ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಪ್ರಧಾನಿಯಾಗಿ ಏಳು ವರ್ಷ; ನಾಳೆ ಸೇವಾ ಕಾರ್ಯ- ಬಿಜೆಪಿ ವಕ್ತಾರ ರಾಜಕುಮಾರ

ಶಾಸಕ, ಬಿಜೆಪಿ ವಕ್ತಾರ ರಾಜಕುಮಾರ ಪಾಟೀಲ ತೆಲ್ಕೂರ ಪತ್ರಿಕಾಗೋಷ್ಠಿ
Last Updated 29 ಮೇ 2021, 7:05 IST
ಅಕ್ಷರ ಗಾತ್ರ

ಕಲಬುರ್ಗಿ: ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಏಳು ವರ್ಷಗಳು ತುಂಬಿರುವುದರಿಂದ ಇದೇ 30ರಂದು ರಾಜ್ಯದ ಎಲ್ಲ 55 ಸಾವಿರ ಬೂತ್‌ ಹಾಗೂ ಜಿಲ್ಲೆಯ 1500 ಬೂತ್‌ಗಳಲ್ಲಿ ಪಕ್ಷದ ಕಾರ್ಯಕರ್ತರು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರ, ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶದಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿರುವುದರಿಂದ ಸಂಭ್ರಮಾಚರಣೆ ಮಾಡಬಾರದು ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸೂಚನೆ ನೀಡಿದ್ದಾರೆ. ಸಂಭ್ರಮಾಚರಣೆ ಬದಲು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಈಗಾಗಲೇ ಪಕ್ಷದಿಂದ ವಾರ್‌ ರೂಮ್‌ ಆರಂಭಿಸಿ ಕೊರೊನಾ ಪೀಡಿತರಿಗೆ ಬೆಡ್‌, ಆಮ್ಲಜನಕ, ವೆಂಟಿಲೇಟರ್‌ಗಳನ್ನು ಕೊಡಿಸುವುದರಿಂದ ಮೊದಲುಗೊಂಡು ಶವ ಸಂಸ್ಕಾರದವರೆಗೆ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಿ ಅಗತ್ಯಬಿದ್ದವರಿಗೆ ಆರೋಗ್ಯ ಸೌಲಭ್ಯಗಳನ್ನು ಕೊಡಿಸುತ್ತಿದ್ದಾರೆ. ಭಾನುವಾರ ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್, ಬಡವರಿಗೆ ಅಗತ್ಯ ನೆರವು ನೀಡಲಿದ್ದಾರೆ. ಹಲವು ಕಾರ್ಯಕರ್ತರು ತಮ್ಮ ಜೇಬಿನಿಂದಲೇ ಹಣ ಖರ್ಚು ಮಾಡಿ ಸೇವಾ ಕಾರ್ಯಗಳನ್ನು ನಿರ್ವಹಿಸಲಿದ್ದಾರೆ’ ಎಂದು ಹೇಳಿದರು.

ಡಿಸೆಂಬರ್ ವೇಳೆಗೆ ಎಲ್ಲರಿಗೂ ಲಸಿಕೆ: ಕೊರೊನಾ ಸಾಂಕ್ರಾಮಿಕ ಇಷ್ಟೊಂದು ಹಾನಿ ಮಾಡುತ್ತದೆ ಎಂಬುದನ್ನು ಯಾರೂ ಅಂದಾಜು ಮಾಡಿರಲಿಲ್ಲ. ಹೀಗಾಗಿ, ಲಸಿಕೆ ಕೊಡುವುದು ವಿಳಂಬವಾಗಿದೆ. ಆದರೆ, ಭಾರತ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಲಸಿಕೆ ಮಾಡುತ್ತಿದ್ದು, ಡಿಸೆಂಬರ್ ವೇಳೆಗೆ 250 ಕೋಟಿ ಲಸಿಕೆಗಳನ್ನು ಜನರಿಗೆ ನೀಡಲಾಗುವುದು ಎಂದರು.

‘ಕೇಂದ್ರ ಸರ್ಕಾರ 16 ರೈಲುಗಳ ಮೂಲಕ 1200 ಟನ್ ಆಮ್ಲಜನಕವನ್ನು ಪೂರೈಸಿದೆ. ಮುಂಚೆ 950 ಟನ್ ಆಮ್ಲಜನ ಹಂಚಿಕೆಯಾಗಿತ್ತು. ನಂತರ ಹೆಚ್ಚುವರಿ ಬೇಡಿಕೆಯನ್ನು ಪರಿಗಣಿಸಿ ರಾಜ್ಯಕ್ಕೆ ಹೆಚ್ಚಿನ ಆಮ್ಲಜನಕ ಹಂಚಿಕೆ ಮಾಡಿದೆ. ಕೇಂದ್ರ ಸರ್ಕಾರ ಬೇರೆ ರಾಜ್ಯಗಳಿಗೂ ಅಗತ್ಯ ಪ್ರಮಾಣದಲ್ಲಿ ಆಮ್ಲಜನಕ ಹಂಚಿಕೆ ಮಾಡುವ ಜವಾಬ್ದಾರಿ ಹೊತ್ತಿರುವುದರಿಂದ ರಾಜ್ಯಕ್ಕೆ ಮೊದಲು ಕಡಿಮೆ ಆಮ್ಲಜನಕ ಪೂರೈಕೆ ಮಾಡಿತ್ತು’ ಎಂದು ಹೇಳಿದರು.

‘ಒಂದು ಮನೆಗೆ ಒಮ್ಮೆಲೇ ನಾಲ್ಕೈದು ಜನ ಬಂದರೆ ಅವರಿಗೆ ಊಟ, ಉಪಚಾರದ ವ್ಯವಸ್ಥೆ ಮಾಡುವುದು ಕಷ್ಟವಾಗುತ್ತದೆ. ಅಂಥದೇ ಪರಿಸ್ಥಿತಿ ದೇಶಕ್ಕೆ ಬಂದಿದೆ. ಒಮ್ಮೆಲೇ ಕೊರೊನಾದಿಂದ ಬಳಲುವವರ ಸಂಖ್ಯೆ ವಿಪರೀತ ಹೆಚ್ಚಾಗಿದ್ದರಿಂದ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸುವುದು ತಕ್ಷಣಕ್ಕೆ ಸಾಧ್ಯವಾಗಲಿಲ್ಲ. ಆದರೆ, ಈಗ ಆಮ್ಲಜನಕ, ರಮ್‌ಡಿಸಿವಿರ್ ಚುಚ್ಚುಮದ್ದು, ಕಪ್ಪು ಶಿಲೀಂಧ್ರ ಸೋಂಕಿಗೆ ಔಷಧಿ ಲಭ್ಯವಿದೆ’ ಎಂದರು.

‘ಕೊರೊನಾ ಸಾಂಕ್ರಾಮಿಕದಿಂದ ಬೇರೆ ದೇಶಗಳಲ್ಲಿ ಸಂಭವಿಸಿದಷ್ಟು ಸಾವುಗಳನ್ನು ಭಾರತದಲ್ಲಿ ಸಂಭವಿಸಿಲ್ಲ. ಅದೇ ಸಮಾಧಾನದ ಸಂಗತಿ. ಮೊದಲು ಲಸಿಕೆ ವಿರೋಧಿಸಿದ್ದ ವಿವಿಧ ಪಕ್ಷಗಳು ಈಗ ಲಸಿಕೆ ಬೇಕು ಎಂದು ಒತ್ತಾಯಿಸುತ್ತಿರುವುದು ವ್ಯಂಗ್ಯ’ ಎಂದು ತಿಳಿಸಿದರು.

ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಮಹಾನಗರ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ, ಜಿಲ್ಲಾ ಮಾಧ್ಯಮ ವಕ್ತಾರ ಅರುಣ ಕುಲಕರ್ಣಿ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT