ಸೋಮವಾರ, ಜೂನ್ 14, 2021
27 °C
ವೀರಶೈವ ಮಹಾಸಭಾ ಮಹಿಳಾ ವಸತಿ ನಿಲಯಕ್ಕೆ ಭೂಮಿ ಪೂಜೆ

ಸಮಾಜಕ್ಕೆ ಪ್ರತ್ಯೇಕ ನಿಗಮಕ್ಕೆ ಖಂಡ್ರೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ವೀರಶೈವ ಲಿಂಗಾಯತ ಸಮಾಜದ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮವನ್ನು ಸ್ಥಾಪಿಸಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಒತ್ತಾಯಿಸಿದರು.

ನಗರದ ಧರಿಯಾಪುರ ಕೋಟನೂರ ಬಡಾವಣೆಯಲ್ಲಿ ಸೋಮವಾರ ವೀರಶೈವ ಮಹಿಳಾ ವಸತಿ ನಿಲಯದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ‘ಈ ಸಮಾಜದಲ್ಲೂ ಸಾಕಷ್ಟು ಜನರು ಬಡವರಿದ್ದಾರೆ. ಬಡತನದಿಂದ ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಸಮಾಜದ ಅಭಿವೃದ್ದಿಗಾಗಿ ಪ್ರತ್ಯೇಕ ನಿಗಮ  ಸ್ಥಾಪಿಸಬೇಕು ಹಾಗೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೇಲ್ವರ್ಗದವರಿಗೆ ಶೇ 10ರಷ್ಟು ಮೀಸಲಾತಿ ನಮ್ಮ ಸಮಾಜಕ್ಕೂ ಸಿಗುವಂತಾಗಬೇಕು’ ಎಂಬ ಒತ್ತಾಯಿಸಿದರು.

ಗ್ರಾಮೀಣ ಭಾಗದ ಸಮಾಜದ ಬಡ ಮಹಿಳೆಯರಿಗಾಗಿ ಉಚಿತ ವಸತಿ ನಿಲಯ ಸ್ಥಾಪಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದು ಪ್ರತಿಭಾವಂತ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗಲಿದೆ ಎಂದರು.

‘ಮುಂದಿನ ವರ್ಷ ಶ್ರಾವಣ ಮಾಸದಲ್ಲಿ ಭವ್ಯ ಕಟ್ಟಡ ಉದ್ಘಾಟನಾ ಸಮಾರಂಭ ನೆರವೇರಿಸಲಾಗುವುದು. ಶಾಮನೂರ ಶಿವಶಂಕ್ರಪ್ಪ ಅವರು ವಸತಿ ನಿಲಯ ನಿರ್ಮಾಣಕ್ಕೆ ₹ 50 ಲಕ್ಷ ನೀಡುವುದಾಗಿ ವಾಗ್ದಾನ ಮಾಡಿದ್ದಾರೆ. ಈಗಾಗಲೇ ₹ 10 ಲಕ್ಷ ನೀಡಿದ್ದಾರೆ. ಅಲ್ಲದೇ, ಸಮಾಜದ ಎಲ್ಲ ಶಾಸಕರು, ಮಾಜಿ ಶಾಸಕರು, ಗಣ್ಯರು ತಲಾ ₹ 5 ಲಕ್ಷ ದೇಣಿಗೆ ನೀಡಿ ಸಹಕರಿಸಿದ್ದಾರೆ. ನಾನೂ ₹ 10  ಲಕ್ಷ ನೀಡುತ್ತೇನೆ’ ಎಂದು ವಾಗ್ದಾನ ಮಾಡಿದರು.

ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪೂರ ಮಾತನಾಡಿ, ಕಲಬುರ್ಗಿ ನಗರದವು ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನವಾಗಿದ್ದು, ಶೈಕ್ಷಣ ಚಟುವಟಿಕೆಗಳ ಕೇಂದ್ರವಾಗಿದೆ. ಸಮಾಜದ ವಿದ್ಯಾರ್ಥಿಗಳಿಗಾಗಿಯೂ ಇನ್ನೊಂದು ಬಾಲಕರ ವಸತಿ ನಿಲಯ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವವೃದ್ಧಿ ಮಂಡಳಿ ಅಧ್ಯಕ್ಷರೂ ಆದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅಧ್ಯಕ್ಷತೆ ವಹಿಸಿದ್ದರು. ವೀರಶೈವ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷ ಶರಣಕುಮಾರ ಮೋದಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಾಸಕರಾದ ಎಂ.ವೈ.ಪಾಟೀಲ, ಬಿ.ಜಿ.ಪಾಟೀಲ, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಶಶೀಲ್ ನಮೋಶಿ, ಜಿಲ್ಲಾ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಹೈ–ಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಲಾಜಿ, ಮುಖಂಡರಾದ ಸುರೇಶ ಸಜ್ಜನ, ರಾಜಶೇಖರ ಸಿರಿ, ಬಸವರಾಜ ಖಂಡೇರಾವ, ಡಿ.ವಿ.ಪಾಟೀಲ, ಎಪಿಎಂಸಿ ಅಧ್ಯಕ್ಷ ಅಪ್ಪು ಕಣಕಿ, ಮಹಾಸಭಾ ಉಪಾಧ್ಯಕ್ಷರಾದ ಈರಣ್ಣ ಗುಳೇದ, ಡಾ. ಸುಧಾ ಹಾಲಕಾಯಿ ಜಿಲ್ಲಾ ಯುವ ಘಟಕದ ಗೌರವಾಧ್ಯಕ್ಷ ಎಂ.ಎಸ್.ಪಾಟೀಲ ನರಬೋಳಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು