ಶನಿವಾರ, ಅಕ್ಟೋಬರ್ 19, 2019
27 °C
ಸೇವಾ ನ್ಯೂನತೆಗಾಗಿ ಜಿಲ್ಲಾ ಗ್ರಾಹಕ ವೇದಿಕೆಯಿಂದ ಆದೇಶ

ಸಾರಿಗೆ ಸಂಸ್ಥೆಗೆ ₹ 10 ಸಾವಿರ ದಂಡ

Published:
Updated:

ಕಲಬುರ್ಗಿ: ಪ್ರಯಾಣಿಕರೊಬ್ಬರು ಎ.ಸಿ. ಬಸ್‌ನಲ್ಲಿ ಪ್ರಯಾಣಿಸಲೆಂದು ಟಿಕೆಟ್‌ ಬುಕ್‌ ಮಾಡಿದ್ದರೂ ಎ.ಸಿ. ರಹಿತ ಬಸ್‌ ಒದಗಿಸುವ ಮೂಲಕ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಸೇವಾ ನ್ಯೂನತೆ ಎಸಗಿದೆ ಎಂದು ಅಭಿಪ್ರಾಯಪಟ್ಟಿರುವ ಕಲಬುರ್ಗಿ ಜಿಲ್ಲಾ ಗ್ರಾಹಕರ ವೇದಿಕೆಯು ಸಂಸ್ಥೆಗೆ ₹ 10 ಸಾವಿರ ದಂಡ ವಿಧಿಸಿದೆ.

ಬೀದರ್‌ ಜಿಲ್ಲೆ ಬಸವಕಲ್ಯಾಣದ ಸೋಮಶೇಖರ ಕೊಳ್ಳುರ ಅವರು 2018ರ ಏಪ್ರಿಲ್‌ 11ರಂದು ಕಲಬುರ್ಗಿಯಿಂದ ಹೊಸಪೇಟೆಗೆ ಪ್ರಯಾಣಿಸಲು ಎ.ಸಿ. ಬಸ್‌ಗೆ ಟಿಕೆಟ್‌ ಕಾದಿರಿಸಿದ್ದರು. ನಿಗದಿತ ಸಮಯಕ್ಕೆ ಬಸ್‌ ನಿಲ್ದಾಣಕ್ಕೆ ತೆರಳಿದ ಕೊಳ್ಳುರ ಅವರಿಗೆ ಆಶ್ಚರ್ಯ ಕಾದಿತ್ತು.

ಸಂಸ್ಥೆ ಎ.ಸಿ. ಬಸ್‌ ಬದಲು ಬೇರೆ ಬಸ್ಸನ್ನು ಸೇವೆಗೆ ನಿಯೋಜಿಸಿತ್ತು. ಇದರಿಂದ ತಮಗೆ ಅನಾನುಕೂಲ ಎಂದು ಆರೋಪಿಸಿ ವೇದಿಕೆಗೆ ದೂರು ನೀಡಿದ್ದರು. 

ಈ ಕುರಿತು ವಾದ ವಿವಾದ ಆಲಿಸಿದ ವೇದಿಕೆ ಅಧ್ಯಕ್ಷ ನಲ್ಹಳ ಶರಣಪ್ಪ ಮತ್ತು ಸದಸ್ಯ ನಾಗಶೆಟ್ಟಿ ಗಂಡಗೆ ಅವರು ಸಾರಿಗೆ ಸಂಸ್ಥೆಯಿಂದ ಪ್ರಯಾಣಿಕರಿಗೆ ಸೇವಾ ನ್ಯೂನತೆಯಾಗಿದೆ ಎಂದು ಅಭಿಪ್ರಾಯಪಟ್ಟರು. ಸೇವಾ ನ್ಯೂನತೆಗಾಗಿ ₹ 5 ಸಾವಿರ, ಮಾನಸಿಕ ಹಿಂಸೆ ನೀಡಿದ್ದಕ್ಕಾಗಿ ₹ 3 ಸಾವಿರ ಹಾಗೂ ಪ್ರಕರಣದ ವೆಚ್ಚವೆಂದು ₹ 2 ಸಾವಿರ ಸೇರಿದಂತೆ ಒಟ್ಟು ₹ 10 ಸಾವಿರ ದಂಡವನ್ನು ವಿಧಿಸಿದರು. 

ಕಲಬುರ್ಗಿಯ ಡಿಪೊ 1ರ ವ್ಯವಸ್ಥಾಪಕ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು.

ಸೋಮಶೇಖರ ಪರವಾಗಿ ವಕೀಲ ಶಂಭುಲಿಂಗ ಸಾಲಿಮಠ ವಾದ ಮಂಡಿಸಿದ್ದರು.

Post Comments (+)