ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ: ಎಂಎಸ್‌ಪಿ, ಬೆಳೆ–ಜಲ ನೀತಿ ಜಾರಿಗೆ ಆಗ್ರಹ

ಕೇಂದ್ರ ಸರ್ಕಾರದ ಕೃಷಿ ನೀತಿಗಳ ವಿರುದ್ಧ ಎಐಕೆಎಸ್‌ ಮುಖಂಡರ ವಾಗ್ದಾಳಿ
Published 30 ಜೂನ್ 2024, 13:10 IST
Last Updated 30 ಜೂನ್ 2024, 13:10 IST
ಅಕ್ಷರ ಗಾತ್ರ

ಕಲಬುರಗಿ: ‘ಡಾ. ಎಂ.ಎಸ್‌.ಸ್ವಾಮಿನಾಥನ್‌ ಸಮಿತಿ ವರದಿಯನ್ವಯ ರೈತರು ಬೆಳೆಯುವ ಎಲ್ಲ ಬೆಳೆಗಳಿಗೆ ಎಂಎಸ್‌ಪಿ ಜಾರಿಗೊಳಿಸಬೇಕು. ದೇಶದ ನೀರಾವರಿ ಪ್ರದೇಶಗಳಲ್ಲಿ ಜಲನೀತಿ, ಬೆಳೆನೀತಿ ಜಾರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮವಹಿಸಬೇಕು’ ಎಂದು ಅಖಿಲ ಭಾರತ ಕಿಸಾನ್‌ ಸಭಾ(ಎಐಕೆಎಸ್) ರಾಜ್ಯ ಘಟಕದ ಅಧ್ಯಕ್ಷ ಸಿದ್ದನಗೌಡ ಪಾಟೀಲ ಆಗ್ರಹಿಸಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಕೇಂದ್ರ ಸರ್ಕಾರ ಕೃಷಿ ವಿರೋಧಿ ಹಾಗೂ ಕಾರ್ಪೊರೇಟ್‌ ಪರ ನೀತಿಗಳನ್ನು ಕೈಗೊಳ್ಳುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.

‘ಕೇಂದ್ರ ಸರ್ಕಾರ 23 ಬೆಳೆಗಳಿಗೆ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆಯು(ಎಂಎಸ್‌ಪಿ) ರೈತರ ಕಣ್ಣೊರೆಸುವ ತಂತ್ರ. ಕೇಂದ್ರ ಸರ್ಕಾರ ಕಾರ್ಪೊರೇಟ್‌ ಪರ ನೀತಿ ಕೈಬಿಡಬೇಕು. ಎಂ.ಎಸ್‌.ಸ್ವಾಮಿನಾಥನ್‌ ಸಮಿತಿ ವರದಿಯ ಮೂಲ ಅಂಶಗಳ ಆಧಾರದಲ್ಲಿ ವೈಜ್ಞಾನಿಕ ದರ ಒಳಗೊಂಡ ಎಂಎಸ್‌ಪಿ ಘೋಷಿಸಬೇಕು.‌ ಅದಕ್ಕೂ ಮುಂಚೆ ದೇಶದ ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಕೃಷಿ ತಜ್ಞರೊಂದಿಗೆ ಚರ್ಚಿಸಬೇಕು’ ಎಂದು ಒತ್ತಾಯಿಸಿದರು.

‘ಉತ್ತರ ಕರ್ನಾಟಕ ಭಾಗದಲ್ಲಿ ಭೂಮಿಯ ಸವಳು–ಜವಳಿನ ಸಮಸ್ಯೆ ಹೆಚ್ಚುತ್ತಿದೆ. ಈ ಬಗ್ಗೆ ಗಂಭೀರ ಚರ್ಚೆಗಳು, ಚಿಂತನೆಗಳು ನಡೆಯಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಬೆಳೆ ನೀತಿ ಹಾಗೂ ಜಲ ನೀತಿ ಜಾರಿಗೆ ತರಬೇಕು. ಇಲ್ಲದಿದ್ದರೆ, ಮುಂದಿನ ಕೆಲವೇ ವರ್ಷಗಳಲ್ಲಿ ಈ ಭಾಗದ ಮಣ್ಣು ತನ್ನ ಸತ್ವವನ್ನು ಕಳೆದುಕೊಂಡು ಬರಡಾಗುವ ಅಪಾಯವಿದೆ’ ಎಂದು ಎಚ್ಚರಿಸಿದರು.

‘ನೀರಾವರಿ ಪ್ರದೇಶದ ಶೇ 40ರಷ್ಟು ಭೂ ಭಾಗದ ಮಣ್ಣಿನ ಗುಣಮಟ್ಟವು ಈಗಾಗಲೇ ಅನುಪಯುಕ್ತವಾಗುತ್ತ ಹೊರಳಿದೆ. ಅವೈಜ್ಞಾನಿಕವಾದ ನೀರಾವರಿ ನೀತಿ ಇದಕ್ಕೆ ಕಾರಣ. ಉತ್ತರ ಕರ್ನಾಟಕ ಭಾಗದಲ್ಲಿ ಇದೀಗ ಸಕ್ಕರೆ ಮಾಫಿಯಾ ಮಿತಿ ಮೀರಿದ್ದು, ಕಬ್ಬು ಬೆಳೆಯುವಂತೆ ಪರೋಕ್ಷವಾಗಿ ಒತ್ತಡ ಹಾಕಲಾಗುತ್ತಿದೆ. ಜೋಳ, ಸಜ್ಜೆ, ತೋಟಗಾರಿಕೆ ಬೆಳೆ ಬೆಳೆಯುವಂಥ ಪ್ರದೇಶಗಳಲ್ಲೀಗ ಕಬ್ಬು ವ್ಯಾಪಕವಾಗಿ ಆವರಿಸಿದೆ. ಕೇವಲ ಕೈಗಾರಿಕೋದ್ಯಮಿಗಳಿಗೆ ಪೂರಕವಾಗಿ ಕೃಷಿ ಮಾಡುತ್ತ ಹೋದರೆ, ಭವಿಷ್ಯದಲ್ಲಿ ಕೃಷಿ ನಾಶವಾಗುತ್ತದೆ. ದೇಶದ ಕೃಷಿಕರೂ ಅಪಾಯಕ್ಕೆ ಒಳಗಾಗುತ್ತಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಪೆಟ್ರೋಲ್‌–ಡೀಸೆಲ್‌ ದರಗಳ ಹಿಂದೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಹೊಣೆಯಿದೆ. ಎರಡೂ ಸರ್ಕಾರಗಳು ತಮ್ಮ ತೆರಿಗೆ ತಗ್ಗಿಸಬೇಕು. ಕೃಷಿ ಉದ್ದೇಶಕ್ಕೆ ಬಳಸುವ ಡೀಸೆಲ್‌ಗೆ ಸರ್ಕಾರ ಸಬ್ಸಿಡಿ ಕೊಡಬೇಕು. ಜೊತೆಗೆ ಕಾರ್ಪೊರೇಟ್‌ ಕಂಪನಿಗಳ ಪರವಾದ ಮೂರು ಕೃಷಿ ಕಾಯ್ದೆಗಳನ್ನು ಸಂಪೂರ್ಣವಾಗಿ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಐಕೆಎಸ್‌ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ ಸೇರಿದಂತೆ ಕೆಲ ಮುಖಂಡರು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ಉತ್ತಮ ಮಳೆಯಾದರೂ ಕೆಲವು ಬೆಳೆಗಳು ಒಣಗುತ್ತಿವೆ. ಅದಕ್ಕೆ ಕೃಷಿ ತಜ್ಞರು ಜಮೀನಿಗೆ ಇಳಿದು ಅದನ್ನು ಪರೀಕ್ಷಿಸಿ ಕಾರಣಗಳನ್ನು ಗುರುತಿಸಿ ವೈಜ್ಞಾನಿಕವಾಗಿ ಸಲಹೆ ನೀಡಬೇಕು
-ಮೌಲಾ ಮುಲ್ಲಾ ಜಿಲ್ಲಾ ಘಟಕದ ಅಧ್ಯಕ್ಷ ಎಐಕೆಎಸ್‌
ಬಿಜೆಪಿ ಅವಧಿಯಲ್ಲಿ ಜಾರಿಗೊಳಿಸಿದ ಕರಾಳ ಮೂರು ಕೃಷಿ ಕಾಯ್ದೆಗಳನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಕೂಡಲೇ ಹಿಂಪಡೆಯಬೇಕು
-ಕೆ.ಜನಾರ್ಧನ ರಾಜ್ಯ ಕಾರ್ಯದರ್ಶಿ ಎಐಕೆಎಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT