ಗುರುವಾರ , ಮಾರ್ಚ್ 30, 2023
24 °C
ಸಂಪರ್ಕ ಕಡಿದುಕೊಂಡ ಗ್ರಾಮಗಳು, ಕೊಚ್ಚಿ ಹೋದ ತೊಗರಿ ಬೆಳೆ

ಚಿತ್ತಾಪುರ: ಮುಂದುವರಿದ ವರುಣಾರ್ಭಟ, ಸೇತುವೆಗಳು ಮುಳುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ತಾಪುರ: ತಾಲ್ಲೂಕಿನಾದ್ಯಂತ ಸೋಮವಾರ ಮತ್ತು ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆ ಹಾಗೂ ಕಾಗಿಣಾ ನದಿ, ಬೆಣ್ಣೆತೊರಾ ನದಿ, ವಿವಿಧ ಹಳ್ಳಗಳು ಭಾರಿ ಪ್ರವಾಹದಿಂದ ತುಂಬಿ ಉಕ್ಕಿ ಹರಿಯುತ್ತಿವೆ.

ಅನೇಕ ಸೇತುವೆಗಳು ಮುಳುಗಡೆಯಾಗಿ ಬುಧವಾರವೂ ಅನೇಕ ಗ್ರಾಮಗಳು ಪರಸ್ಪರ ಸಂಪರ್ಕ ಕಡಿದುಕೊಂಡಿವೆ. ಮಳೆ ನೀರು ಮತ್ತು ಪ್ರವಾಹದ ನೀರು ಮನೆಗಳಿಗೆ ನುಗ್ಗಿ ಜನರು ತೊಂದರೆ ಅನುಭವಿಸಿದ್ದಾರೆ. ಮನೆಯಲ್ಲಿನ ಧವಸದಾನ್ಯ, ಜೀವನಾವಶ್ಯಕ ವಸ್ತುಗಳು, ಬಟ್ಟೆ, ಮನೆ, ಜಮೀನು ಮತ್ತು ವಿವಿಧ ದಾಖಲೆಪತ್ರಗಳು ನೀರಲ್ಲಿ ಮುಳುಗಿ ಜನರ ಬದುಕು ಅತಂತ್ರಗೊಂಡಿದೆ.

ನದಿಗಳು, ಹಳ್ಳಗಳು ಪ್ರವಾಹದಿಂದ ತುಂಬಿ ಹರಿಯುತ್ತಾ ಪಕ್ಕದ ಹೊಲಗಳಿಗೆ ನೀರು ನುಗ್ಗಿದ್ದರಿಂದ ಪ್ರವಾಹದ ರಭಸಕ್ಕೆ ತೊಗರಿ, ಸಜ್ಜೆ, ಸೂರ್ಯಕಾಂತಿ, ಕಬ್ಬು, ಹತ್ತಿ ಬೆಳೆಗಳು ಕೊಚ್ಚಿ ಹೋಗಿದೆ. ಬೆಳೆಗಳಲ್ಲಿ ನೀರು ನಿಂತು ಬೆಳೆ ಹಾನಿಯಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ತಾಲ್ಲೂಕಿನ ದಂಡೋತಿ ಗ್ರಾಮದ ಹತ್ತಿರ ಹರಿಯುತ್ತಿರುವ ಕಾಗಿಣಾ ನದಿಯಲ್ಲಿ ಮಂಗಳವಾರ ರಾತ್ರಿ ಪ್ರವಾಹ ಉಕ್ಕಿ ಬಂದು ಸೇತುವೆಯು ಪ್ರವಾಹದ ನೀರಲ್ಲಿ ಮುಳಗಡೆಯಾಗಿ ಬುಧವಾರ ದಂಡೋತಿ-ಚಿತ್ತಾಪುರ ಮಾರ್ಗದ ಸಂಚಾರ ಬಂದ್ ಆಗಿದೆ. ತಾಲ್ಲೂಕಿನ ಇವಣಿ-ಬೆಳಗುಂಪಾ, ಹಲಕರ್ಟಿ-ದೇವಾಪುರ ತಾಂಡಾ, ವಾಡಿ-ಕೊಂಚೂರ, ವಾಡಿ-ಬಳವಡಗಿ, ಇಂಗಳಗಿ-ಶಹಾಬಾದ್, ಕುಂದನೂರ-ಹೊನಗುಂಟಾ ಗ್ರಾಮಗಳಿಗೆ ಮತ್ತು ಪಟ್ಟಣ, ನಗರಗಳಿಗೆ ಸಂಪರ್ಕಿಸುವ ಸೇತುವೆಗಳು ಪ್ರವಾಹ ನೀರಲ್ಲಿ ಮುಳುಗಡೆಯಾಗಿ ಪರಸ್ಪರ ಸಂಪರ್ಕ ಕಡಿದುಕೊಂಡಿವೆ ಎಂದು ತಹಶೀಲ್ದಾರ್ ಉಮಾಕಾಂತ ಹಳ್ಳೆ ಅವರು ತಿಳಿಸಿದ್ದಾರೆ.

ಚಿತ್ತಾಪುರ ಪಟ್ಟಣ, ಗುಂಡಗುರ್ತಿ, ಗುಂಡಗುರ್ತಿ ತಾಂಡಾ, ಹಲಕರ್ಟಿ, ಕೊಂಚೂರ, ಬಳವಡಗಿ ಗ್ರಾಮಗಳಲ್ಲಿ ಹಾಗೂ ವಾಡಿ ಪಟ್ಟಣದಲ್ಲಿ ಜನರ ಮನೆಗಳಿಗೆ ಮಳೆ ಮತ್ತು ಪ್ರವಾಹ ನೀರು ನುಗ್ಗಿ ಜನರಿಗೆ ತೊಂದರೆಯಾಗಿದೆ. ಪ್ರವಾಹ ಸಂತ್ರಸ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಜನಜಾನುವಾರು ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಕೃಷಿ ಚಟುವಟಿಕೆ ಸ್ಥಗಿತ: ಅತಿವೃಷ್ಟಿ ಮತ್ತು ಪ್ರವಾಹದಿಂದ ತಾಲ್ಲೂಕಿನಾದ್ಯಂತ ಕಳೆದ ನಾಲ್ಕೈದು ದಿನಗಳಿಂದ ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿವೆ. ಕೃಷಿಕೂಲಿ ಕೆಲಸ ಅವಲಂಭಿಸಿದ ಕಾರ್ಮಿಕರ ಜೀವನ ಕಷ್ಟಕ್ಕೆ ಗುರಿಯಾಗಿದೆ.

ಕೈಕೊಟ್ಟ ವಿದ್ಯುತ್: ಮಂಗಳವಾರ ರಾತ್ರಿಯಿಂದ ಅನೇಕ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡು ಜನರು ಕತ್ತಲಿನಲ್ಲಿ ಪಡಬಾರದ ಕಷ್ಟ ಪಡುವಂತೆ ಆಯಿತು. ಹೊರಗೆ ಮಳೆ, ಮನೆ ಒಳಗೆ ಸೊಳ್ಳೆಗಳ ಕಾಟದಿಂದ ಜನರು ನಿದ್ದೆ ಮಾಡಲಾಗದೆ ಪರದಾಡಿದರು. ಬುಧವಾರ ವಿದ್ಯುತ್ ಇಲ್ಲದೆ ಜನರು ತೊಂದರೆ ಅನುಭವಿಸಿದರು.

ಹಾಳಾದ ರಸ್ತೆಗಳು: ಮಳೆ ನೀರು ಮತ್ತು ಹಳ್ಳಗಳ ಪ್ರವಾಹದ ನೀರು ರಸ್ತೆಯ ಮೇಲೆ ಹರಿದು ಡಾಂಬರ್ ರಸ್ತೆಗಳು ಹಾಳಾಗಿವೆ. ಗುಂಡಗುರ್ತಿ-ಭಾಗೋಡಿ ರಸ್ತೆ, ಭಾಗೋಡಿ-ಚಿತ್ತಾಪುರ ರಸ್ತೆ, ನಾಗಾವಿ ಹತ್ತಿರದಲ್ಲಿ ಅಲ್ಲಲ್ಲಿ ರಸ್ತೆ ನೀರಿಗೆ ಕೊಚ್ಚಿ ಹೋಗಿ ಹಾಳಾಗಿದೆ. ಬಾಂದಾರ ಸೇತುವೆ ಮುಳುಗಡೆ: ಕಾಗಿಣಾ ನದಿಯಲ್ಲಿ ಮಂಗಳವಾರ ರಾತ್ರಿ ಪ್ರವಾಹ ಬಂದಿದ್ದರಿಂದ ನದಿಗೆ ಕಟ್ಟಿರುವ ಮುಡಬೂಳ, ಮುತ್ತಗಾ, ಶಂಕರವಾಡಿ, ಇಂಗಳಗಿ, ಗೋಳಾ ಬಾಂದಾರ ಸೇತುವೆಗಳು ಪ್ರವಾಹದಲ್ಲಿ ಮುಳುಗಡೆಯಾಗಿವೆ.

ಮಳೆ ವಿವರ: ಚಿತ್ತಾಪುರದಲ್ಲಿ 71.2 ಮಿ.ಮೀ, ಅಳ್ಳೊಳ್ಳಿ-40.6 ಮಿ.ಮೀ ಮತ್ತು ನಾಲವಾರದಲ್ಲಿ 28.6 ಮಿ.ಮೀ ಮಳೆಯಾಗಿದೆ.

***

ಭಾರಿ ಮಳೆ ಮತ್ತು ಪ್ರವಾಹದಿಂದ ರೈತರ ಜಮೀನುಗಳಲ್ಲಿ ಶೇ.35 ರಷ್ಟು ಬೆಳೆ ಹಾನಿಯಾಗಿದೆ. ಹಾನಿಯ ಪ್ರಮಾಣದ ಸಮೀಕ್ಷೆ ನಡೆಯುತ್ತಿದೆ

- ಉಮಾಕಾಂತ ಹಳ್ಳೆ, ತಹಶೀಲ್ದಾರ್ ಚಿತ್ತಾಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು