂದೆಡೆ ಅಭ್ಯರ್ಥಿಗಳು ‘ಪ್ರಥಮ ಪ್ರಾಶಸ್ತ್ಯದ ಮತ’ಗಳ ‘ಕೋಟಾ’ದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ವಿಧಾನ ಪರಿಷತ್‌ ಚುನಾವಣೆಯಲ್ಲಿ ಮತ ಎಣಿಕೆ ಪ್ರಕ್ರಿಯೆಯೇ ಸಿಬ್ಬಂದಿಗೆ ದೊಡ್ಡ ಕೆಲಸ. ಏಕೆಂದರೆ, ಇಲ್ಲಿ ಮತದಾನಕ್ಕೆ ಮತ ಪತ್ರಗಳನ್ನು ಬಳಸಲಾಗುತ್ತದೆ ಮತ್ತು ಪ್ರಾಶಸ್ತ್ರ್ಯದ ಮತಗಳನ್ನು ಚಲಾಯಿಸಲಾಗುತ್ತದೆ. ಇತರೆ ಸಾರ್ವತ್ರಿಕ ಚುನಾವಣೆಗಳಂತೆ ಇಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸುವುದಿಲ್ಲ.

ಈ ಚುನಾವಣೆಯಲ್ಲಿ ಗೆಲುವು ನಿರ್ಧರಿಸುವುದು ‘ಮತಗಳ ಕೋಟಾ’ ಎಂಬ ಮಾನದಂಡ.ಒಟ್ಟು ಕ್ರಮಬದ್ಧ ಮತಗಳಲ್ಲಿ ಶೇ 50ರಷ್ಟು ಮತಗಳಿಗೆ ಒಂದು ಮತ ಸೇರಿಸಲಾಗುತ್ತದೆ. ಆಗಬರುವ ಸಂಖ್ಯೆಯನ್ನು ‘ಗೆಲುವಿಗೆ ನಿಗದಿಯಾದ ಕೋಟಾ’ ಎಂದು ಕರೆಯಲಾಗುತ್ತದೆ.

ಈಶಾನ್ಯ ಶಿಕ್ಷಕರ ಕ್ಷೇತ್ರದ ಈ ಚುನಾವಣೆಯಲ್ಲಿ 21,436 ಮತದಾರರು ಹಕ್ಕು ಚಲಾಯಿಸಿದ್ದಾರೆ. ಉದಾಹರಣೆಗೆ ಈ ಪೈಕಿ 20 ಸಾವಿರ ಮತಗಳು ಕ್ರಮಬದ್ಧವಾಗಬಹುದು ಎಂದು ಇಟ್ಟುಕೊಳ್ಳೋಣ. ಗೆಲುವು ಸಾಧಿಸಬೇಕಾದರೆ 10,001 ಮತಗಳನ್ನು ಪಡೆಯಬೇಕು ಎಂದು ಚುನಾವಣಾಧಿಕಾರಿ ಅವರು ‘ಕೋಟಾ’ ನಿಗದಿ ಮಾಡುತ್ತಾರೆ.

ಮತ ಎಣಿಕೆ ಪ್ರಕ್ರಿಯೆಗೆ ಬಹಳ ಸಮಯ ಬೇಕಾಗುತ್ತದೆ. ಚಲಾವಣೆಯಾದಎಲ್ಲ ಮತಪತ್ರಗಳನ್ನು ಒಟ್ಟಾಗಿಸಿ, ನಂತರ ತಲಾ ಒಂದು ಸಾವಿರದಂತೆ ಮತಪತ್ರಗಳನ್ನು ವಿಂಗಡಿಸಲಾಗುತ್ತದೆ. ಅಭ್ಯರ್ಥಿಗಳು ಪಡೆದಿರುವ ಮೊದಲ ಪ್ರಾಶಸ್ತ್ಯದ ಮತಗಳನ್ನು ಎಣಿಕೆ ಮಾಡಲಾಗುತ್ತದೆ.

ಈ ಕ್ಷೇತ್ರದಲ್ಲಿ ಕಣದಲ್ಲಿರುವವರು ಬಿಜೆಪಿಯ ಶಶೀಲ್‌ ಜಿ. ನಮೋಶಿ, ಕಾಂಗ್ರೆಸ್‌ನ ಶರಣಪ್ಪ ಮಟ್ಟೂರ, ಜೆಡಿಎಸ್‌ನ ತಿಮ್ಮಯ್ಯ ಪುರ್ಲೆ, ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌, ಪಕ್ಷೇತರಚಂದ್ರಕಾಂತ ಸಿಂಗೆ ಹೀಗೆ ಒಟ್ಟು ಐವರು ಅಭ್ಯರ್ಥಿಗಳು ಮಾತ್ರ.

ಮೊದಲ ಹಂತದ ಮತ ಎಣಿಕೆಯಲ್ಲಿ, ಈ ಐವರೂಅಭ್ಯರ್ಥಿಗಳು ಪಡೆದ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಎಣಿಕೆ ಮಾಡಿ, ಆ ಮತಪತ್ರಗಳನ್ನು ಅವರಿಗೆ ನಿಗದಿ ಮಾಡಿರುವ ಟ್ರೇಗಳಲ್ಲಿ ಇಡಲಾಗುತ್ತದೆ. ಹೀಗೆ ಎಲ್ಲ ಮತಪತ್ರಗಳನ್ನು ಎಣಿಸಲಾಗುತ್ತದೆ. ಈ ಹಂತದಲ್ಲಿ ಮತಗಳಿಕೆಯಲ್ಲಿ ನಿಗದಿತ ಕೋಟಾ ತಲುಪುವ ಅಂದರೆ ಉದಾಹರಣೆಯಾಗಿ ಪರಿಗಣಿಸಿರುವ 10,001 ಅಥವಾ ಅದಕ್ಕಿಂತ ಹೆಚ್ಚು ಮತ ಪಡೆದ ಅಭ್ಯರ್ಥಿಯನ್ನು ವಿಜೇತ ಎಂದು ಘೋಷಿಸಲಾಗುತ್ತದೆ.

ಒಂದೊಮ್ಮೆ ಮೊದಲ ಪ್ರಾಶಸ್ತ್ಯದಮತಗಳನ್ನು ನಿಗದಿತ ಕೋಟಾದಷ್ಟು ಯಾವ ಅಭ್ಯರ್ಥಿಯೂ ಪಡೆಯದಿದ್ದರೆ ಆಗ ಎರಡನೇ ಪ್ರಾಶಸ್ತ್ಯದ ಮತಗಳನ್ನು ಎಣಿಕೆ ಮಾಡಲಾಗುತ್ತದೆ.

ಮೊದಲ ಹಂತದ ಮತಗಳ ಎಣಿಕೆಯಲ್ಲಿ (ಪ್ರಥಮ ಪ್ರಾಶಸ್ತ್ಯದ ಮತ) ಅತೀ ಕಡಿಮೆ ಮತ ಪಡೆದ ಅಭ್ಯರ್ಥಿಯು ಎರಡನೇ ಹಂತದ (ದ್ವಿತೀಯ ಪ್ರಾಶಸ್ತ್ಯದ ಮತ ಎಣಿಕೆ) ಮತ ಎಣಿಕೆಯ ಸುತ್ತಿನಿಂದಹೊರ ಹೋಗುತ್ತಾರೆ. ಅವರ ಖಾತೆ (ಟ್ರೇಯಲ್ಲಿ)ಯಲ್ಲಿ ಇಟ್ಟಿರುವ ಅಂದರೆ ಅವರು ಪಡೆದ ಪ್ರಥಮ ಪ್ರಾಶಸ್ತ್ಯದ ಮತಪತ್ರಗಳನ್ನುಎಣಿಕೆ ಮಾಡಲಾಗುತ್ತದೆ. ಆದರಲ್ಲಿ ಯಾವ ಅಭ್ಯರ್ಥಿಗೆ ಎರಡನೇ ಪ್ರಶಸ್ತ್ರ್ಯದ ಮತ ಬಿದ್ದಿವೆ ಎನ್ನುವುದನ್ನು ಗುರುತಿಸಿ, ಆ ಮತಗಳನ್ನು ಆಯಾ ಅಭ್ಯರ್ಥಿಗಳ ಖಾತೆಗೆ ಜಮೆ ಮಾಡುತ್ತ ಹೋಗಲಾಗುತ್ತದೆ.ಆಗಲೂ ಯಾವೊಬ್ಬ ಅಭ್ಯರ್ಥಿ ಪಡೆದ ಮತ ನಿಗದಿತ ಕೋಟಾ ತಲುಪದಿದ್ದರೆ, ಉಳಿದ ಅಭ್ಯರ್ಥಿಗಳಲ್ಲಿ ಕಡಿಮೆ ಮತ ಪಡೆದ ಅಭ್ಯರ್ಥಿ ಹೊರಹೋಗುವ ಮತ್ತು ಅವರ ಮತಪತ್ರಗಳಲ್ಲಿ ದ್ವಿತೀಯ ಪ್ರಾಶಸ್ತ್ಯದ ಮತ ಎಣಿಕೆಯ ಪ್ರಕ್ರಿಯೆ ನಡೆಯುತ್ತದೆ.

‘ಒಂದೊಮ್ಮೆ ಕೊನೆಯಲ್ಲಿ ಇಬ್ಬರೇ ಅಭ್ಯರ್ಥಿಗಳು ಉಳಿಯುತ್ತಾರೆ ಎಂದು ಇಟ್ಟುಕೊಳ್ಳೋಣ. ಅವರಲ್ಲಿ ಯಾವೊಬ್ಬ ಅಭ್ಯರ್ಥಿಯೂ ‘ಕೋಟಾ’ ತಲುಪದಿದ್ದರೂ ಕಣದಲ್ಲಿರುವ ಆ ಇಬ್ಬರುಅಭ್ಯರ್ಥಿಗಳಲ್ಲಿ ಅತೀ ಹೆಚ್ಚು ಮತ ಪಡೆದವರನ್ನು ವಿಜೇತರು ಎಂದು ಘೋಷಿಸಲಾಗುತ್ತದೆ’ ಎನ್ನುವುದು ಪ್ರಾದೇಶಿಕ ಆಯುಕ್ತರ ಕಚೇರಿಯ ಚುನಾವಣಾ ವಿಭಾಗದ ಪ್ರಭಾರ ತಹಶೀಲ್ದಾರ್‌ ಸಂಜೀವಕುಮಾರ್‌ ಪಾಟೀಲ ಅವರ ವಿವರಣೆ.

ಮತ ಎಣಿಕೆಗೆ ಸಿದ್ಧತೆ: ಅಕ್ಟೋಬರ್‌ 28ರಂದು ಮತದಾನ ನಡೆದಿದ್ದು, ನ.2ರಂದು ಮತಗಳ ಎಣಿಕೆ ನಡೆಯಬೇಕಿತ್ತು. ಆದರೆ,ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ನ.3ರಂದು ಇತ್ತು. ಪರಿಷತ್‌ನ ಫಲಿತಾಂಶ ಆ ಚುನಾವಣೆಗಳ ಮೇಲೆ ಪರಿಣಾಮ ಬೀರಬಾರದು ಎಂಬ ಕಾರಣಕ್ಕೆ ಪರಿಷತ್‌ ಕ್ಷೇತ್ರಗಳ ಮತ ಎಣಿಕೆಯನ್ನು ನ.10ಕ್ಕೆ ಮುಂದೂಡಲಾಗಿದೆ.

ಇಲ್ಲಿಯ ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದ ಭಾಸ್ಕರ್ ಸಭಾಂಗಣದಲ್ಲಿ ಅಂದು ಬೆಳಿಗ್ಗೆ 8ರಿಂದ ಮತಗಳ ಎಣಿಕೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT