ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಡಿ: ಜೈರಾಮ್ ತಾಂಡಾಕ್ಕಿಲ್ಲ ರಸ್ತೆಭಾಗ್ಯ

Published : 29 ಸೆಪ್ಟೆಂಬರ್ 2024, 6:12 IST
Last Updated : 29 ಸೆಪ್ಟೆಂಬರ್ 2024, 6:12 IST
ಫಾಲೋ ಮಾಡಿ
Comments

ವಾಡಿ: ಕರದಳ್ಳಿ ಗ್ರಾಪಂ ವ್ಯಾಪ್ತಿಯ ಹಣ್ಣಿಕೇರಾ ಸಮೀಪದ ಜೈರಾಮ್ ತಾಂಡಾಕ್ಕೆ ರಸ್ತೆಭಾಗ್ಯ ಒದಗಿ ಬಂದಿಲ್ಲದ ಕಾರಣ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ.

ಹಣ್ಣಿಕೇರಾ ಕ್ರಾಸ್‌ನಿಂದ ಜೈರಾಮ್ ತಾಂಡಾದವರೆಗೆ ಸುಮಾರು ಅರ್ಧ ಕಿಲೋಮೀಟರ್‌ ಕಾಲ್ನಡಿಗೆ ರಸ್ತೆ ಇದ್ದು ಸಂಪೂರ್ಣ ಹಾಳಾಗಿದೆ. 20 ವರ್ಷದ ಹಿಂದೆ ಸಣ್ಣ ರಸ್ತೆ ನಿರ್ಮಿಸಲಾಗಿತ್ತು. ಆದರೆ ಈಗ ಆ ರಸ್ತೆ ಸಂಪೂರ್ಣ ಹಾಳಾಗಿದ್ದು ರಸ್ತೆ ಮೇಲೆ ಜಲ್ಲಿಕಲ್ಲುಗಳು ತೇಲಿ ನಿಂತಿವೆ. ಹಾಗೂ ಕೆಲವೆಡೆ ತಗ್ಗುಗಳು ಬಿದ್ದಿದ್ದು ಮಳೆ ನೀರು ನಿಂತು ನಡೆದಾಡಲು ಸಮಸ್ಯೆ ಎದುರಿಸುವಂತಾಗಿದೆ. ತಾಂಡಾದಿಂದ ನಿತ್ಯ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ರಸ್ತೆ ಮೂಲಕವೇ ಅಡ್ಡಾಡುತ್ತಿದ್ದು ಹೆಜ್ಜೆಹೆಜ್ಜೆಗೂ ಆತಂಕ ಎದುರಿಸುತ್ತಿದ್ದಾರೆ. ದಾರಿಯುದ್ಧಕ್ಕೂ ಮುಳ್ಳುಕಂಟಿಗಳು ಬೆಳೆದು ನಿಂತಿದ್ದು ಹಾವು ಚೇಳುಗಳು ರಸ್ತೆ ಮೇಲೆಯೇ ಓಡಾಡುತ್ತಿವೆ. ಹಗಲು ಹೊತ್ತಿನಲ್ಲೂ ಇಲ್ಲಿ ಜನರು ಒಂಟಿಯಾಗಿ ತೆರಳಲು ಹೆದರುತ್ತಾರೆ. ರಸ್ತೆಯ ಎರಡು ಕಡೆಗಳಲ್ಲೂ ಜಾಲಿಮರಗಳು ಬೆಳೆದು ನಿಂತಿದ್ದು ರಸ್ತೆಕಡೆ ವಾಲಿ ನಡೆದಾಡಲು ಮತ್ತಷ್ಟು ಇಕ್ಕಟ್ಟು ಉಂಟಾಗಿದೆ.

ರಸ್ತೆ ಪಕ್ಕದಲ್ಲಿ ವಿದ್ಯುತ್ ಕಂಬಗಳು ಇಲ್ಲದ ಕಾರಣ ರಾತ್ರಿ ಇಲ್ಲಿ ಓಡಾಡಲು ಹೆದರುವಂತಾಗಿದೆ. ಹಣ್ಣಿಕೇರಾ ಕ್ರಾಸ್‌ನಿಂದ ತಾಂಡಾವರೆಗೆ ಕಂಬಗಳು ಹಾಕಿ ವಿದ್ಯುತ್ ಸಂಪರ್ಕ ಮಾಡಿ ಬೆಳಕಿನ ವ್ಯವಸ್ಥೆ ಮಾಡಬೇಕು ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ. ಬೆಳಕು ಇದ್ದರೆ ಯಾವುದೇ ನಿರ್ಭಯವಾಗಿ ಓಡಾಡಬಹುದು ಎನ್ನುವ ನಿವಾಸಿಗಳು ಕೂಡಲೇ ರಸ್ತೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

20 ವರ್ಷದ ಹಿಂದೆ ನಿರ್ಮಿಸಿದ್ದ ರಸ್ತೆ ಈಗ ಸಂಪೂರ್ಣ ಹಾಳಾಗಿದೆ. ಈ ರಸ್ತೆ ಮೂಲಕ ವಿದ್ಯಾರ್ಥಿಗಳು ವಿವಿಧೆಡೆ ಶಾಲಾ ಕಾಲೇಜುಗಳಿಗೆ ತೆರಳುತ್ತಾರೆ. ಕೂಡಲೇ ರಸ್ತೆ ನಿರ್ಮಿಸಬೇಕು.
ವಾಲ್ಮೀಕ್ ಚವಾಣ, ಸ್ಥಳೀಯ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT