ಗುರುವಾರ , ಜೂನ್ 30, 2022
21 °C
ಉದ್ಘಾಟನೆಗೊಂಡರೂ ಬಳಕೆಗಿಲ್ಲದ ಕಟ್ಟಡ

ಪಾಳು ಬಿದ್ದ ಆರೋಗ್ಯ ಉಪಕೇಂದ್ರ; ಚಿಕಿತ್ಸೆಗಾಗಿ ಸ್ಥಳೀಯರ ಪರದಾಟ

ಸಿದ್ದರಾಜ ಎಸ್.ಮಲ್ಕಂಡಿ Updated:

ಅಕ್ಷರ ಗಾತ್ರ : | |

Prajavani

ವಾಡಿ: ಸಾರ್ವಜನಿಕರ ಅನಾರೋಗ್ಯಕ್ಕೆ ಸ್ಪಂದಿಸಬೇಕಾದ ಆರೋಗ್ಯ ಉಪಕೇಂದ್ರವೊಂದು ಆಡಳಿತ ನಿರ್ಲಕ್ಷ್ಯದಿಂದ ಪಾಳು ಬೀಳುತ್ತಿದ್ದು, ಅಶುಚಿಯ ತಾಣವಾಗಿದೆ.

ನಾಲವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿನ ನಾಲವಾರ ಸ್ಟೇಷನ್ ಬಳಿಯ ರೇವುನಾಯಕ ತಾಂಡಾದಲ್ಲಿ 2015ರಲ್ಲಿ  ₹25 ಲಕ್ಷ ವೆಚ್ಛದಲ್ಲಿ ನಿರ್ಮಿಸಿರುವ ಆರೋಗ್ಯ ಉಪಕೇಂದ್ರ ಹಾಗೂ ಕ್ಷೇಮ ಕೇಂದ್ರಗಳು ಬಳಕೆಯಿಲ್ಲದೇ ಹಾಳಾಗಿ ಹೋಗಿವೆ. ಹೀಗಾಗಿ ಸ್ಥಳೀಯರು ನಾಲವಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಲೆಯುವಂತಾಗಿದೆ. ನಾಲವಾರ ಸ್ಟೇಷನ್, ಕುಂಬಾರಹಳ್ಳಿ, ಹಾಗೂ 8 ತಂಡಾಗಳ ಜನರ ಆರೋಗ್ಯ ಸೇವೆಗೆ ನಿರ್ಮಿಸಲಾಗಿರುವ ಕಟ್ಟಡ ಇದಾಗಿದೆ.

ಕಟ್ಟಡ ನಿರ್ಮಾಣಕ್ಕೆ ತಮ್ಮ ಜಮೀನಿನಲ್ಲಿ ಜಾಗ ಬಿಟ್ಟುಕೊಟ್ಟ ನಾಲವಾರ ತಾ.ಪಂ ಸದಸ್ಯರೊಬ್ಬರು ಆಸ್ಪತ್ರೆಗೆ ತೆರಳಲು ದಾರಿ ಬಿಡುತ್ತಿಲ್ಲ. ಇದರಿಂದ ಕಟ್ಟಡಕ್ಕೆ ಯಾರೂ ಹೋಗಲು ಸಾಧ್ಯವಾಗದೇ ಹಾಳು ಬಿದ್ದಿದೆ ಎನ್ನುವುದು ಸ್ಥಳೀಯರ ಆರೋಪ.

ವಿವಾದಕ್ಕೆ ಸೂಕ್ತ ಪರಿಹಾರ ಕಂಡುಹಿಡಿದು ಕಟ್ಟಡವನ್ನು ಆರೋಗ್ಯ ಸೇವೆಗೆ ಬಳಸಿಕೊಳ್ಳಬೇಕಾಗಿದ್ದ ಆರೋಗ್ಯ ಇಲಾಖೆ ಹಾಗೂ ತಾಲ್ಲೂಕು ಆಡಳಿತ ಇದರಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿವೆ ಎನ್ನುವುದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಉಪಕೇಂದ್ರದಲ್ಲಿ 4 ಸುಸುಜ್ಜಿತ ಕೋಣೆಗಳು ಹಾಗೂ ಸಿಬ್ಬಂದಿ ಉಳಿದುಕೊಳ್ಳುವ ಕ್ಷೇಮ ಕೇಂದ್ರದಲ್ಲಿ 4 ಸುಸುಜ್ಜಿತ ಕೋಣೆಗಳಿವೆ. ಆದರೆ ಬಳಕೆಯಿಲ್ಲದ ಕಾರಣ ಹಾಳು ಬಿದ್ದಿದ್ದು, ಮಲಮೂತ್ರ ವಿಸರ್ಜನೆಯ ತಾಣವಾಗಿವೆ. ಬಾಗಿಲು ಕಿಟಕಿಗಳು ಮುರಿದು ಹೋಗಿವೆ.

ವಿದ್ಯುತ್ ವೈರ್, ದೀಪ ಹಾಗೂ ಸೋಲಾರ ಪ್ಲೇಟ್‌ಗಳು ಕಳುವಾಗಿವೆ ಎಂಬ ಆರೋಪಗಳಿವೆ. ಸುತ್ತಲೂ ಬೆಳೆದಿದ್ದ ಮುಳ್ಳುಕಂಟಿ ಬೆಳೆದಿವೆ. ಈ ವಿಷಯ ಆಡಳಿತದ ಗಮನಕ್ಕಿದ್ದರೂ ಸಮಸ್ಯೆ ಪರಿಹರಿಸುವ ಮನಸ್ಸು ಮಾತ್ರ ಯಾರು ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ನಾಲವಾರ ಸ್ಥಳೀಯರಾದ ವಿಜಯಕುಮಾರ ರಾಠೋಡ, ಕಿರಣ ಕುಮಾರ ರಾಠೋಡ, ಶಾಂತಿಬಾಯಿ ಚವ್ಹಾಣ.

ತಾವೇ ಉದ್ಘಾಟಿಸಿದ ಕಟ್ಟಡವನ್ನು ಶಾಸಕ ಪ್ರಿಯಾಂಕ್ ಖರ್ಗೆ ಕೂಡಲೇ ದುರಸ್ತಿಗೊಳಿಸಿ ಆರೋಗ್ಯ ಸೇವೆಗೆ ಸಜ್ಜುಗೊಳಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ಸಾರ್ವಜನಿಕ ಬಳಕೆಗೆ ಕ್ರಮ; ಶಾಸಕ

ಏಜೆನ್ಸಿಯವರು ವೇತನ ಬಾಕಿ ಇರೋ ಕಾರಣಕ್ಕಾಗಿ ನಾಲವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಆರೋಗ್ಯ ಇಲಾಖೆಗೆ ಹಸ್ತಾಂತರವಾಗಿಲ್ಲ ಎಂಬ ಮಾಹಿತಿ ಇದೆ. ಅದನ್ನು ಬಗೆಹರಿಸಿ ಕಟ್ಟಡವನ್ನು ಸುಪರ್ದಿಗೆ ತೆಗೆದುಕೊಂಡು ಆಸ್ಪತ್ರೆಗೆ ಬಳಸಿಕೊಳ್ಳಲು ಈಗಾಗಲೇ ಸೂಚಿಸಿದ್ದೇನೆ  ಎಂದು ಶಾಸಕ  ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಚಿತ್ತಾಪುರ ಮತಕ್ಷೇತ್ರದ ಆರೋಗ್ಯ ಉಪಕೇಂದ್ರಗಳ ದುರಸ್ತಿಗೆ ಕೆಕೆಆರ್‌ಡಿಬಿಯಿಂದ ಅನುದಾನ ಕೋರಲಾಗಿದೆ. ನಾಲವಾರ ಸ್ಟೇಷನ್ ಉಪಕೇಂದ್ರದ ಸಮಸ್ಯೆ ಪರಿಹರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು