ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಗೆಹರಿಯದ ನೆಟ್‌ವರ್ಕ್‌, ಸರ್ವರ್‌ ಸಮಸ್ಯೆ

ಸರ್ಕಾರಿ ಕಚೇರಿಗಳಲ್ಲಿನ ಆನ್‌ಲೈನ್‌ ಸೇವೆಯಲ್ಲಿ ಆಗಾಗ ವ್ಯತ್ಯಯ: ಸಾರ್ವಜನಿಕರು, ವಿದ್ಯಾರ್ಥಿಗಳ ಪರದಾಟ
ಅಕ್ಷರ ಗಾತ್ರ

ಕಲಬುರಗಿ: ‘ಸರ್ವರ್‌ ಡೌನ್‌, ನೆಟ್‌ವರ್ಕ್‌ ಸಿಗುತ್ತಿಲ್ಲ. ಒಟಿಪಿ ಬರುತ್ತಿಲ್ಲ’.

ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ತೆರೆಯಲು, ಆಧಾರ್‌ ಕಾರ್ಡಿನಲ್ಲಿ ತಿದ್ದುಪಡಿ ಮಾಡಿಸಲು, ಪಡಿತರ ಕಾರ್ಡು ಸಿದ್ಧಪಡಿಸಿಕೊಳ್ಳಲು ಆಯಾ ಕಚೇರಿಗಳಿಗೆ ತೆರಳಿದರೆ, ಅಧಿಕಾರಿಗಳು ಅಥವಾ ಸಿಬ್ಬಂದಿಯಿಂದ ಬರುವ ಉತ್ತರ ಇದು.

ಇದು ಅಂಚೆ ಕಚೇರಿಯಲ್ಲಿ ಅಷ್ಟೇ ಅಲ್ಲ, ಕೆಲ ಸರ್ಕಾರಿ ಕಚೇರಿ, ಗುಲಬರ್ಗಾ ಒನ್‌ ಕೇಂದ್ರ ಕಚೇರಿ, ರೈತ ಸಂಪರ್ಕ ಕೇಂದ್ರಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಕಾಡುತ್ತಲೇ ಇರುತ್ತದೆ. ಇದರ ಪರಿಣಾಮ ಸಕಾಲಕ್ಕೆ ಆನ್‌ಲೈನ್‌ ಸೇವೆ ಲಭ್ಯವಾಗುವುದಿಲ್ಲ. ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಅರ್ಹರು ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಲೇ ಇರುತ್ತಾರೆ.

‘ನಮ್ಮಲ್ಲಿ ಸರ್ವರ್ ಸಮಸ್ಯೆ ಇಲ್ಲ. ನೆಟ್‌ವರ್ಕ್‌ ಸ್ಪೀಡ್‌ ಇದೆ’ ಎಂದು ಕೆಲ ಸರ್ಕಾರಿ ಕಚೇರಿಗಳ ಅಧಿಕಾರಿಗಳು ಹೇಳುತ್ತಾರೆ. ಆದರೆ, ಕಚೇರಿಯ ಸಿಬ್ಬಂದಿಯ ಹೇಳಿಕೆ ಇದಕ್ಕೆ ತದ್ವಿರುದ್ಧ ಇದೆ. ‘ನೆಟ್‌ವರ್ಕ್‌ ಸಮಸ್ಯೆ ಇದೆ. ಈ ಬಗ್ಗೆ ಹಲವು ಬಾರಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ಸರ್ಕಾರಿ ಕಚೇರಿಯ ಕೆಲ ಸಿಬ್ಬಂದಿ ದೂರುತ್ತಾರೆ.

‘ನಗರದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನಿತ್ಯ 100ಕ್ಕೂ ಹೆಚ್ಚು ಆಸ್ತಿ ದಾಖಲೆಗಳ ಪ್ರಕ್ರಿಯೆ ನಡೆಯುತ್ತದೆ. ಕೆಲವೊಮ್ಮೆ ನೆಟ್‌ವರ್ಕ್‌ ಸಮಸ್ಯೆ ಎದುರಾಗುತ್ತದೆ. ಬಿಎಸ್ಎನ್‌ಎಲ್‌ ನೆಟ್‌ವರ್ಕ್‌ ಸೇವೆ ಹೊಂದಿರುವಂತಹ ಇಲ್ಲಿನ ಗುಲಬರ್ಗಾ ಒನ್‌ ಕೇಂದ್ರ ಮತ್ತು ಅಂಚೆ ಕಚೇರಿಗಳಲ್ಲಿ ಆಗಾಗ ನೆಟ್‌ವರ್ಕ್‌ ಸಮಸ್ಯೆ ಎದುರಾಗುತ್ತಲೇ ಇದೆ. ಇದು ತಾತ್ಕಾಲಿಕವಾದರೂ ಎಲ್ಲರಿಗೂ ಸಕಾಲಕ್ಕೆ ಸೌಲಭ್ಯ ದೊರೆಯುವುದಿಲ್ಲ’ ಎನ್ನುವುದು ಸಾರ್ವಜನಿಕರ ಆರೋಪ.

‘ಆಸ್ತಿ ದಾಖಲೆಗಳ ನೋಂದಣಿ, ಆಧಾರ್‌ ಕಾರ್ಡ್‌ ನೋಂದಣಿ ಹಾಗೂ ತಿದ್ದುಪಡಿ, ಪಿಂಚಣಿ ಪಡೆಯಲು ಬೆಳಿಗ್ಗೆಯೇ ಸಂಬಂಧಿಸಿದ ಕಚೇರಿಗಳಿಗೆ ಜನರು ಧಾವಿಸುತ್ತಾರೆ. ಕಚೇರಿಯ ಸಿಬ್ಬಂದಿಯು ಏಕಕಾಲದಲ್ಲಿ ಆನ್‌ಲೈನ್‌ ಕೆಲಸ ಆರಂಭಿಸಿದಾಗ ಕೆಲ ಸಮಯ ನೆಟ್‌ವರ್ಕ್‌ ಸಮಸ್ಯೆ ಉಂಟಾಗುತ್ತದೆ. ಇದು ಕೆಲವೊಮ್ಮೆ 3– 4 ಗಂಟೆ ನಿರಂತರವಾಗಿ ಕಾಡುತ್ತದೆ. ಆಗ ಅನಿವಾರ್ಯವಾಗಿ ಜನರು ಮನೆಗೆ ತೆರಳಿ ಸಂಜೆ ಬರುತ್ತಾರೆ’ ಎಂದು ಉಪ ನೋಂದಣಾಧಿಕಾರಿ ಕಚೇರಿಯಲ್ಲಿದ್ದ ಮಧ್ಯವರ್ತಿಯೊಬ್ಬರು ತಿಳಿಸಿದರು.

‘ಬಹುತೇಕ ಸರ್ಕಾರಿ ಕಚೇರಿಗಳು ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಅವಲಂಬಿಸಿವೆ. ಈ ಸೇವೆಯಲ್ಲಿ ವ್ಯತ್ಯಯ ಉಂಟಾಗುತ್ತಲೇ ಇರುತ್ತದೆ. ಇದಕ್ಕೆ ಪರ್ಯಾಯವಾಗಿ ಹೆಚ್ಚು ಸ್ಪೀಡ್‌ ನೆಟ್‌ವರ್ಕ್‌ ಹೊಂದಿರುವ ಖಾಸಗಿ ಟೆಲಿಕಾಂ ಕಂಪನಿಗಳ ಸೇವೆ ಪಡೆದಲ್ಲಿ ವೇಗವಾಗಿ ಕೆಲಸಗಳು ನಡೆಯುತ್ತವೆ. ಇದರಿಂದ ಜನರಿಗೂ ಅನುಕೂಲವಾಗುತ್ತದೆ’ ಎಂದು ಗುಲಬರ್ಗಾ ಒನ್‌ ಕೇಂದ್ರದಲ್ಲಿ ಆಧಾರ್ ಕಾರ್ಡ್ ತಿದ್ದುಪಡಿಗೆ ಬಂದಿದ್ದ ಸಾಮಾಜಿಕ ಕಾರ್ಯಕರ್ತ ಹುಲುಮನಿ ರಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಅಂಚೆ ಇಲಾಖೆಯ ನೌಕರರು ಗ್ರಾಮೀಣ ಪ್ರದೇಶದಲ್ಲಿ ಅರ್ಹರಿಗೆ ಪಿಂಚಣಿ ನೀಡುವಾಗ ಅವರಲ್ಲಿನ ಡಿವೈಸ್‌ಗೆ ಬೇಗ ನೆಟ್‌ವರ್ಕ್‌ ಸಿಗಲ್ಲ. ನೆಟ್‌ವರ್ಕ್‌ಗಾಗಿ ಎತ್ತರದ ಪ್ರದೇಶ ಹುಡುಕುತ್ತಾರೆ. ಈ ನೆಟ್‌ವರ್ಕ್‌ ಸಮಸ್ಯೆ ಕೆಲವೊಮ್ಮೆ ಕಚೇರಿಯಲ್ಲೂ ಎದುರಾಗುತ್ತದೆ’ ಎಂದು ನಗರದ ಅಂಚೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಜಿಲ್ಲಾಧಿಕಾರಿ ಕಚೇರಿಯಲ್ಲಿ 100 ಎಂಬಿಪಿಎಸ್‌ ಸಾಮರ್ಥ್ಯದ ಲಿಂಕ್‌ ಸ್ಪೀಡ್‌, ಯುಪಿಎಸ್‌ ಬ್ಯಾಕಪ್‌ ಇದೆ. ಗುಣಮಟ್ಟದ ಬ್ಯಾಟರಿ ಸೌಲಭ್ಯ ಇದೆ. ನಮಗೆ ಸರ್ವರ್‌ ಸಮಸ್ಯೆ, ನೆಟ್‌ವರ್ಕ್‌ ಡೌನ್‌ ಆಗಿಲ್ಲ. ಕೆಲವೊಮ್ಮೆ ಈ ಸಮಸ್ಯೆ ಎದುರಿಸಿದ್ದೇವೆ. ಪರ್ಯಾಯವಾಗಿ ಏರ್‌ಟೆಲ್ ಸೇವೆ ಹೊಂದಿರುವುದರಿಂದ ನಮಗೆ ಅಷ್ಟೊಂದು ಸಮಸ್ಯೆ ಎದುರಾಗಲ್ಲ’ ಎಂದು ಬಿಎಸ್‌ಎನ್‌ಎಲ್‌ ಮತ್ತು ಕೆ ಸ್ವಾನ್ (ಕರ್ನಾಟಕ ರಾಜ್ಯ ವಿಸ್ತೃತ ಜಾಲ ಯೋಜನೆ) ಜಿಲ್ಲಾ ನೋಡಲ್ ಅಧಿಕಾರಿ ಶಿವರಾಜ್‌ ತಿಳಿಸಿದರು.

‘ಹೆಚ್ಚು ಆನ್‌ಲೈನ್‌ ಸೇವೆ ನೀಡುವಂತಹ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಇ–ಆಡಳಿತ) ಇಲಾಖೆಯಿಂದ ಅಗತ್ಯಕ್ಕೆ ತಕ್ಕಂತೆ ನೆಟ್‌ವರ್ಕ್‌ ಸೌಭ್ಯಗಳನ್ನು ಕಲ್ಪಿಸಲಾಗಿದೆ’ ಎಂದರು.

ಕನಿಷ್ಠ 100 ಅರ್ಜಿಗಳ ನೋಂದಣಿ

‘ಆಸ್ತಿ ನೋಂದಣಿ, ವಿವಾಹ ನೋಂದಣಿ ಸಂಬಂಧಿಸಿದಂತೆ ನಿತ್ಯ ನಮ್ಮ ಕಚೇರಿಯಲ್ಲಿ ಬೆಳಿಗ್ಗೆ 11ರಿಂದ ಸಂಜೆ 5 ರವರೆಗೆ ಕನಿಷ್ಠ 100 ಅರ್ಜಿಗಳ ನೋಂದಣಿ ಪ್ರಕ್ರಿಯೆ ನಡೆಯುತ್ತದೆ. ಒಟ್ಟು 6 ಕಂಪ್ಯೂಟರ್‌ ಮತ್ತು 7 ಸಿಬ್ಬಂದಿ ಬೆಳಿಗ್ಗೆ ಏಕಕಾಲಕ್ಕೆ ಕೆಲಸ ಆರಂಭಿಸುತ್ತಾರೆ. ಬೆಳಿಗ್ಗೆ ಸರ್ವರ್‌ ಮೇಲೆ ಒತ್ತಡ ಹೆಚ್ಚಾಗಿ ಕೆಲ ಸಮಯ ನೆಟ್‌ವರ್ಕ್‌ ಸಮಸ್ಯೆ ಉಂಟಾಗುತ್ತದೆ. ನಂತರ ಕೆಲಸ ಸರಳವಾಗುತ್ತೆ’ ಎಂದು ಕಲಬುರಗಿಯ ಉಪ ನೋಂದಣಾಧಿಕಾರಿ ಮತ್ತು ವಿವಾಹ ನೋಂದಣಾಧಿಕಾರಿ ಕಚೇರಿಯ ಹಿರಿಯ ಉಪ ನೋಂದಣಾಧಿಕಾರಿ ಚಂದ್ರಕಾಂತ ಶಿಕಾರಿ ತಿಳಿಸಿದರು.

ನಿತ್ಯ 100 ಜನರಿಗೆ ಸೌಲಭ್ಯ

‘ವಿದ್ಯುತ್‌ ಬಿಲ್‌, ಆಸ್ತಿ ತೆರಿಗೆ ಕಟ್ಟುವುದು, ಬಿಎಸ್‌ಎನ್‌ಎಲ್‌ ಸ್ಥಿರ ದೂರವಾಣಿ ಬಿಲ್‌, ಏರ್‌ಟೆಲ್‌, ವೊಡೊಫೋನ್‌ ಮೊಬೈಲ್‌ ಬಿಲ್‌ ತುಂಬುವುದು, ಪಹಣಿ ವಿತರಣೆ, ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ವಿತರಣೆ, ಜನನ ಮತ್ತು ಮರಣ ಪ್ರಮಾಣ ಪತ್ರ ವಿತರಣೆ, ಆಧಾರ್‌ ಕಾರ್ಡ್‌ ನೋಂದಣಿ ಮತ್ತು ತಿದ್ದುಪಡಿ ಇವುಗಳ ಸೇವೆಗೆ ನಮ್ಮ ಗುಲಬರ್ಗಾ ಒನ್‌ ಕೇಂದ್ರಕ್ಕೆ ನಿತ್ಯ 150ಕ್ಕೂ ಹೆಚ್ಚು ಜನರು ಬರುತ್ತಾರೆ. ಕನಿಷ್ಠ ನೂರು ಜನರಿಗೆ ಸೇವೆ ದೊರೆಯುತ್ತದೆ. ಕೆಲವೊಮ್ಮೆ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಸಮಸ್ಯೆಯಿಂದ ಸಕಾಲಕ್ಕೆ ಜನರಿಗೆ ಸೇವೆ ಕಲ್ಪಿಸಲು ಸಾಧ್ಯವಾಗುತ್ತಿಲ್ಲ’ ಎಂದು ಗುಲಬರ್ಗಾ ಒನ್‌ ಕೇಂದ್ರದ ಅಧಿಕಾರಿ ರಾಘವೇಂದ್ರ ವಿವರಿಸಿದರು.

ಅರ್ಜಿ ಸಲ್ಲಿಕೆಗೆ ತೊಂದರೆ

‘ಡಿಸೆಂಬರ್‌ ಮತ್ತು ಜನವರಿಯಲ್ಲಿ 1 ರಿಂದ 10ನೇ ತರಗತಿವರಗಿನ ವಿದ್ಯಾರ್ಥಿಗಳು ನೆಟ್‌ವರ್ಕ್‌ ಸಮಸ್ಯೆಯಿಂದ ವಿದ್ಯಾರ್ಥಿ ವೇತನಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾಧ್ಯವಾಗಲಿಲ್ಲ. ನವೋದಯ ವಿದ್ಯಾರ್ಥಿಗಳು 6ನೇ ತರಗತಿ ಪ್ರವೇಶ ಪರೀಕ್ಷೆಗಾಗಿ ಅರ್ಜಿ ಸಲ್ಲಿಸಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಯಿತು’ ಎಂದು ಆನ್‌ಲೈನ್‌ ಗ್ರಾಹಕ ಕೇಂದ್ರದ ಮಲ್ಲಿನಾಥ ಹೇಳಿದರು.

ಯಡ್ರಾಮಿ: ನಿರಂತರ ನೆಟ್‌ವರ್ಕ್‌ ಸಮಸ್ಯೆ

ಯಡ್ರಾಮಿ: ‘ತಾಲ್ಲೂಕು ಅಂಚೆ ಕಚೇರಿಯಲ್ಲಿ ನೆಟ್‌ವರ್ಕ್‌ ಸಮಸ್ಯೆ ಇದೆ. ಉಳಿದಂತೆ ಯಾವುದೇ ಸಮಸ್ಯೆಗಳಿಲ್ಲ’ ಎಂದು ಇಲ್ಲಿನ ಪೋಸ್ಟ್‌ ಮಾಸ್ಟರ್‌ ಗುರಸಂಗಪ್ಪ ತಾಳಿಕೋಟಿ ತಿಳಿಸಿದರು.

‘ನೆಟ್‌ವರ್ಕ್‌ ಸಮಸ್ಯೆಯಿಂದ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಗಳ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ. ಆಧಾರ್‌ ಕಾರ್ಡ್‌ಗೆ ಫೋನ್‌ ನಂಬರ್‌ ಮಾತ್ರ ಇಲ್ಲಿ ಲಿಂಕ್‌ ಮಾಡಲಾಗುತ್ತದೆ. ನೋಂದಣಿ ಹಾಗೂ ತಿದ್ದುಪಡಿಗಾಗಿ ತಹಶೀಲ್ದಾರ್‌ ಕಚೇರಿಗೆ ಹೋಗಬೇಕು. ಅಲ್ಲಿಯೂ ಬೇಗ ಕೆಲಸವಾಗಲ್ಲ’ ಎಂದು ಗೃಹಿಣಿ ಮನ್ವಿತಾ ಅಸಮಾಧಾನ ವ್ಯಕ್ತಪಡಿಸಿದರು.

ಯಾರು? ಏನಂತಾರೆ?

ಬೆಳಿಗ್ಗೆ ಏಕಕಾಲದಲ್ಲಿ ಎಲ್ಲರೂ ಕೆಲಸ ಆರಂಭಿಸಿದಾಗ ಕೆಲ ಸಮಯ ನೆಟ್‌ವರ್ಕ್‌ ಸಮಸ್ಯೆ ಎದುರಾಗುತ್ತದೆ. ನಂತರ ಸಂಜೆಯವರೆಗೆ ಯಾವುದೇ ತಾಂತ್ರಿಕ ಸಮಸ್ಯೆ ಆಗಲ್ಲ
–ಶಿವರಾಜ್‌, ಉಪ ನೋಂದಣಾಧಿಕಾರಿ ಕಚೇರಿ ಸಿಬ್ಬಂದಿ

**

ಕೆಲ ಆಸ್ತಿಗಳ ದಾಖಲೆಗಳ ನೋಂದಣಿ ಪ್ರಕ್ರಿಯೆಯನ್ನು ನಾನು ಮಾಡಿಸುತ್ತಿದ್ದು, ಅರ್ಧ ತಾಸಿಗೊಮ್ಮೆ ಕನಿಷ್ಠ 3 ಆಸ್ತಿಗಳ ದಾಖಲೆ ನೋಂದಣಿ ಪ್ರಕ್ರಿಯೆ ನಡೆಯುತ್ತದೆ. ಯಾವುದೇ ತಾಂತ್ರಿಕ ಸಮಸ್ಯೆ ಎದುರಾಗಿಲ್ಲ
–ಮಲ್ಲೇಶ್‌, ನಂದಿಕೂರು

**

ನಗರದ ಕರ್ನಾಟಕ ಒನ್‌ ಕೇಂದ್ರಗಳಲ್ಲಿ ನೆಟ್‌ವರ್ಕ್‌ ಸಮಸ್ಯೆ ಬಂದಲ್ಲಿ, ಅಲ್ಲಿನ ಸಿಬ್ಬಂದಿ ಕೂಡಲೇ ಡಾಂಗಲ್‌, ವೈಫೈ ಸೌಲಭ್ಯ ಪಡೆದುಕೊಳ್ಳುತ್ತಾರೆ. ನಿರಂತರವಾಗಿ ಸಮಸ್ಯೆ ಎದುರಾದಲ್ಲಿ ಸಂಬಂಧಿಸಿದವರಿಗೆ ಮೇಲ್‌ ಮಾಡಿ ತಾಂತ್ರಿಕ ಸಮಸ್ಯೆ ಪರಿಹರಿಸುತ್ತೇವೆ
–ತೋಶಿಬ್‌, ಕರ್ನಾಟಕ ಒನ್‌ ಕೇಂದ್ರದ ನೆಟ್‌ವರ್ಕ್‌ ತಾಂತ್ರಿಕ ಸಹಾಯಕ

**
ಜೇವರ್ಗಿ ಉಪ ಅಂಚೆ ಕಚೇರಿಯಲ್ಲಿ ಸರ್ವರ್ ಸಮಸ್ಯೆ ಆಗಾಗ ಉಂಟಾಗುತ್ತದೆ. ಇದರ ಪರಿಹಾರಕ್ಕಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು
-ಅಂಬರೀಶ ಸುಬೇದಾರ, ಜೇವರ್ಗಿ ಅಂಚೆ ಕಚೇರಿಯ ಗ್ರಾಹಕ
**

ಪೂರಕ ವರದಿಗಳು: ವೆಂಕಟೇಶ ಆರ್.ಹರವಾಳ, ಮಂಜುನಾಥ ದೊಡಮನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT