ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಲೆ: ಇಬ್ಬರು ಆರೋಪಿಗಳ ಬಂಧನ

ಮಗಳು ಕೊಡಲು ನಿರಾಕರಿಸಿದ ತಾಯಿ ಯುವಕನ ಕೊಲೆಗೆ ಸುಪಾರಿ: ಆರೋಪ
Published 10 ಜುಲೈ 2024, 16:28 IST
Last Updated 10 ಜುಲೈ 2024, 16:28 IST
ಅಕ್ಷರ ಗಾತ್ರ

ಕಲಬುರಗಿ: ಶಹಾಬಾದ್ ರಸ್ತೆ ಸಮೀಪದಲ್ಲಿ ಯುವಕನನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ ಆರೋಪದಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ವಿಶ್ವವಿದ್ಯಾಲಯ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಆಳಂದ ತಾಲ್ಲೂಕಿನ ಬಮ್ಮನಳ್ಳಿ ಮೂಲದ ಓಜಾ ಲೇಔಟ್‌ ನಿವಾಸಿ ಪ್ರವೀಣ್ ಶಿವಪ್ಪ (18) ಕೊಲೆಯಾದವರು. ಕುಸನೂರಿನ ಮಲ್ಲಿಕಾರ್ಜುನ ಭೀಮಾಶಂಕರ (23) ಮತ್ತು ಶಾರುಖಾನ್ ರುಕ್ಕುಮೊದ್ದೀನ್ ಅವರನ್ನು ಬಂಧಿಸಲಾಗಿದ್ದು, ನೀಲಮ್ಮ ಶ್ರೀಶೈಲ್ ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರವೀಣ್ ಮತ್ತು ಆತನ ಸಂಬಂಧಿಯೊಬ್ಬರ ಮಗಳು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಅದಕ್ಕೆ ಯುವತಿಯ ಕುಟುಂಬಸ್ಥರು ತೀವ್ರವಾಗಿ ವಿರೋಧಿಸಿದ್ದರು. ಎರಡು ತಿಂಗಳ ಹಿಂದೆಯೇ ಯುವತಿಯ ಪೋಷಕರು ಪ್ರವೀಣ್ ಅವರನ್ನು ತಮ್ಮ ಮನೆಗೆ ಕರೆದು, ಮಗಳ ತಂಟೆಗೆ ಬಾರದಂತೆ ಎಚ್ಚರಿಕೆ ಕೊಟ್ಟಿದ್ದರು. ಜತೆಗೆ ಜೀವ ಬೆದರಿಕೆಯೂ ಹಾಕಿದ್ದರು ಎಂದು ಪ್ರವೀಣ್ ಅವರ ತಾಯಿ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಹೇಳಿದ್ದಾರೆ.

ತನ್ನ ಪೋಷಕರ ಕಿವಿ ಮಾತನು ದಿಕ್ಕರಿಸಿದ ಪ್ರವೀಣ್, ಯುವತಿಯನ್ನೇ ಮದುವೆ ಆಗುವುದಾಗಿ ಹಠ ಹಿಡಿದಿದ್ದ. ಮಗನ ಒತ್ತಡಕ್ಕೆ ಮಣಿದ ಪ್ರವೀಣ್ ತಂದೆ, ಸೋಮವಾರ (ಜುಲೈ 9) ಯುವತಿಯ ಮನೆಗೆ ಹೋಗಿ ಮದುವೆ ವಿಷಯ ಪ್ರಸ್ತಾಪಿಸಿದ್ದರು. ಮಗಳು ಕೊಡಲು ನಿರಾಕರಿಸಿದ ಯುವತಿಯ ತಾಯಿ, ಪ್ರವೀಣ್‌ಗೆ ಒಂದು ಗತಿ ಕಾಣಿಸುತ್ತೇವೆ ಎಂದು ಬೆದರಿಕೆ ಹಾಕಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಪ್ರವೀಣ್ ತಂದೆ ಸಂಜೆ ಮನೆಗೆ ವಾಪಸ್ ಬಂದು ಪತ್ನಿಯ ಬಳಿ ನಡೆದ ವಿಚಾರ ಹೇಳಿದ. ಮಗನ ಪೋನ್ ನಂಬರ್‌ ಸ್ವಿಚ್ ಆಫ್ ಆಗಿತ್ತು. ಸೋಮವಾರ ರಾತ್ರಿ ಪರಿಚಯಸ್ಥರು ಯುವಕನ ಶವದ ಫೋಟೊ ತೋರಿಸುತ್ತಿದ್ದಂತೆ ಕೊಲೆಯಾಗಿದ್ದು ಗೊತ್ತಾಯಿತು. ಯುವತಿಯನ್ನು ಪ್ರೀತಿಸಿದಕ್ಕೆ ಮಲ್ಲಿಕಾರ್ಜುನ ಮತ್ತು ಶಾರುಖಾನ್ ಸೇರಿ ಕೊಲೆ ಮಾಡಿದ್ದಾರೆ. ನೀಲಮ್ಮ ಅವರು ಕೊಲೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಗಳ ವಿರುದ್ಧ ಬಿಎನ್‌ಎಸ್‌ ಸೆಕ್ಷನ್ 103(1), 49 ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಮಲ್ಲಿಕಾರ್ಜುನ
ಮಲ್ಲಿಕಾರ್ಜುನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT