ಭಾನುವಾರ, ಸೆಪ್ಟೆಂಬರ್ 19, 2021
24 °C
ದೀಕ್ಷ ಲಿಂಗಾಯತ ಪಂಚಮಸಾಲಿ ಸಮಾಜದ ಸಮಾವೇಶದಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ

‘ಮೀಸಲಾತಿ ಪಡೆಯುವವರೆಗೂ ಹೋರಾಟ ನಿಲ್ಲದು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಲಿಂಗಾಯತ ಸಮುದಾಯದ ದೀಕ್ಷ ಪಂಚಮಸಾಲಿ, ಪಂಚಮಸಾಲಿ ಗೌಡ ಲಿಂಗಾಯತ, ಮಲೇಗೌಡ ಉಪ ಪಂಗಡಗಳಿಗೆ ರಾಜ್ಯ ಸರ್ಕಾರ 2ಎ ಮೀಸಲಾತಿ ಹಾಗೂ ಕೇಂದ್ರ ಸರ್ಕಾರ ಓಬಿಸಿ ಪಟ್ಟಿಗೆ ಸೇರಿಸುವವರೆಗೂ ಹೋರಾಟ ನಿಲ್ಲುವುದಿಲ್ಲ’ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧಿಪತಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಘೋಷಿಸಿದರು.

ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ದೀಕ್ಷ ಪಂಚಮಸಾಲಿ ಲಿಂಗಾಯತ ಸಮಾಜದಿಂದ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ವಿವಿಧ ಹೆಸರಿನಿಂದ ಕರೆಸಿಕೊಳ್ಳುವ ಪಂಚಮಸಾಲಿ ಸಮುದಾಯದ 1.40 ಕೋಟಿ ಜನಸಂಖ್ಯೆ ಇದೆ. ಈ ಸಮುದಾಯದ ಕಸುಬು ಒಕ್ಕಲುತನವಾಗಿದೆ’ ಎಂದರು.

‘ಕೃಷಿ ಕಾರ್ಮಿಕರು ನಮ್ಮ‌ ಭಾಗವಾಗಿದ್ದು, ಅವರಿಗೆ ಅನ್ನ ಕೊಡುವವರು ಪಂಚಮಸಾಲಿಗಳು. ರೈತ ಮಕ್ಕಳಿಗೆ ಮೀಸಲಾತಿ ಸಿಗಬೇಕು ಎಂಬುದು ನಮ್ಮ ಹೋರಾಟ ಗುರಿ.‌ ಇದು ಶತಮಾನದ ದೊಡ್ಡ ಚಳವಳಿಯಾಗಿದೆ. ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಹಕ್ಕೊತ್ತಾಯ ಮಂಡಿಸಲು ರಾಜ್ಯದಾದ್ಯಂತ ಪಾದಯಾತ್ರೆ ಮಾಡಿದ್ದೆವು’ ಎಂದು ಅವರು ತಿಳಿಸಿದರು.

‘ಈ ಬಗ್ಗೆ ಕ್ರಮ ಕೈಗೊಳ್ಳಲು 6 ತಿಂಗಳ ಕಾಲಾವಕಾಶ ಕೋರಿದ್ದರು. ಅದು ಸೆಪ್ಟೆಂಬರ್ 15ಕ್ಕೆ ಮುಕ್ತಾಯವಾಗಲಿದೆ. ರಾಜಕೀಯ ವಿಪ್ಲವದಿಂದಾಗಿ ಮುಖ್ಯಮಂತ್ರಿ ಬದಲಾವಣೆಯಾಗಿದ್ದು, ಇದೇ ಬೇಡಿಕೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಎದುರು ಮಂಡಿಸುತ್ತೇವೆ’ ಎಂದರು.

‘ನಮ್ಮವರಿಗಾಗಿ ಹೋರಾಟ ನಡೆಸಲು ಸಜ್ಜಾಗಬೇಕು. ಬಹುಸಂಖ್ಯಾತರು ಒಗ್ಗಟ್ಟಾಗಿ ಇದ್ದರೆ ಮುಖ್ಯವಾಹಿನಿಗೆ ಬರುತ್ತೇವೆ. ಸವಲತ್ತುಗಳು ಸಿಗಲಿವೆ. ಇದೆಲ್ಲ ಸಾಧ್ಯವಾಗಬೇಕಾದರೆ ನಮ್ಮ ಕೂಗು ಸರ್ಕಾರವನ್ನು ಮುಟ್ಟಬೇಕು’ ಎಂದು ಹೇಳಿದರು.

ಅಖಿಲ ಭಾರತ ಪಂಚಮಸಾಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ‘ಬಸವ ಜಯಮೃತ್ಯುಂಜಯ ಶ್ರೀಗಳು ಸಮಾಜದ ಹಿತಕ್ಕಾಗಿ 712 ಕಿ.ಮೀ. ಪಾದಯಾತ್ರೆ ಮಾಡಿ ಅಂದಿನ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಹಕ್ಕೊತ್ತಾಯ ಮಂಡಿಸಿದ್ದರು. ಅವರ ಜೊತೆಗೆ ಎಲ್ಲರೂ ಪಕ್ಷಭೇದ ಮರೆತು ನಿಲ್ಲಬೇಕಿದೆ’ ಎಂದರು.

ಸಮಾಜದ ಮುಖಂಡ, ಮಾಜಿ ಶಾಸಕ ಬಿ.ಆರ್. ಪಾಟೀಲ ಮಾತನಾಡಿ, ‘ಪಂಚಮಸಾಲಿ ಸಮುದಾಯದವರು ಒಕ್ಕಲುತನ ಮಾಡಿಕೊಂಡೇ ಜೀವನ ಸಾಗಿಸುತ್ತಾರೆ. ದೇಶದಲ್ಲಿ ಕೃಷಿ ಸಂಬಂಧಿ ಸರ್ಕಾರದ ತಪ್ಪು ನಿರ್ಧಾರಗಳಿಂದ 5 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ, ಅವರಿಗೆ ಅಗತ್ಯ ನೆರವು ಕೊಡಿಸುವ ಬೇಡಿಕೆಯನ್ನೂ ಸರ್ಕಾರದ ಮುಂದೆ ಇಡಬೇಕು’ ಎಂದರು.

ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ ಕೊಡಲ ಹಂಗರಗಾ ಮಾತನಾಡಿ, ‘ಜಿಲ್ಲೆಯಲ್ಲಿ ದೀಕ್ಷ ಪಂಚಮಸಾಲಿ ಸಮಾಜದ ಬಲವನ್ನು ಇನ್ನಷ್ಟು ವೃದ್ಧಿಸಬೇಕಾಗಿದ್ದು, ತಾಲ್ಲೂಕು, ಗ್ರಾಮೀಣ ಹಾಗೂ ಮಹಾನಗರದ ವಾರ್ಡ್‌ ಮಟ್ಟದ ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಕು’ ಎಂದು ಸಲಹೆ ನೀಡಿದರು.

ಸಮಾವೇಶದಲ್ಲಿ ಪಂಚ ಸೇನಾ ಅಧ್ಯಕ್ಷ ಬಿ.ಎಸ್‌. ಪಾಟೀಲ ನಾಗರಾಳ ಹುಲಿ, ಮಲ್ಲಿಕಾರ್ಜುನ ಹಿರೇಕೊಪ್ಪ, ಎಂ.ಎಸ್, ರುದ್ರಗೌಡ್ರ, ನಟರಾಜ, ಶಿವಪುತ್ರ ಮಲ್ಲೆವಾಡ, ಚನ್ನಬಸಪ್ಪಗೌಡ ಬಿರಾದಾರ, ಗುರುಶರಣಪ್ಪ ಖೇಡ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಅಧ್ಯಕ್ಷ ಶರಣಕುಮಾರ ಮೋದಿ, ಕಲ್ಯಾಣಪ್ಪ ಪಾಟೀಲ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಜಕುಮಾರ ಕಡಗಂಚಿ ಇತರರು ಭಾಗವಹಿಸಿದ್ದರು.

ಇತ್ತೀಚೆಗೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಯ್ಕೆಯಾದ ಶಂಭಲಿಂಗ ಬಳಬಟ್ಟಿ ಅವರನ್ನು ಶ್ರೀಗಳು ಸನ್ಮಾನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು