ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಂಥಾಲಯ ಮಹತ್ವ ತಿಳಿಸಲು ಅಭಿಯಾನ ನಡೆಸಿ: ಭಂವರ್ ಸಿಂಗ್ ಮೀನಾ

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಸಮಾರೋಪ
Published 20 ನವೆಂಬರ್ 2023, 15:59 IST
Last Updated 20 ನವೆಂಬರ್ 2023, 15:59 IST
ಅಕ್ಷರ ಗಾತ್ರ

ಕಲಬುರಗಿ: ‘ಗ್ರಾಮೀಣ ಭಾಗದ ಜನರಿಗೆ ಗ್ರಂಥಾಲಯದ ಮಹತ್ವದ ಬಗ್ಗೆ ತಿಳಿಹೇಳಲು ಪ್ರತಿ ತಿಂಗಳು ವಿವಿಧ ಪ್ರಕಾರದ ಅಭಿಯಾನಗಳನ್ನು ಹಮ್ಮಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಸೂಚಿಸಿದರು.

ನಗರದ ಹಳೆಯ ಜಿ.ಪಂ ಸಭಾಂಗಣದಲ್ಲಿ ಸೋಮವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 2023ನೇ ಸಾಲಿನ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಮಾರೋಪ ಹಾಗೂ ಉತ್ತಮ ಸೇವೆ ಸಲ್ಲಿಸಿದ ಗ್ರಂಥಾಲಯ ಮೇಲ್ವಿಚಾರಕರಿಗೆ, ಸಿಬ್ಬಂದಿಗೆ ಉತ್ತಮ ಸೇವಾ ಪ್ರಶಸ್ತಿ ಪತ್ರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಜಿಲ್ಲೆಯ ಎಲ್ಲ ಮೇಲ್ವಿಚಾರಕರು ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ಶಾಲಾ ಮಕ್ಕಳನ್ನು ಗ್ರಂಥಾಲಯಕ್ಕೆ ಕರೆದುಕೊಂಡು ಬಂದು ಅವರಿಗೆ ವಿವಿಧ ಆಟಿಕೆಗಳನ್ನು ನೀಡಬೇಕು. ಅದರ ಜೊತೆಗೆ ಕಥೆ ಹೇಳುವುದು, ಚಿತ್ರಬಿಡಿಸುವ ಸ್ಪರ್ಧೆ, ಪ್ರಬಂಧ, ಭಾಷಣ ಸ್ಪರ್ಧೆ, ಭಾವಗೀತೆ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಗ್ರಂಥಾಲಯದ ಕಡೆಗೆ ಸೆಳೆಯಬೇಕು’ ಎಂದರು.

ನಂತರ ಮೇಲ್ವಿಚಾರಕರ ಕುಂದುಕೊರತೆಗಳನ್ನು ಆಲಿಸಿದ ಸಿಇಒ, ಸ್ಥಳದಲ್ಲಿದ್ದ ಅಧಿಕಾರಿಗಳಿಂದ ಮಾಹಿತಿ ಪಡೆದು ಅದಕ್ಕೆ ಶೀಘ್ರದಲ್ಲಿ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದರು.

‘ಮೇಲ್ವಿಚಾರಕರಿಗೆ ಯಾವುದೇ ತೊಂದರೆಗಳಿದ್ದರೆ, ಸಂಬಳ ಸರಿಯಾಗಿ ಪಾವತಿ ಮಾಡದೇ ಇದ್ದಲ್ಲಿ, ದಿನಪತ್ರಿಕೆ ಮತ್ತು ನಿಯತಕಾಲಿಕೆಗಳ ಬಿಲ್ ಪಾವತಿಗಳ ಕುರಿತಂತೆ ಯಾವುದೇ ದೂರುಗಳಿದ್ದರೆ ಲಿಖಿತ ರೂಪದಲ್ಲಿ ಸಲ್ಲಿಸಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಸಂಗ್ರಹವಾಗುವ ಗ್ರಂಥಾಲಯ ಕರವನ್ನು ಸಂಪೂರ್ಣವಾಗಿ ಗ್ರಂಥಾಲಯಗಳ ಅಭಿವೃದ್ಧಿಗೆ ಮಾತ್ರ ಬಳಸಬೇಕು’ ಎಂದು ನಿರ್ದೇಶಿಸಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಗ್ರಂಥಪಾಲಕ ಸುರೇಶ ಜಂಗೆ ಅವರು ಗ್ರಂಥಾಲಯ ಸಪ್ತಾಹ ಆಚರಣೆ ಮತ್ತು ಗ್ರಂಥಾಲಯಗಳ ಮಹತ್ವದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಜಿಲ್ಲೆಯ 11 ಗ್ರಂಥಾಲಯ ಮೇಲ್ವಿಚಾರಕರಿಗೆ ಉತ್ತಮ ಸೇವಾ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು. ನಾಲ್ಕು ಗ್ರಾ.ಪಂ ಗ್ರಂಥಾಲಯ ಮತ್ತು ಅರಿವು ಕೇಂದ್ರಗಳಿಗೆ ಶಿಕ್ಷಣ ಫೌಂಡೇಷನ್‌ ಸಂಯೋಜಕ ಸಿದ್ದಯ್ಯಸ್ವಾಮಿ ಅವರು ಸಿಇಒ ಅವರ ಮೂಲಕ ಸ್ಮಾರ್ಟ್‌ಫೋನ್‍ಗಳನ್ನು ವಿತರಿಸಿದರು.

ಜಿಲ್ಲಾ ಕೇಂದ್ರ ಗ್ರಂಥಾಲಯ ಸಹಾಯಕ ವಿಜಯಕುಮಾರ ಎಸ್.ಬಾಬನಕರ ನಿರೂಪಿಸಿದರು. ಸಹ ಗ್ರಂಥಪಾಲಕ ಅನಿಲಕುಮಾರ್ ಎಂ.ಬಿರಾದಾರ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT