ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಕಣ್ಣಿಟ್ಟಿದ್ದರು; ಜನರ ದಿಕ್ಕುತಪ್ಪಿಸಿ ಸೋಲಿಸಿದರು: ಮಲ್ಲಿಕಾರ್ಜುನ ಖರ್ಗೆ

‘ಪ್ರಜಾವಾಣಿ’ ಸಂದರ್ಶನ
Last Updated 24 ಮೇ 2019, 19:56 IST
ಅಕ್ಷರ ಗಾತ್ರ

ಕಲಬುರ್ಗಿ:ಗುಲಬರ್ಗಾ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಪರಾಭವಗೊಂಡರೂ ಮಲ್ಲಿಕಾರ್ಜುನ ಖರ್ಗೆ ಧೈರ್ಯ ಕಳೆದುಕೊಂಡಿಲ್ಲ. ಸೋಲಿಗೆ ಕಾರಣ, ಮುಂದಿನ ನಡೆ ಬಗ್ಗೆ ಅವರು‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು.

*ಸೋಲು ಅನುಭವಿಸಲು ಪ್ರಮುಖ ಕಾರಣಗಳೇನು?

ಸೋಲಿಗೆ ಇಂಥದ್ದೇ ಕಾರಣ ಎಂಬುದು ಇಲ್ಲ. ಚುನಾವಣೆ ವೇಳೆ ಯಾವ ವಿಷಯ ಮುನ್ನೆಲೆಗೆ ಬಂದವು ಮತ್ತು ಮತದಾರರು ಅವುಗಳನ್ನು ಹೇಗೆ ಗ್ರಹಿಸಿದರು ಎಂಬುದರ ಬಗ್ಗೆ ಪರಾಮರ್ಶೆ ಮಾಡಬೇಕಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸಲು ಪ್ರಾಮಾಣಿಕ ಪ್ರಯತ್ನಪಟ್ಟರೂ ಎಲ್ಲಿ ವಿಫಲವಾದೆವು ಎಂಬುದರ ಬಗ್ಗೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಜೊತೆ ಆತ್ಮಾವಲೋಕನ ಮಾಡಬೇಕಿದೆ. ಸೋಲಿಗೆ ಕಾರಣಗಳು ಒಮ್ಮೆಲೇ ಗೊತ್ತಾಗುವುದಿಲ್ಲ. ಎರಡು, ಮೂರು ದಿನದ ಬಳಿಕ ಅಥವಾ ತಿಂಗಳ ನಂತರ ಒಂದೊಂದಾಗಿ ಕಾರಣಗಳು ಗೊತ್ತಾಗಲಿವೆ. ಅಲ್ಲಿಯವರೆಗೆ ಕಾದು ನೋಡಬೇಕು. ಸದ್ಯಕ್ಕೆ ಏನನ್ನೂ ಸ್ಪಷ್ಟವಾಗಿ ಹೇಳಲು ಆಗುವುದಿಲ್ಲ.

*ನೀವು ಸಂಸತ್ತಿಗೆ ಪುನರಾಯ್ಕೆ ಆಗುವುದನ್ನುತಡೆಯಲು ರಾಷ್ಟ್ರಮಟ್ಟದಲ್ಲೂ ಪ್ರಯತ್ನ ನಡೆಯಿತೇ?

ಸಂಸತ್ತಿಗೆ ನಾನುಪುನರಾಯ್ಕೆ ಆಗುವುದು ಪ್ರಧಾನಿ ಮೋದಿಗೆ ಇಷ್ಟವಿರಲಿಲ್ಲ. ಅವರು ಸಂಸತ್ತಿನಲ್ಲಿ ಭಾಷಣ ಮಾಡುತ್ತ, ‘ಇದು ನಿಮ್ಮ ವಿದಾಯದ ಭಾಷಣವಾಗಲಿ. ಪುನರ್‌ ಆಯ್ಕೆ ಆಗುವುದಿಲ್ಲ’ ಎಂಬರ್ಥದಲ್ಲಿ ಮಾತನಾಡಿದ್ದರು. ನಾನು ನೇರ ಮತ್ತು ಸಮರ್ಥವಾಗಿ ಮಾತನಾಡುವುದು ಅವರಿಗೆ ಇಷ್ಟವಿರಲಿಲ್ಲ. ಈ ಕಾರಣಕ್ಕಾಗಿ ನನ್ನ ಮೇಲೆ ಅವರು ಕಣ್ಣಿಟ್ಟಿದ್ದರು. ಮೋದಿ, ಅಮಿತ್ ಶಾ, ಆರ್‌ಎಸ್‌ಎಸ್‌, ಬಿಜೆಪಿಯವರು ಸೇರಿಕೊಂಡು ನನ್ನನ್ನು ಸೋಲಿಸಲು ಎರಡು ವರ್ಷಗಳಿಂದ ವ್ಯವಸ್ಥಿತ ಪ್ರಯತ್ನ ನಡೆಸಿದರು. ಜಾತಿ, ಧರ್ಮದ ಹೆಸರಿನಲ್ಲಿ ಜನರಲ್ಲಿ ಒಡಕು ಮೂಡಿಸಿದರು. ನನ್ನ ಕುರಿತು ಅಪಪ್ರಚಾರ ಮಾಡಿದರು. ಜನರಿಗೆ ಇಲ್ಲಸಲ್ಲದ ಸಂಗತಿಗಳನ್ನು ಹೇಳಿ ದಿಕ್ಕು ತಪ್ಪಿಸಿದರು. ನನ್ನ ಕುರಿತ ಟೀಕೆಗೆ ಜನರಿಂದ ಪ್ರತಿಕ್ರಿಯೆ ಬಾರದಿದ್ದಾಗ, ದೇಶಭಕ್ತಿ ಮತ್ತು ಯುದ್ಧದ ಬಗ್ಗೆ ಮಾತನಾಡಿ, ಅವರನ್ನು ಭಾವೋದ್ವೇಗಗೊಳಿಸಿದರು.

* ಅಭಿವೃದ್ಧಿ ಮಾಡಿದರೂಏಕೆ ಗೆಲ್ಲಲು ಸಾಧ್ಯವಾಗಲಿಲ್ಲ?

ಅಭಿವೃದ್ಧಿ ವಿಷಯವೇ ಚುನಾವಣೆಯಲ್ಲಿ ಪ್ರಧಾನವಾಗಬೇಕಿತ್ತು. ಕ್ಷೇತ್ರವು ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿ ಕಂಡಿರುವ ಬಗ್ಗೆ ಚರ್ಚೆ ಆಗಬೇಕಿತ್ತು. ಕಣ್ಣಿಗೆ ಕಾಣುವಂತಹ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಮತ ನೀಡುವಂತೆ ಜನರಲ್ಲಿ ಕೋರಿದೆ. ಅವರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಯತ್ನಿಸಿದೆ. ನಿರಂತರ ಹೋರಾಟದ ಬಳಿಕ ಕ್ಷೇತ್ರ ಮತ್ತು ಜನರ ಅಭಿವೃದ್ಧಿ ಹಿತದೃಷ್ಟಿಯಿಂದ 371 (ಜೆ) ಅನುಷ್ಠಾನಕ್ಕೆ ಬಂತು. ಆದರೂ ಯಾಕೋ ಜನರು ಅವುಗಳತ್ತ ಹೆಚ್ಚು ಗಮನ ನೀಡಲಿಲ್ಲ. ಕಣ್ಣಿಗೆ ಕಾಣಸಿಗದ ಅಭಿವೃದ್ಧಿಯೇ ಮುಖ್ಯವಾಯಿತು. ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿಯತ್ತ ಜನರು ಒಮ್ಮೆ ಗಮನ ಹರಿಸಬೇಕಿತ್ತು. ಕೆಲಸಗಳನ್ನು ನೋಡಬೇಕಿತ್ತು.

*ಪ್ರಿಯಾಂಕ್ ಅವರು ಕೆಲವರ ಬಗ್ಗೆ ಹರಿತವಾಗಿ ಮಾತನಾಡಿದ್ದು ಮುಳುವಾಯಿತೇ?

ಪ್ರಿಯಾಂಕ್ ಖರ್ಗೆ ಅವರು ಕಿರಿಯರಾಗಿದ್ದು, ರಾಜಕೀಯ ಕ್ಷೇತ್ರದಲ್ಲಿ ಇನ್ನಷ್ಟು ಪಳಗಬೇಕಿದೆ. ಕೆಲ ಸಂದರ್ಭಗಳಲ್ಲಿ ಕೆಲವಷ್ಟು ವಿಷಯಗಳು ಪ್ರಸ್ತಾಪವಾದಾಗ ಅವರಿಗೆ ಸಹಜ ಸಿಟ್ಟು ಬರುತ್ತದೆ. ಕೆಲ ವೇಳೆ ಭಾವಪರವಶಗೊಂಡು ಮಾತನಾಡುತ್ತಾರೆ. ರಾಜಕೀಯದಲ್ಲಿ ಅನುಭವ ಹೆಚ್ಚಾದಂತೆ, ಅವರಲ್ಲಿ ಸುಧಾರಣೆ ಕಂಡು ಬರುತ್ತದೆ. ಪಕ್ಷದಲ್ಲಿನ ಹಿರಿಯ ಮುಖಂಡರು ಮಾರ್ಗದರ್ಶನ ಮಾಡುವರು. ಚುನಾವಣೆಯಲ್ಲಿ ಸೋಲು ಅನುಭವಿಸಲು ಇದೆಲ್ಲವೂ ಮೂಲ ಕಾರಣಗಳಾದವು ಎಂದು ನೇರವಾಗಿ ಹೇಳಲು ಆಗುವುದಿಲ್ಲ.

*ಚುನಾವಣೆ ಸಂದರ್ಭದಲ್ಲಿ ಪುತ್ರ ವ್ಯಾಮೋಹ ವಿಷಯವು ಹೆಚ್ಚು ಚರ್ಚೆಗೆ ಬಂತು..

ಪುತ್ರ ವ್ಯಾಮೋಹದ ಬಗ್ಗೆ ಚರ್ಚೆ ನಡೆದಿದ್ದು ನಿಜ. ಆದರೆ ಹಾಗಂತ ಆರೋಪಿಸಲು ಆರಂಭಿಸಿದವರೇ, ನಂತರದ ದಿನಗಳಲ್ಲಿ ಪ್ರತಿಪಾದಿಸತೊಡಗಿದರು. ಯಾರು ಆರೋಪಿಸಿದರು, ಯಾರು ಪ್ರತಿಪಾದಿಸಿದರು ಎಂಬುದು ಎಲ್ಲವೂ ಜನರಿಗೆ ಗೊತ್ತಿದೆ. ಜನರು ಜಾಣರಾಗಿದ್ದು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಾರೆ.ಈ ವಿಷಯದ ಬಗ್ಗೆ ನಾನು ಹೆಚ್ಚೇನೂ ಮಾತನಾಡಲು ಇಷ್ಟಪಡುವುದಿಲ್ಲ.

*ನಿಮ್ಮ ಮುಂದಿನ ರಾಜಕೀಯ ನಡೆ?

ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಭೇಟಿಯಾಗುವೆ. ಅವರೊಂದಿಗೆ ಚರ್ಚಿಸುವೆ. ಪಕ್ಷದ ಬಗ್ಗೆ ಮುನಿಸಿಕೊಂಡವರನ್ನು, ದೂರಗೊಂಡವರನ್ನು ಮತ್ತು ತಪ್ಪು ತಿಳಿವಳಿಕೆ ಹೊಂದಿರುವ ಕಾರ್ಯಕರ್ತರ ಮನವೊಲಿಸುವೆ.ಪಕ್ಷದ ವರಿಷ್ಠರ ನಿರ್ಣಯದಂತೆಯೇ ಮುಂದಿನಕಾರ್ಯತಂತ್ರ ರೂಪಿಸಿ, ರಾಜಕೀಯ ಹೋರಾಟ ಮುಂದುವರೆಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT