ಕಲಬುರಗಿ: ‘ಕೊಟ್ಟ ಮಾತಿನಂತೆ ಗ್ರಾಮೀಣಾಭಿವೃದ್ಧಿ ಮತ್ತು ಕಾರ್ಮಿಕ ಸಚಿವರು ನಡೆದುಕೊಂಡಿಲ್ಲ. ಸಮಸ್ಯೆಗಳ ಅರಿವಿದ್ದರೂ ಅಧಿಕಾರಿಗಳು ಕುರುಡಾಗಿ ವರ್ತಿಸುತ್ತಿದ್ದಾರೆ. ಹೋರಾಟದ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಿದ್ದರೂ ಪೊಲೀಸರು ಹತ್ತಾರು ಬಾಂಡ್‌ಗಳಿಗೆ ಸಹಿ ಪಡೆದು ಉಗ್ರರಂತೆ ನಡೆಸಿಕೊಂಡಿದ್ದಾರೆ. ಸಚಿವರು ಪೊಲೀಸರ ಮೂಲಕ ಒತ್ತಡ ಹಾಕಿ ಹೋರಾಟವನ್ನು ಹತ್ತಿಕ್ಕಿದ್ದಾರೆ’ ಎಂಬ ಆಕ್ರೋಶದ ಮಾತುಗಳು ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಪ್ರತಿಭಟನೆಯಲ್ಲಿ ಕೇಳಿಬಂದವು.
ನಗರದಲ್ಲಿ ಮಂಗಳವಾರ ಸಿಐಟಿಯು ಸಹಭಾಗಿತ್ವದಲ್ಲಿ ಪಂಚಾಯಿತಿ ನೌಕರರ ಸಂಘ ‘ಸಚಿವರ ಮನೆ ಚಲೋ’ (ಪ್ರಿಯಾಂಕ್ ಖರ್ಗೆ) ಪ್ರತಿಭಟನಾ ಮೆರವಣಿಗೆ ನಡೆಸಿತು. ಕರ ವಸೂಲಿಗಾರರು, ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್, ನೀರುಗಂಟಿಗಳು, ಸ್ವಚ್ಛತಾಕಾರರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದರು. ಘೋಷಣೆ ಕೂಗುತ್ತಾ ಹೊರಟಿದ್ದವರನ್ನು ಪೊಲೀಸರು ಮಾರ್ಗದಲ್ಲಿ ತಡೆದು ಹಿಂದಕ್ಕೆ ಕಳುಹಿಸಿದರು.
ಸಾರ್ವಜನಿಕ ಉದ್ಯಾನದಲ್ಲಿ ಸಭೆ ನಡೆಸಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಬಿ.ನಾಡಗೌಡ, ‘ಸಚಿವರ ಮನೆಗೆ ನಾವ್ಯಾರೂ ಆಸ್ತಿಯಲ್ಲಿ ಪಾಲು ಕೇಳಲು ಹೊರಟಿರಲಿಲ್ಲ. ಸದಾ ಅಂಬೇಡ್ಕರ್ ಮತ್ತು ಸಂವಿಧಾನದ ಬಗ್ಗೆ ಪ್ರತಿಪಾದನೆ ಮಾಡುವ ಸಚಿವ ಪ್ರಿಯಾಂಕ್ ಖರ್ಗೆ ಅವರ ಮನೆಗೆ ಸಂವಿಧಾನದ ಆಧಾರದ ಮೇಲೆ ಕನಿಷ್ಠ ವೇತನ ಕೊಡುವಂತೆ ಕೇಳಲು ತೆರಳುತ್ತಿದ್ದೆವು. ಆದರೆ, ಸಚಿವರ ಮನೆಯಲ್ಲಿ ವಾಚ್‌ಮ್ಯಾನ್ ಬಿಟ್ಟರೆ ಬೇರೆ ಯಾರೂ ಇರಲ್ಲ ಎಂದ ಪೊಲೀಸರು, ನಮ್ಮನ್ನು ವಾಪಸ್ ಕಳುಹಿಸಿದ್ದಾರೆ’ ಎಂದರು.
‘ಸಿಎಂ ಸಿದ್ದರಾಮಯ್ಯ ಅವರು ನುಡಿದಂತೆ ನಡೆಯುವ ಸರ್ಕಾರವೆಂದು ಪದೇ ಪದೇ ಭಾಷಣದಲ್ಲಿ ಹೇಳುತ್ತಾರೆ. ಆದರೆ, ಕಾರ್ಮಿಕ ಮತ್ತು ಆರ್‌ಡಿಪಿಆರ್ ಸಚಿವರು ನುಡಿದಂತೆ ನಡೆಯುತ್ತಿಲ್ಲ. ವೇತನ ಹೆಚ್ಚಳದ ಭರವಸೆ ಕೊಟ್ಟು ತಿಂಗಳುಗಳೇ ಕಳೆದರು ಇನ್ನೂ ಈಡೇರಿಸಿಲ್ಲ’ ಎಂದು ಟೀಕಿಸಿದರು.
‘₹3 ಸಾವಿರ ವೇತನ ಹೆಚ್ಚಳದ ಕಡತವನ್ನು ಹಣಕಾಸು ಇಲಾಖೆಗೆ ಕೊಟ್ಟು, ಅದಕ್ಕೆ ಒಪ್ಪಿಗೆ ತರುವ ಯೋಗ್ಯತೆ ಇಲ್ಲದ ಮೇಲೆ ಇವರನ್ನು ಗ್ರಾಮೀಣಾಭಿವೃದ್ಧಿ ಸಚಿವರೆಂದು ಕರೆಯಬೇಕಾ? ಇವರನ್ನು ರಕ್ಷಿಸಲು ಇಷ್ಟೊಂದು ಪೊಲೀಸರು ಬೇಕಾ? ಕಲಬುರಗಿಯವರು ಎಂತಹವರನ್ನು ಗೆಲ್ಲಿಸಿ ಕಳುಹಿಸಿದ್ದೀರಾ ಎಂಬುದನ್ನು ಅರ್ಥಮಾಡಿಕೊಳ್ಳಿ’ ಎಂದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಸಜ್ಜನ್ ಮಾತನಾಡಿ, ‘ಈ ಹಿಂದೆ ಇದ್ದ ಕಳ್ಳರನ್ನು (ಬಿಜೆಪಿ) ಓಡಿಸಿ ಇವರನ್ನು (ಕಾಂಗ್ರೆಸ್) ಅಧಿಕಾರಕ್ಕೆ ತಂದಿದ್ದೇವೆ. ಒಂದೂವರೆ ವರ್ಷದಲ್ಲಿ ಜನರಿಂದ ದೂರವಾದ ಸರ್ಕಾರ ಜನ ವಿರೋಧಿಯೂ ಆಗುತ್ತಿದೆ’ ಎಂದರು.
ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ರಾಮಕೃಷ್ಣ, ಖಜಾಂಚಿ ಆರ್.ಎಸ್.ಬಸವರಾಜ, ಜಿಲ್ಲಾ ಅಧ್ಯಕ್ಷ ನಾಗರಾಜ್ ಭಂಕೂರು, ಕಾರ್ಯದರ್ಶಿ ಮಾರುತಿ ಸುಗ್ಗಾ, ಭೀಮರಾವ ಅಂಬಲಗಿ, ಸಿಐಟಿಯು ಮುಖಂಡರಾದ ಗೌರಮ್ಮ ಪಿ.ಪಾಟೀಲ, ಶಾಂತಾ ಎನ್.ಘಂಟೆ, ಸಿಪಿಎಂ ಮುಖಂಡರಾದ ಕೆ. ನೀಲಾ, ಶರಣಬಸಪ್ಪ ಮಮಶೆಟ್ಟಿ ಸೇರಿ ಹಲವರು ಉಪಸ್ಥಿತರಿದ್ದರು.
‘ಉಗ್ರರಂತೆ ನಡೆಸಿಕೊಂಡ ಪೊಲೀಸರು’
‘ಸಚಿವ ಪ್ರಿಯಾಂಕ್ ಖರ್ಗೆ ಅವರು ಪೊಲೀಸರ ಮೇಲೆ ಒತ್ತಡಹಾಕಿ ಹೋರಾಟವನ್ನು ಹತ್ತಿಕ್ಕಲು ಯತ್ನಿಸಿದ್ದು ಹೇಗಾದರು ಮಾಡಿ ಹೋರಾಟವನ್ನು ಸದೆಬಡೆಯುಂತೆ ಪೊಲೀಸರಿಗೆ ರಾತ್ರಿ ನಿದ್ರೆ ಮಾಡಲು ಬಿಟ್ಟಿಲ್ಲ’ ಎಂದು ಎಂ.ಬಿ. ಸಜ್ಜನ್ ಆರೋಪಿಸಿದರು. ‘ಮುಖಂಡರಿಂದ ನೂರಾರು ಬಾಂಡ್ ಪೇಪರ್‌ಗಳ ಮೇಲೆ ಸಹಿ ಮಾಡಿಸಿಕೊಂಡ ಪೊಲೀಸರು ನಮ್ಮನ್ನು ಕ್ರಿಮಿನಲ್ ಹಾಗೂ ಉಗ್ರವಾದಿಗಳಂತೆ ನೋಡಿದ್ದಾರೆ. ಪ್ರಿಯಾಂಕ್ ಅವರು ಕೈಯಲ್ಲಿ ಸಂವಿಧಾನ ಪುಸ್ತಕ ಹಿಡಿದು ಓಡಾಡುತ್ತಾರೆ. ಆದರೆ ಅದರಲ್ಲಿ ಇರುವ ಅಂಶಗಳನ್ನು ಅವರೇ ಪಾಲಿಸದೆ ಇರುವುದನ್ನು ಖಂಡಿಸುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.