ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಗಿ | 46 ಶಾಲೆಗಳಲ್ಲಿ ಇಲ್ಲ ಎಸ್‌ಡಿಎಂಸಿ: ಕಾರಣ ಕೇಳಿ ನೋಟಿಸ್

Published 4 ಜನವರಿ 2024, 4:39 IST
Last Updated 4 ಜನವರಿ 2024, 4:39 IST
ಅಕ್ಷರ ಗಾತ್ರ

ಕಾಳಗಿ: ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ವ್ಯಾಪ್ತಿಯ ಚಿತ್ತಾಪುರ, ಕಾಳಗಿ ಮತ್ತು ಶಹಾಬಾದ್ ತಾಲ್ಲೂಕು ಸೇರಿ ಒಟ್ಟು 281 ಸರ್ಕಾರಿ ಪ್ರಾಥಮಿಕ ಹಾಗೂ 47 ಸರ್ಕಾರಿ ಪ್ರೌಢ ಶಾಲೆಗಳಿವೆ.

ಈ ಪೈಕಿ ಡಿಸೆಂಬರ್ 2023ರ ಅಂತ್ಯದವರೆಗೆ 236 ಪ್ರಾಥಮಿಕ ಮತ್ತು 46 ಪ್ರೌಢ ಶಾಲೆಗಳಲ್ಲಿ ಎಸ್‌ಡಿಎಂಸಿ ಅಸ್ತಿತ್ವದಲ್ಲಿದೆ. ಆದರೂ ಪ್ರಸಕ್ತ ಶೈಕ್ಷಣಿಕ ವರ್ಷ (2023-24) ಮುಗಿಯುತ್ತಿದ್ದರೂ 45 ಪ್ರಾಥಮಿಕ ಮತ್ತು 01 ಪ್ರೌಢ ಶಾಲೆಯಲ್ಲಿ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ರಚನೆ ಮಾಡದೆ ಇರುವುದು ಬೆಳಕಿಗೆ ಬಂದಿದೆ.

ಅದರಲ್ಲೂ ಕಾಳಗಿ (ಶೈಕ್ಷಣಿಕ) ತಾಲ್ಲೂಕಿನಲ್ಲಿ 14 ಪ್ರಾಥಮಿಕ ಶಾಲೆ ಮತ್ತು 01 ಪ್ರೌಢ ಶಾಲೆಯಲ್ಲಿ ಈ ಸಮಿತಿ ರಚನೆಯಾಗಿಲ್ಲ. ವಿಶೇಷವಾಗಿ ತಾಲ್ಲೂಕು ಕೇಂದ್ರ ಕಾಳಗಿಯಲ್ಲೇ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಪ್ರೌಢ ಶಾಲೆಯಲ್ಲಿ ಕೋವಿಡ್-19 ಮೊದಲ ಲಾಕ್‌ಡೌನ್ ವೇಳೆಯೆ ಎಸ್‌ಡಿಂಎಸಿಯ ಮೂರು ವರ್ಷದ ಅವಧಿ ಮುಗಿದುಹೋಗಿದೆ.

ಆದರೆ, ಈ ಶಾಲೆಗಳಲ್ಲಿ ಇಲ್ಲಿವರೆಗೂ ಎಸ್‌ಡಿಎಂಸಿ ರಚನೆ ಮಾಡುವ ಕುರಿತು ಪೋಷಕರ ಸಭೆ ಕರೆಯದೆ, ಅವರ ಮಕ್ಕಳಿಲ್ಲದಿದ್ದರೂ ಕಾಟಾಚಾರಕ್ಕೆ ಹಳೆ ಎಸ್‌ಡಿಎಂಸಿ ದರ್ಬಾರವೇ ಮುಂದುವರೆದಿದೆ.

ಎಸ್‌ಡಿಎಂಸಿ ರಚನೆ ಮಾಡದಿರಲು ವರದಿ ಕೇಳಿದ ಶಿಕ್ಷಣ ಇಲಾಖೆಗೆ ‘ಪಾಲಕರ ನಿರಾಸಕ್ತಿ’ ಇದೆ ಎಂಬ ಹಾರಿಕೆ ಉತ್ತರ ಈ ಎರಡು ಶಾಲೆಯವರು ನೀಡಿದ್ದು ಪೋಷಕರ ಆಕ್ರೋಶಕ್ಕೆ ಗುರಿಯಾಗಿದೆ.

ಹೀಗೆ, ಇಂಗನಕಲ್, ಬೆಡಸೂರ ಎಂ. ತಾಂಡಾ, ಸುಗೂರ, ಗೋಟೂರ ತಾಂಡಾ, ಸುಗೂರ ಬುದ್ಧನಗರ, ಮುಚ್ಚಖೇಡ, ವಟವಟಿ, ಕಂದಗೂಳ, ಶೆಳ್ಳಗಿ ಶಾಲೆಯಲ್ಲಿ ಎಸ್‌ಡಿಎಂಸಿ ರಚಿಸದಿರಲು ‘ಪಾಲಕರ ನಿರಾಸಕ್ತಿ’ಯ ಕಾರಣ ನೀಡಲಾಗಿದೆ. ಅದರಂತೆ, ಮಂಗಲಗಿ, ಭರತನೂರ, ಮಂಗಲಗಿ ಹರಿಜನವಾಡ ಶಾಲೆಯಲ್ಲಿ ‘ಕೋರಂ ಭರ್ತಿಯಾಗಿರುವುದಿಲ್ಲ’ ಎಂಬ ಹೇಳಿಕೆ ಉಲ್ಲೇಖವಾಗಿದೆ.

ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರು ಡಿ.20ರಂದು ಆದೇಶ ಹೊರಡಿಸಿ ಶೂನ್ಯ ದಾಖಲಾತಿ ಇರುವ ಮತ್ತು ನ್ಯಾಯಾಲಯದಲ್ಲಿ ಇತ್ಯರ್ಥವಾಗಬೇಕಾದ ಶಾಲೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಜನವರಿ 05ರ ಒಳಗೆ ಎಸ್‌ಡಿಎಂಸಿ ರಚನೆ ಮಾಡಿ ಮೇಲಧಿಕಾರಿಗಳಿಗೆ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ಶಾಲಾ ಅನುದಾನ ಬಿಡುಗಡೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಹಾಗೆ, ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದ್ನೂರ ಜ.2ರಂದು 46 ಶಾಲೆಗಳಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದು, ನಿಗದಿತ ಅವಧಿಯೊಳಗೆ ಎಸ್‌ಡಿಎಂಸಿ ರಚಿಸದಿದ್ದಲ್ಲಿ ಸೂಕ್ತ ಕ್ರಮಕ್ಕೆ ಮೇಲಧಿಕಾರಿಗಳಿಗೆ ಶಿಫಾರಸು ಮಾಡುವುದಾಗಿ ಆಯಾ ಶಾಲೆ ಮುಖ್ಯಶಿಕ್ಷಕರಿಗೆ ಎಚ್ಚರಿಸಿದ್ದಾರೆ.

ಇಲ್ಲಿವರೆಗೂ ಎಸ್‌ಡಿಎಂಸಿ ರಚನೆ ಮಾಡದ ಶಾಲಾ ಮುಖ್ಯಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದ್ದು ಮೂರು ದಿನಗಳಲ್ಲಿ ಲಿಖಿತ ಹೇಳಿಕೆ ಸಲ್ಲಿಸಲು ಸೂಚಿಸಿದ್ದೇನೆ.
- ಸಿದ್ದವೀರಯ್ಯ ರುದ್ನೂರ ಬಿಇಒ ಚಿತ್ತಾಪುರ
ಕಾಳಗಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ರಚನೆ ಯಾಕೆ ಮಾಡಿಲ್ಲವೆಂದು ಶಿಕ್ಷಕರಿಗೆ ಕೇಳಿದರೆ ಪೋಷಕರ ಮಧ್ಯೆ ಭಿನ್ನಾಭಿಪ್ರಾಯ ಇದೆ ಎಂಬ ಹಾರಿಕೆ ಉತ್ತರ ಕೊಡುತ್ತಾರೆ.
- ಸಂತೋಷ ಪತಂಗೆ ಶಿಕ್ಷಣ ಪ್ರೇಮಿ
ಶಾಲೆಯಲ್ಲಿ ಎಸ್‌ಡಿಎಂಸಿ ಇಲ್ಲದಿದ್ದರೆ ಶಿಕ್ಷಕರಲ್ಲಿ ಹಿಡಿತ ಇರುವುದಿಲ್ಲ ಮಕ್ಕಳ ಅಭ್ಯಾಸದಲ್ಲಿ ನಿಷ್ಕಾಳಜಿ ತೋರಿ ಶಾಲೆ ಸಮುದಾಯದಿಂದ ದೂರ ಇಡುವ ಪ್ರಯತ್ನ ಮಾಡುತ್ತಾರೆ.
-ಹಣಮಂತರಾಯ ಉಪ್ಪಿನ ಶಿಕ್ಷಣಪ್ರೇಮಿ ಸುಗೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT