ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ: 10 ವಿ.ವಿ ಇದ್ದರೂ ಇಲ್ಲ ಕೆ–ಸೆಟ್ ಪರೀಕ್ಷಾ ಕೇಂದ್ರ

Published : 8 ಅಕ್ಟೋಬರ್ 2023, 23:06 IST
Last Updated : 8 ಅಕ್ಟೋಬರ್ 2023, 23:06 IST
ಫಾಲೋ ಮಾಡಿ
Comments

ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಂಗೀತ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಸೇರಿದಂತೆ ಹಲವು ವಿಷಯಗಳಿಗೆ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಯನ್ನು (ಕೆ–ಸೆಟ್) ಬೆಂಗಳೂರಿನಲ್ಲಿ ಮಾತ್ರ ನಡೆಸುತ್ತಿದೆ. ಈ ಭಾಗದಲ್ಲಿ ಪರೀಕ್ಷಾ ಕೇಂದ್ರ ಇಲ್ಲದಿರುವುದು ಕಲಬುರಗಿ, ಧಾರವಾಡ ವಿಭಾಗದ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರೂ ಸೇರಿದಂತೆ ಕೆ–ಸೆಟ್ ಅಭ್ಯರ್ಥಿಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಕಲಬುರಗಿಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ, ಕೇಂದ್ರೀಯ ವಿಶ್ವವಿದ್ಯಾಲಯ, ಶರಣಬಸವ ವಿಶ್ವ ವಿದ್ಯಾಲಯ, ಖಾಜಾ ಬಂದಾ ನವಾಜ್ ವಿಶ್ವವಿದ್ಯಾಲಯಗಳಿವೆ. ವಿಜಯಪುರದಲ್ಲಿ ಅಕ್ಕಮಹಾದೇವಿ ಮಹಿಳಾ ವಿ.ವಿ, ಬಳ್ಳಾರಿಯಲ್ಲಿ ಶ್ರೀಕೃಷ್ಣ ದೇವರಾಯ ವಿ.ವಿ, ಬೆಳಗಾವಿಯಲ್ಲಿ ರಾಣಿ ಚನ್ನಮ್ಮ ವಿ.ವಿ, ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ, ಹುಬ್ಬಳ್ಳಿಯಲ್ಲಿ ಕಾನೂನು ವಿ.ವಿ, ಹಾವೇರಿ ಸಮೀಪದ ಗೊಟಗೋಡಿಯಲ್ಲಿ ಜಾನಪದ ವಿ.ವಿ ಸೇರಿದಂತೆ ವಿವಿಧೆಡೆ ಸ್ನಾತಕೋತ್ತರ ಕೇಂದ್ರಗಳಿದ್ದರೂ ಪರೀಕ್ಷಾ ಕೇಂದ್ರ ಮಾಡಿಲ್ಲ.

ಭೂಗೋಳ ವಿಜ್ಞಾನ, ಪತ್ರಿಕೋದ್ಯಮ, ಸಂಗೀತ, ಪ್ರವಾಸೋದ್ಯಮ, ದೃಶ್ಯಕಲೆ, ಕಾನೂನು ಸೇರಿ 23 ವಿಷಯಗಳ ಸಾವಿರಾರು ವಿದ್ಯಾರ್ಥಿಗಳು ಬಳ್ಳಾರಿ, ಕಲಬುರಗಿ,‌ ವಿಜಯಪುರ ಮತ್ತು ಧಾರವಾಡ ವಿಭಾಗಗಳ ವಿಶ್ವವಿದ್ಯಾಲಯಗಳಿಂದ ಪ್ರತಿ ವರ್ಷ ತೇರ್ಗಡೆಯಾಗುತ್ತಾರೆ.‌ ಆದರೆ, ಈ ಯಾವ ವಿಭಾಗವನ್ನೂ ಕೆಇಎ ಪರೀಕ್ಷಾ ಕೇಂದ್ರಕ್ಕೆ ಪರಿಗಣಿಸಿಲ್ಲ.

‘ನನ್ನ ವಿಷಯದ ಪರೀಕ್ಷಾ‌ ಕೇಂದ್ರ ಬೆಂಗಳೂರಿನಲ್ಲಿ‌ ಮಾತ್ರ‌ ಇರುವುದರಿಂದ ಈ ವರ್ಷ ಪರೀಕ್ಷೆ ಕಟ್ಟಲೋ ಬೇಡವೋ ಎನ್ನುವ ಗೊಂದಲ್ಲಿದ್ದೇನೆ. ನಮ್ಮ ಭಾಗ ಮೊದಲೇ ಶೈಕ್ಷಣಿಕವಾಗಿ ಹಿಂದುಳಿದಿದೆ.‌ ಅಧಿಕಾರಿಗಳ ಇಂಥ ನಿರ್ಧಾರಗಳಿಂದ ಇನ್ನಷ್ಟು ಹಿನ್ನಡೆಯಾಗುತ್ತಿದೆ’ ಎಂದು ಸ್ನಾತಕೋತ್ತರ ಪದವೀಧರ ಬೀರಣ್ಣ ಬೇಸರ ವ್ಯಕ್ತಪಡಿಸಿದರು.

‘ಹಿಂದೆ ಮೈಸೂರು ವಿ.ವಿ ಕೆ–ಸೆಟ್‌ ಪರೀಕ್ಷೆ ನಡೆಸಿದಾಗ ರಾಜ್ಯದ ಎಲ್ಲ ವಿಭಾಗಗಳಲ್ಲೂ ಕೇಂದ್ರ ಮಾಡಿತ್ತು. ಒಂದು ವಿ.ವಿಗೆ ಸಾಧ್ಯವಾಗಿದ್ದು, ಸರ್ಕಾರದ ಸಂಸ್ಥೆಗೆ ಏಕೆ ಆಗುತ್ತಿಲ್ಲ’ ಎಂಬುದು ಪ್ರಾಧ್ಯಾಪಕರೊಬ್ಬರ ಪ್ರಶ್ನೆ.

‘ಬೆಂಗಳೂರಿಗೆ ಹೋಗಿ ಪರೀಕ್ಷೆ ಬರೆದು ಬರಲು ಸಮಯ, ಹಣ ಎರಡೂ ವ್ಯರ್ಥವಾಗುತ್ತದೆ. ನಮ್ಮ ಭಾಗದಲ್ಲೇ ಪರೀಕ್ಷಾ ಕೇಂದ್ರ ಮಾಡಿದ್ದರೆ ಎಲ್ಲ ವಿದ್ಯಾರ್ಥಿಗಳಿಗೂ ಅನುಕೂಲವಾಗುತ್ತಿತ್ತು’ ಎನ್ನುತ್ತಾರೆ ದೃಶ್ಯಕಲಾ ವಿಭಾಗದ ಅಭ್ಯರ್ಥಿ ಎಂ.ಸಿ.ಡೋಲೆ. 

ಪರೀಕ್ಷೆಗೆ ಇನ್ನೂ ದಿನಗಳಿರುವುದರಿಂದ ಧಾರವಾಡ, ಕಲಬುರಗಿಗೆ ಕೇಂದ್ರಗಳನ್ನು ಕೊಡಬೇಕು. ಈಗ ಸಾಧ್ಯವಿಲ್ಲ ಎನ್ನುವುದಾದರೆ ಮುಂದಿನ ವರ್ಷವಾದರೂ ಪರೀಕ್ಷಾ ಕೇಂದ್ರ ನೀಡಲೇಬೇಕು ಎಂಬುದು ಅಭ್ಯರ್ಥಿ ಹಾಗೂ ಪ್ರಾಧ್ಯಾಪಕರ
ಆಗ್ರಹ.

ಹಿಂದಿನ ಮೂರು ಕೆ–ಸೆಟ್‌ಗಳ ಅಂಕಿ–ಸಂಖ್ಯೆ ನೋಡಿ ನಿರ್ಧಾರಕ್ಕೆ ಬಂದಿದ್ದೇವೆ. ಐದು ಸಾವಿರಕ್ಕಿಂತ ಹೆಚ್ಚು ಅರ್ಜಿ ಸಲ್ಲಿಕೆಯಾದರೆ ಆ ಭಾಗದಲ್ಲೂ ಕೇಂದ್ರ ಮಾಡುತ್ತೇವೆ.
ಎಸ್‌.ರಮ್ಯಾ, ಕಾರ್ಯನಿರ್ವಾಹಕ ನಿರ್ದೇಶಕಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಬೆಂಗಳೂರಿಗೆ ಹೋಗಿ ಬರುವುದು ಹೊರೆಯಾಗುತ್ತದೆ. ಧಾರವಾಡದಲ್ಲಿ ಒಂದು ಪರೀಕ್ಷಾ ಕೇಂದ್ರ ಮಾಡಬೇಕು
–ಪ್ರೊ.ಜೆ.ಎಂ. ಚಂದುನವರ, ಮುಖ್ಯಸ್ಥರು, ಪತ್ರಿಕೋದ್ಯಮ ವಿಭಾಗ, ಕರ್ನಾಟಕ ವಿ.ವಿ, ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT