ಶನಿವಾರ, ಆಗಸ್ಟ್ 20, 2022
22 °C

PV Web Exclusive: ‘ನೆವರ್ ಸ್ಲೀಪಿಂಗ್’ ತಾಣ ಈಗ ಭಣಭಣ

ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

Prajavani

ಸೂರ್ಯ ಮುಳುಗಿ, ಕತ್ತಲು ಆವರಿಸುವ ಹೊತ್ತು. ಬೀದಿ ಬೀದಿ ಬಿಸಿಲಲ್ಲಿ ತಿರುಗಾಡಿ ಭಿಕ್ಷುಕನೊಬ್ಬ ಅಲ್ಲೇ ಗೋಡೆಯ ಬದಿಯಲ್ಲಿ ಕೂರುತ್ತಿದ್ದ. ಹರಿದ ಬಟ್ಟೆ ತೊಟ್ಟ ಪುಟ್ಟ ಮಕ್ಕಳೊಂದಿಗೆ ಅನಾರೋಗ್ಯಪೀಡಿತ ತಾಯಿ ಜೋಳಿಗೆಯಿಂದ ಕಟಕಟಿ ರೊಟ್ಟಿ, ತಂಗಳನ್ನ ತೆಗೆದು ಊಟ ಮಾಡುತ್ತಿದ್ದರು. ಕೂದಲು ಕೆದರಿಕೊಂಡ ಮಾನಸಿಕ ಅಸ್ವಸ್ಥನೊಬ್ಬ ಚರಂಡಿ ಬದಿ ಕೂತು ಎಲ್ಲರನ್ನೂ ಬಯ್ಯುತ್ತಿದ್ದ. ಅಲ್ಲೇ ಸ್ವಲ್ಪ ದೂರದಲ್ಲಿ ಯುವಕನೊಬ್ಬ ‘ಆಲೂ ಬಾತ್’ ತಿಂದು ತಂಪಾದ ನೆಲದ ಮೇಲೆ ಸೊಂಪಾಗಿ ನಿದ್ದೆಗೆ ಜಾರುತ್ತಿದ್ದ. ಸ್ನಾನ ಮಾಡದೇ ಮತ್ತು ಮುಖ ತೊಳೆಯದೇ ವರ್ಷಗಳಿಂದ ಒಂದೇ ಸ್ಥಳದಲ್ಲಿದ್ದ ಅಂಗವಿಕಲ ಹಿರಿಯಜ್ಜನೊಬ್ಬ ಇವರೆಲ್ಲರ ಹಾಜರಾತಿ ಖಾತ್ರಿಪಡಿಸಿಕೊಳ್ಳುತ್ತಿದ್ದ. ಒಂದೇ ಸ್ಥಳದ ಆವರಣದಲ್ಲಿದ್ದರೂ ಇವರ ನಡುವೆ ಮಾತುಕತೆ ಇರುತ್ತಿರಲಿಲ್ಲ.

ಇದು ಫೆಬ್ರುವರಿ ತಿಂಗಳು ಅಂದ್ರೆ ಕೊರೊನಾ ಲಾಕ್‌ಡೌನ್ ಜಾರಿಯಾಗುವ ಮುನ್ನ ದಿನಗಳ ಚಿತ್ರಣ. ಕಲಬುರ್ಗಿಯ ರೈಲು ನಿಲ್ದಾಣದಲ್ಲಿ ಇದು ನಿತ್ಯದ ದೃಶ್ಯವಾಗಿತ್ತು. ಇಡೀ ದಿನ ಮತ್ತು ಸಂಜೆ ಪ್ರಯಾಣಿಕರ ದಟ್ಟಣೆಯಿದ್ದರೆ, ಕತ್ತಲು ಆವರಿಸುತ್ತಿದ್ದಂತೆ ಈ ‘ಕಾಯಂ ನಿವಾಸಿಗಳು’ ಬಂದು ತಮ್ಮ ಜಾಗ ಖಾತ್ರಿ ಪಡಿಸಿಕೊಳ್ಳುತ್ತಿದ್ದರು. ಇವರೊಂದಿಗೆ ದೂರದ ಊರಿಗೆ ಪ್ರಯಾಣಿಸುವವರು, ಮಧ್ಯರಾತ್ರಿ ರೈಲಿಗಾಗಿ ಕಾಯುವವರು, ಮನೆಗಳಿಲ್ಲದ ಅಲೆಮಾರಿಗಳು ಮುಂತಾದವರು ಅಲ್ಲಲ್ಲಿ ಚಾದರ, ಚಾಪೆ ಹಾಸಿಕೊಂಡು ವಿಶ್ರಾಂತಿಗೆ ಜಾರುತ್ತಿದ್ದರು. ಇಷ್ಟೆಲ್ಲದರ ಮಧ್ಯೆ ಚಹಾ, ಕಾಫಿ ಅಂಗಡಿ ಮತ್ತು ಹೋಟೆಲ್‌ ತೆರೆದಿರುತ್ತಿದ್ದವು. ರೈಲುಗಳ ನಿರಂತರ ಸಂಚಾರ ಇರುತಿತ್ತು. ನಿಲ್ದಾಣವು ಒಂದರ್ಥದಲ್ಲಿ ‘NEVER SLEEPING’ (ಎಂದಿಗೂ ನಿದ್ದೆಗೆ ಜಾರದ) ತಾಣವಾಗಿತ್ತು.

ಹೀಗೆ ‘ಎಂದಿಗೂ ನಿದ್ದೆಗೆ ಜಾರದ’ ತಾಣ ಎಂದು ಕರೆಯಲು ಕಾರಣವೂ ಇದೆ. ನಿಲ್ದಾಣದ ‘ಕಾಯಂ ಅತಿಥಿಗಳು’, ಪ್ರಯಾಣಿಕರು ಮುಂತಾದವರು ಅಲ್ಲಲ್ಲಿ ನಿದ್ದೆ ಮಾಡಿದ ಕೂಡಲೇ ಎಲ್ಲವೂ ಸ್ತಬ್ಧವಾಗುತ್ತಿರಲಿಲ್ಲ. ಕೆಲವರ ಚಟುವಟಿಕೆ ಆಗಷ್ಟೇ ಶುರು ಆಗುತಿತ್ತು. ದೀರ್ಘವಾಗಿ ನಿದ್ದೆಗೆ ಜಾರಿದವರನ್ನು ಪತ್ತೆ ಮಾಡಿ, ಅವರ ಚೀಲಗಳನ್ನು ಕಳವು ಮಾಡಲು ಕೆಲವರು ಪ್ರಯತ್ನಿಸುತ್ತಿದ್ದರು. ಅಂಥವರ ಮೇಲೆ ನಿಗಾ ಇಡಲು ರೈಲ್ವೆ ಪೊಲೀಸರು ಗಸ್ತು ಸುತ್ತುತ್ತಿದ್ದರು. ಬೆಳಿಗ್ಗೆಯವರೆಗೆ ಚಾರ್ಜು ಇರಲಿಯೆಂದು ಒಬ್ಬಾತ ಮೊಬೈಲ್‌ನ್ನ ಗೋಡೆ ಮೇಲಿನ ಸ್ವಿಚ್ಛ್ ಬೋರ್ಡ್‌ಗೆ ತೂಗು ಹಾಕಿ ಅದನ್ನು ನೋಡುತ್ತ ಕೂತರೆ, ಮತ್ತೊಬ್ಬ ತನಗೂ ಅವಕಾಶ ಸಿಗಲಿಯೆಂದು ಎಚ್ಚರದಿಂದ ಕಾಯುತ್ತ ಕೂರುತ್ತಿದ್ದ. ಹೀಗೆ ಒಂದೊಂದು ಕಾರಣಕ್ಕೆ ಒಬ್ಬೊಬ್ಬರು ಎಚ್ಚರವಾಗಿ ಇರುತ್ತಿದ್ದರು.

ಆದರೆ, ಮಾರ್ಚ್‌ ಎರಡನೇ ವಾರದಿಂದ ನಿಲ್ದಾಣದ ಚಿತ್ರಣವೇ ಬದಲಾಯಿತು. ಸದಾ ಜನರಿಂದ ಗಿಜಿಗಿಡುತ್ತಿದ್ದ ಆವರಣವು ಭಣಭಣ ಅನ್ನಿಸತೊಡಗಿತು. ರೈಲುಗಳ ಸಂಚಾರ ಸ್ಥಗಿತಗೊಂಡಿತು. ಜನರು ಗುಂಪುಗೂಡಬಾರದು ಎಂಬ ಆದೇಶ ಸರ್ಕಾರದಿಂದ ಹೊರಬಿತ್ತು. ನಿಲ್ದಾಣದಲ್ಲಿ ಇರುತ್ತಿದ್ದ ಭಿಕ್ಷುಕರು, ನಿರ್ಗತಿಕರನ್ನು ಬೇರೆಡೆ ಹೋಗುವಂತೆ ಸೂಚಿಸಲಾಯಿತು. ಅಲ್ಲದೇ, ಸ್ವಚ್ಛತೆ ಕಾಯ್ದುಕೊಳ್ಳುವಿಕೆಗೆ ಹೆಚ್ಚಿನ ಆದ್ಯತೆ ನೀಡಲಾಯಿತು. ‘ಎಂದಿಗೂ ನಿದ್ದೆಗೆ ಜಾರದ’ ತಾಣ ಎಂಬ ಹೆಸರಿಗೆ ಪಾತ್ರವಾಗಿದ್ದ ನಗರದ ಪ್ರಮುಖ ಸ್ಥಳವು ಜನರಿಲ್ಲದೇ ಬಿಕೋ ಎನ್ನತೊಡಗಿತು. ಆಶ್ರಯ ತಾಣ ಕಳೆದುಕೊಂಡ ಭಿಕ್ಷಕರು ಬೇರೆಯೊಂದು ಸ್ಥಳವನ್ನು ಹುಡುಕಿ ಹೊರಟರೆ, ಕೆಲ ನಿರ್ಗತಿಕರು ಸಮೀಪದ ಕಟ್ಟಡಗಳ ಬದಿ ಆಶ್ರಯ ಕಂಡುಕೊಳ್ಳಲು ಪ್ರಯತ್ನಿಸಿದರು.

ನಿತ್ಯ ಸಹಸ್ರಾರು ಪ್ರಯಾಣಿಕರು ಊರಿಗೆ ಹೋಗಲು ರೈಲು ನಿಲ್ದಾಣಕ್ಕೆ ಬಂದರೆ, ಇದೇ ನಿಲ್ದಾಣವು ಕೆಲವರ ಪಾಲಿಗೆ ಬೇರೆ ಬೇರೆ ಸ್ವರೂಪದಲ್ಲಿ ಆಸರೆಯಾಗಿತ್ತು. ಚಪ್ಪಲಿ ಹೊಲಿಯುವ ಶ್ರಮಿಕರಿಗೆ ಗ್ರಾಹಕರು ಮತ್ತು ಪತ್ರಿಕಾ ವಿತರಿಕರಿಗೆ ನಿಶ್ಚಿತವಾಗಿ ಓದುಗರು ಸಿಗುತ್ತಿದ್ದರು. ಪ್ರಯಾಣಿಕರ ಸರಕುಗಳನ್ನು ಹೊತ್ತು ಹಮಾಲಿಗಳು ದುಡಿದರೆ, ಚಹಾ–ಕಾಫಿ ಮಾರಾಟದಿಂದ ಕೆಲವರಿಗೆ ಒಂದಿಷ್ಟು ಆದಾಯ ಬರುತಿತ್ತು. ಹೋಟೆಲ್‌ನವರಿಗೆ ಬಿಡುವಿಲ್ಲದಷ್ಟು ಕೆಲಸ ಇರುತಿತ್ತು. ತಳ್ಳುಗಾಡಿಗಳಲ್ಲಿ ಆಟಿಕೆ ವಸ್ತು ಮತ್ತು ಸಣ್ಣಪುಟ್ಟ ತಿಂಡಿಗಳನ್ನು ಮಾರುವವರೂ ಬದುಕು ಕಟ್ಟಿಕೊಳ್ಳುತ್ತಿದ್ದರು. ಕೊರೊನಾ ಕಾರಣ ಬಹುತೇಕ ರೈಲುಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಬಳಿಕ ಇವರೆಲ್ಲರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ನಿಲ್ದಾಣವು ತನ್ನ ಸಹಜ ಸ್ಥಿತಿ ಕಳೆದುಕೊಂಡಿದೆ.

ಕುಡಿಯುವ ನೀರು, ಶೌಚಾಲಯ ಸೌಲಭ್ಯ, ಎಸ್ಕಲೇಟರ್ ವ್ಯವಸ್ಥೆ, ವಿಶ್ರಾಂತಿ ಸ್ಥಳ ಸೇರಿದಂತೆ ಸಕಲ ಸೌಲಭ್ಯ ಹೊಂದಿರುವ 4 ಪ್ಲಾಟ್‌ಫಾರ್ಮ್‌ನ ವಿಶಾಲ ರೈಲು ನಿಲ್ದಾಣವನ್ನು ಸುತ್ತು ಹಾಕಿದರೂ ಈಗ ಜನರು ಕಾಣಸಿಗುವುದಿಲ್ಲ. ಅಲ್ಲಲ್ಲಿ ಆಗೊಮ್ಮೆ–ಈಗೊಮ್ಮೆ ಕಸ ಗುಡಿಸುವವರು ಮತ್ತು ನೆಲ ಒರೆಸುವವರು ಕಣಿಸುತ್ತಾರೆ. ನಿಲ್ದಾಣದ ಸ್ಥಿತಿಗತಿಯನ್ನು ಪರಿಶೀಲಿಸಲು ರೈಲ್ವೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಆಗಾಗ್ಗೆ ಭೇಟಿ ನೀಡುತ್ತಾರೆ. ನಿಲ್ದಾಣದ ಹೊರವಲಯದ ಪಾರ್ಕಿಂಗ್ ಸ್ಥಳವು ವಾಹನಗಳು ಇಲ್ಲದೇ ಖಾಲಿ ಮೈದಾನದಂತೆ ಗೋಚರಿಸುತ್ತದೆ. ವಿನೂತನ ಮಾದರಿಯ ಹಸಿರು ‘ವರ್ಟಿಕಲ್’ ಉದ್ಯಾನವು ತನ್ನ ನೈಜ ಬಣ್ಣ ಕಳೆದುಕೊಂಡು, ಸಮರ್ಪಕ ನಿರ್ವಹಣೆಯಿಲ್ಲದೇ ಬಾಡಿದೆ. ಬಹುತೇಕ ಆಟೋರಿಕ್ಷಾ ಚಾಲಕರು ನಿಲ್ದಾಣದತ್ತ ಸುಳಿಯದೇ ಹಲವು ದಿನಗಳೇ ಗತಿಸಿವೆ.

ಪ್ರತಿ ದಿನ ಇಲ್ಲಿ ಒಟ್ಟು 44 ರೈಲುಗಳು ಸಂಚರಿಸುತ್ತಿದ್ದವು. ದಿನದ ಎರಡು ಪಾಳಿಗಳಲ್ಲಿ 24 ಮಂದಿ ಸ್ವಚ್ಛತಾ ಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗುತ್ತಿದ್ದರು. ಪ್ರತಿ ದಿನ ಸರಾಸರಿ 9,000 ಪ್ರಯಾಣಿಕರು ರೈಲುಗಳಲ್ಲಿ ಪ್ರಯಾಣಿಸುತ್ತಿದ್ದರು. ಟಿಕೆಟ್‌ಗಳ ಮಾರಾಟದಿಂದ ಪ್ರತಿ ದಿನ ₹ 10 ಲಕ್ಷದವರೆಗೆ ಆದಾಯ ಬರುತಿತ್ತು. ಪ್ರಯಾಣಿಕರ ಅನುಕೂಲಕ್ಕೆ 1 ಬ್ಯಾಟರಿ ವಾಹನವೂ ಇತ್ತು. ಸದ್ಯಕ್ಕೆ ಅವೆಲ್ಲವೂ ಸ್ಥಗಿತಗೊಂಡಿವೆ. ಇಷ್ಟೆಲ್ಲ ಚಟುವಟಿಕೆಗಳಿಂದ ಕೂಡಿರುತ್ತಿದ್ದ ರೈಲು ನಿಲ್ದಾಣವು ಎಲ್ಲವನ್ನೂ ಕಳೆದುಕೊಂಡು ನಿಸ್ತೇಜವಾಗಿ ನಿಂತಂತೆ ಭಾಸವಾಗುತ್ತದೆ. ಕೊರೊನಾ ಅನ್‌ಲಾಕ್‌ ಪ್ರಕ್ರಿಯೆ ಹಂತಹಂತವಾಗಿ ಅನುಷ್ಠಾನಕ್ಕೆ ಆರಂಭಗೊಂಡರೂ ನಿಲ್ದಾಣವು ಮೊದಲಿನಂತೆ ಸಹಜ ಸ್ಥಿತಿಗೆ ಬರಲು ಇನ್ನಷ್ಟು ದಿನಗಳು ಬೇಕಾಗಬಹುದು.

‘ವರ್ಷಗಳಿಂದ ಹೋಟೆಲ್‌ ನಡೆಸುತ್ತಿದ್ದ ನಾವು ಯಾವತ್ತೂ ಬಾಗಿಲು ಹಾಕುತ್ತಿರಲಿಲ್ಲ. 24 ಗಂಟೆ ಹಗಲು–ರಾತ್ರಿಯೆನ್ನದೇ ಗ್ರಾಹಕರಿಗೆ ದೋಸೆ, ಇಡ್ಲಿ, ಚಹಾ, ಕಾಫಿ, ತಂಪು ಪಾನೀಯ ಪೂರೈಸುತ್ತಿದ್ದೆವು. ಆದರೆ, ಮಾರ್ಚ್‌ 22ರಂದು ಹೋಟೆಲ್‌ಗೆ ಬೀಗ ಹಾಕಿದ ದಿನದಿಂದ ಈವರೆಗೆ ಬಾಗಿಲು ತೆರೆದಿಲ್ಲ’ ಎಂದು ಹೋಟೆಲ್ ಮಾಲೀಕ ಸಂಜಯ್ ಜೋಗ್ ನೋವು ತೋಡಿಕೊಂಡರು.

‘ರೈಲು ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರಿಗೆ ತೊಂದರೆ ಮತ್ತು ರೈಲ್ವೆ ಇಲಾಖೆಗೆ ಆರ್ಥಿಕ ನಷ್ಟ ಆಗಿರಬಹುದು. ಆದರೆ, ರೈಲ್ವೆ ಪ್ರಯಾಣಿಕರಿಂದ ಬರುತ್ತಿದ್ದ ಆದಾಯವನ್ನೇ ನಂಬಿ ಬದುಕು ಕಟ್ಟಿಕೊಂಡವರ ಪಾಡಂತೂ ಹೇಳತೀರದು. ನಾಲ್ಕು ತಿಂಗಳ ಅವಧಿಯಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ’ ಎಂದು ಹೇಳುತ್ತಾರೆ ಆಟೋರಿಕ್ಷಾ ಚಾಲಕ ಶಬ್ಬೀರ್ ನೊಂದು ನುಡಿದರು.

‘ಸದ್ಯಕ್ಕೆ ಪ್ರತಿ ದಿನ ವಿಶೇಷ ರೈಲುಗಳ ರೂಪದಲ್ಲಿ ಹುಸ್ಸೇನ್‌ಸಾಗರ್, ಕೊನಾರ್ಕ್ ಮತ್ತು ಉದ್ಯಾನ್ ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸುತ್ತಿವೆ. ಆಗಾಗ್ಗೆ ಗೂಡ್ಸ್‌ ರೈಲುಗಳು ಹಾದು ಹೋಗುತ್ತವೆ. ಕೊರೊನಾ ಅನ್‌ಲಾಕ್‌ ನಿಯಮಗಳನ್ನು ಆಧರಿಸಿ ಸರ್ಕಾರವು ಆದೇಶ ಹೊರಡಿಸುವವರೆಗೆ ರೈಲುಗಳು ಆರಂಭಗೊಳ್ಳುವುದಿಲ್ಲ. ರೈಲು ನಿಲ್ದಾಣದ ಶುಚಿತ್ವ ಕಾಯ್ದುಕೊಳ್ಳುವಿಕೆ ಮತ್ತು ಸಮರ್ಪಕ ನಿರ್ವಹಣೆಗೆ ಆದ್ಯತೆ ನೀಡುತ್ತಿದ್ದೇವೆ’ ಎಂದು ಕಲಬುರ್ಗಿ ರೈಲು ನಿಲ್ದಾಣದ ವ್ಯವಸ್ಥಾಪಕ ಎ.ಎಸ್.ಪ್ರಸಾದ ರಾವ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು