ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಕೇಂದ್ರ ಬಜೆಟ್‌ಗೆ ಟೀಕೆ, ಪ್ರಶಂಸೆ

Last Updated 2 ಫೆಬ್ರುವರಿ 2023, 4:35 IST
ಅಕ್ಷರ ಗಾತ್ರ

ಕಲಬುರಗಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2023–24ನೇ ಸಾಲಿನ ಕೇಂದ್ರ ಬಜೆಟ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಜೆಪಿ ಮುಖಂಡರು ‘ದೂರದೃಷ್ಟಿಯ ಬಜೆಟ್’ ಎಂದರೆ, ಕಾಂಗ್ರೆಸ್ ಮುಖಂಡರು, ‘ಮಧ್ಯಮ ವರ್ಗದ ಜನರ ಮೂಗಿಗೆ ತುಪ್ಪ ಸವರಿದ ಆಯವ್ಯಯ’ ಎಂದು ಟೀಕಿಸಿದ್ದಾರೆ.

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗುವ ಏಮ್ಸ್‌, ರೈಲ್ವೆ ವಿಭಾಗೀಯ ಕಚೇರಿ, ಒಳನಾಡು ಸಂಗ್ರಹಣಾ ಘಟಕ (ಇನ್‌ಲ್ಯಾಂಡ್‌ ಕಂಟೇನರ್‌ ಡಿಪೊ), ರಸಗೊಬ್ಬರ ಕಾರ್ಖಾನೆ, ಬೀದರ್–ಕಲಬುರಗಿ– ಬೆಂಗಳೂರು ಮಾರ್ಗದಲ್ಲಿ ಹೊಸ ರೈಲು ಸೇರಿ ಹಲವು ಬೇಡಿಕೆಗಳಿಗೆ ಸ್ಪಂದನೆ ದೊರೆತಿಲ್ಲ.

ಕಲಬುರಗಿ ಜಿಲ್ಲೆ ಧಾನ್ಯಗಳ ಕಣಜ. ಇಲ್ಲಿನ ವಾತಾವರಣ ಜೋಳ, ನವಣೆ, ಸಾಮೆ, ಸಜ್ಜೆ ಬೆಳೆಗೆ ಉತ್ತಮವಾಗಿದೆ. ಹೈದರಾಬಾದ್‌ನಲ್ಲಿ ಸಿರಿಧಾನ್ಯ ಸಂಶೋಧನಾ ಕೇಂದ್ರ ಸ್ಥಾಪಿಸುವ ಬದಲು ಕಲಬುರಗಿಯಲ್ಲಿ ಸ್ಥಾಪಿಸಿದರೆ ಹೆಚ್ಚು ಅನುಕೂಲ ಆಗುತ್ತಿತ್ತು ಎಂಬುದು ರೈತ ಸಂಘಟನೆಗಳ ವಾದ.

‘ಈ ಬಾರಿಯ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗಾಗಿ ಆರ್ಥಿಕ ನೆರವಿನ ಪ್ಯಾಕೇಜ್, ಕೈಗಾರಿಕಾ ಕಾರಿಡಾರ್ ಘೋಷಿಸಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ’ ಎನ್ನುತ್ತಾರೆ ಆನಂದ್ ರಾಠೋಡ.

‘ಹಳೆ ತೆರಿಗೆ ಪದ್ಧತಿಯಲ್ಲಿ ₹2.5 ಲಕ್ಷದಿಂದ ₹3 ಲಕ್ಷಕ್ಕೆ ಹಾಗೂ ಹೊಸ ತೆರಿಗೆ ಪದ್ಧತಿಯಲ್ಲಿ ₹5 ಲಕ್ಷದಿಂದ ₹7 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಇದು ಕಡಿಮೆ ಆದಾಯದ ನೌಕರರಿಗೆ, ಮಧ್ಯಮ ವರ್ಗದವರಿಗೆ ಅನುಕೂಲ ಆಗಲಿದೆ. ತೆರಿಗೆ ಉಳಿತಾಯ ಮಾಡಿ, ಎಲ್‌ಐಸಿ, ಪಿಪಿಎಫ್‌, ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡುವವರಿಗೆ ಸಹಾಯವಾಗಲಿದೆ’ ಎನ್ನುತ್ತಾರೆ ಉದ್ಯೋಗಿ ವಿನುತ ಎಸ್.ಜೋಶಿ.

ಮುಂದಾಲೋಚನೆಯ ಬಜೆಟ್‌; ಜಾಧವ
‘ಸ್ವಾತಂತ್ರ್ಯದ ಅಮೃತ ಮಹೋತ್ಸವದಿಂದ ಶತಮಾನೋತ್ಸವದ ವೇಳೆಗೆ ದೇಶದಲ್ಲಿ ಏನೆಲ್ಲ ಪ್ರಗತಿ ಸಾಧಿಸಬೇಕು ಎಂಬ ಮುಂದಾಲೋಚನೆ ಇರಿಸಿಕೊಂಡು ರೂಪಿಸಲಾದ ಬಜೆಟ್‌. ಕೃಷಿ, ರೈಲ್ವೆಗೆ ಹೆಚ್ಚಿನ ಅನುದಾನ ಹಂಚಿಕೆ ಮಾಡಲಾಗಿದೆ. ಆದಾಯ ತೆರಿಗೆದಾರರಿಗೆ ವಿನಾಯಿತಿ ನೀಡಲಾಗಿದೆ. ದುಡಿದು ತಿನ್ನುವವರಿಗೆ ಇದು ಅತ್ಯುತ್ತಮ ಬಜೆಟ್‌. ರೈಲ್ವೆ ವಿಭಾಗೀಯ ಕಚೇರಿಯನ್ನು ಈ ಹಿಂದೆ ಸುಮ್ಮನೆ ಘೋಷಣೆ ಮಾಡಲಾಗಿತ್ತು.
-ಡಾ. ಉಮೇಶ ಜಾಧವ, ಸಂಸದ

‘ಅಸಹಾಯಕತೆ ಪಟ್ಟಿ ಮಂಡನೆ’
‘ಒಂಬತ್ತು ವರ್ಷಗಳಿಂದ ಉದ್ಯೋಗ ಸೃಷ್ಟಿ, ರೈತರ ಆದಾಯ ದ್ವಿಗುಣ ಜಪದ ಅಸಾಯಕತೆಯ ಪಟ್ಟಿಯನ್ನು ಕೇಂದ್ರ ಬಜೆಟ್‌ನಲ್ಲಿ ಮಂಡಿಸಲಾಗಿದೆ. ಕೋವಿಡ್ ಬಳಿಕ 25 ಕೋಟಿ ಜನರು ಬಡತನ ರೇಖೆಗಿಂತ ಕೆಳಗಿವೆ ಎಂಬುದು ಸರ್ಕಾರದ ವರದಿಯಲ್ಲಿದೆ. ಆದರೆ, ಆದಾಯ ತೆರಿಗೆಯನ್ನು ₹7 ಲಕ್ಷಕ್ಕೆ ಹೆಚ್ಚಿಸಿದರಿಂದ ಅವರಿಗೆ ಏನು ಪ್ರಯೋಜನ ಆಗುತ್ತದೆ? ಆರ್ಥಿಕ ಅಸಮಾನತೆ ನಿವಾರಣೆಗೆ ಸರ್ಕಾರದ ಬಳಿ ಯಾವ ಯೋಜನೆ ಇದೆ? ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ, ಡಿಜಿಟಲ್ ಇಂಡಿಯಾ ಏನಾದವು? ಉದ್ಯೋಗ ಖಾತ್ರಿ ಯೋಜನೆಯಲ್ಲಿ ₹38 ಸಾವಿರ ಕೋಟಿ ಅನುದಾನ ಕಡಿತ ಮಾಡಿದ್ದು ಎಷ್ಟು ಸರಿ.
-ಪ್ರಿಯಾಂಕ್ ಖರ್ಗೆ, ಶಾಸಕ

‘ದಶಕಗಳ ಬೇಡಿಕೆಗೆ ಸ್ಪಂದನೆ’
‘ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ಮೀಸಲಿಟ್ಟಿದೆ. ಈ ಮೂಲಕ ಐದು ದಶಕಗಳ ಬೇಡಿಕೆಯನ್ನು ಈಡೇರಿಸಿದೆ. ಈ ಯೋಜನೆಯೂ ರೈತರಿಗೆ ವರದಾನವಾಗಲಿದೆ. ಬುಡಕಟ್ಟು ಜನಾಂಗ, ಕುಶಲಕರ್ಮಿಗಳು ಹಾಗೂ ಕುಲಕಸುಬು ಆಧಾರಿತ ಶ್ರಮಿಕ ವರ್ಗದವರಿಗೆ ವಿಶೇಷ ಪ್ರೋತ್ಸಾಹ ನೀಡುವ ಮೂಲಕ ಮಹತ್ವದ ಹೆಜ್ಜೆಯಿಟ್ಟಿದೆ.
-ಸಿದ್ದಾಜಿ ಪಾಟೀಲ, ಅಧ್ಯಕ್ಷ, ಬಿಜೆಪಿ ನಗರ ಘಟಕ

‘ಹಣದುಬ್ಬರ ನಿಯಂತ್ರಣ ಕಡಗಣನೆ’
ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕವನ್ನು ನಿರ್ಲಕ್ಷಿಸಲಾಗಿದೆ. ಕೃಷಿ, ಉದ್ಯೋಗ ಸೃಷ್ಟಿ, ಕಾರ್ಮಿಕರು ಮತ್ತು ಹಣದುಬ್ಬರ ನಿಯಂತ್ರಣದ ಬಗ್ಗೆ ಪ್ರಸ್ತಾಪವಿಲ್ಲ. ನರೇಗಾ ಯೋಜನೆ ಅನುದಾನವನ್ನು ₹89,154 ಕೋಟಿಯಿಂದ ₹61,032 ಕೋಟಿಗೆ ಇಳಿಸಲಾಗಿದೆ. ಆಹಾರ ಸಬ್ಸಿಡಿ ಶೇ 31ರಷ್ಟು ಕಡಿಮೆ ಮಾಡಲಾಗಿದೆ. ಹೂಡಿಕೆದಾರರು ಮತ್ತು ಸ್ಟಾರ್ಟ್‌ಅಪ್‌ಗಳ ಬಗ್ಗೆ ಗಮನಹರಿಸಿಲ್ಲ.
-ಚೇತನ್ ಗೋನಾಯಕ, ರಾಷ್ಟ್ರೀಯ ಮಾಧ್ಯಮ ಸಂಯೋಜಕ, ಭಾರತೀಯ ಯುವ ಕಾಂಗ್ರೆಸ್‌

‘ಆರ್ಥಿಕ ಬೆಳವಣಿಗೆಗೆ ಒತ್ತು’
ಆರ್ಥಿಕ ಬೆಳವಣಿಗೆಗೆ ಒತ್ತು ನೀಡಲಾಗಿದೆ. ಎಂಎಸ್‌ಎಂ ವಲಯಕ್ಕೂ ಉತ್ತೇಜನ ಕೊಡಲಾಗಿದೆ. ಸ್ಟಾರ್ಟ್‌ಅಪ್‌ಗಳ ನಷ್ಟ ಮುಂದುವರಿಸುವ ಲಾಭವನ್ನು 10 ವರ್ಷಗಳವರೆಗೆ ವಿಸ್ತರಿಸುವುದು ಒಳ್ಳೆಯ ನಿರ್ಧಾರ. ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗಾಗಿ ₹5 ಸಾವಿರ ಕೋಟಿ ವಿಶೇಷ ಆರ್ಥಿಕ ನೆರವಿನ ಪ್ಯಾಕೇಜ್ ಬೇಡಿಕೆ ಇರಿಸಿದ್ದೆವು. ಆದರೆ, ಘೋಷಣೆ ಆಗಿಲ್ಲ. ಮುಂದಿನ ದಿನಗಳಲ್ಲಿ ಆಗಬಹುದು ಎಂಬ ನಿರೀಕ್ಷೆ. ತೆರಿಗೆ ವಿನಾಯಿತಿ ಸಹ ಅನುಕೂಲಕರವಾಗಿದೆ.
-ಪ್ರಶಾಂತ ಮಾನಕರ, ಅಧ್ಯಕ್ಷ, ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಕಲಬುರಗಿ

‘ಜನಪರ ಯೋಜನೆಯ ಬಜೆಟ್‌’
ಕೇಂದ್ರ ಸರ್ಕಾರದ ಬಜೆಟ್ ಜನಪರವಾಗಿದೆ. ಕೌಶಲ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ರಕ್ಷಣಾ ಕ್ಷೇತ್ರಗಳಿಗೆ ಆದ್ಯತೆ ನೀಡಿದೆ. ಪಿಎಂ ಆವಾಸ್ ಯೋಜನೆಗೆ ₹15 ಲಕ್ಷ ಕೋಟಿ ಮೀಸಲು, ಸಾವಯವ ಕೃಷಿಗೆ ಒತ್ತು ನೀಡಿರುವುದು ಶ್ಲಾಘನೀಯ. ಮಧ್ಯಮ ವರ್ಗದವರಿಗೆ ತೆರಿಗೆ ಹೊರೆಯನ್ನು ತಗ್ಗಿಸಿದೆ. ದೇಶದ ವಿವಿಧೆಡೆ ಅಂತರರಾಷ್ಟ್ರೀಯ ಕೌಶಲ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಗೆ ₹2 ಲಕ್ಷ ಕೋಟಿ ಅನುದಾನ ನೀಡಿರುವುದು ಸೇರಿದಂತೆ ಹಲವು ಯೋಜನೆಗಳು ಬಡವರು, ಮಧ್ಯಮ ವರ್ಗದವರಿಗೆ ಅನುಕೂಲ ಆಗಲಿವೆ.
-ಶಶೀಲ್ ಜಿ. ನಮೋಶಿ, ವಿಧಾನ ಪರಿಷತ್ ಸದಸ್ಯ

*

ಆದಾಯ ತೆರಿಗೆ ₹7 ಲಕ್ಷಕ್ಕೆ ಏರಿಕೆ ಮಾಡಿದ್ದು ಮಾಧ್ಯಮ ವರ್ಗದ ಕುಟುಂಬಗಳಿಗೆ ಸಂಜೀವಿನಿ ಆಗಲಿದೆ. ಸಿರಿಧಾನ್ಯಗಳ ಶ್ರೀಅನ್ನ ಘೋಷಣೆಯಿಂದ ಕೃಷಿ ಮಾರುಕಟ್ಟೆಗೆ ಆದ್ಯತೆ ಸಿಗಲಿದೆ
-ವಿಜಯಲಕ್ಷ್ಮಿ ಗೊಬ್ಬೂರಕರ್, ಗೃಹಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT