ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಿಕ್ಷಣಾರ್ಥಿಗಳ ಆಕರ್ಷಕ ಪಥಸಂಚಲನ

118 ಅಬಕಾರಿ ಪಿಎಸ್ಐಗಳ ಆರು ತಿಂಗಳ ತರಬೇತಿ ಅವಧಿ ಮುಕ್ತಾಯ
Last Updated 9 ಫೆಬ್ರುವರಿ 2021, 1:19 IST
ಅಕ್ಷರ ಗಾತ್ರ

ಕಲಬುರ್ಗಿ: ನಗರದ ಹೊರವಲಯದ ನಾಗನಹಳ್ಳಿಯಲ್ಲಿರುವ ಪೊಲೀಸ್ ತರಬೇತಿ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ 3ನೇ ತಂಡದ 118 ಜನ ಅಬಕಾರಿ ಸಬ್‌ ಇನ್‌ಸ್ಪೆಕ್ಟರ್ ಪ್ರಶಿಕ್ಷಣಾರ್ಥಿಗಳು ಸೋಮವಾರ ಆಕರ್ಷಕ ‌ಪಥಸಂಚಲನ ನಡೆಸಿದರು.

ಆರು ತಿಂಗಳ ತರಬೇತಿ ಅವಧಿಯಲ್ಲಿ ವಿವಿಧ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಿದ ಪಿಎಸ್ಐ ಪ್ರಶಿಕ್ಷಣಾರ್ಥಿ ಮ್ಯಾಥ್ಯೂ‌ ಕಾರ್ಲೊ ಅವರಿಗೆ ಅಬಕಾರಿ ಇಲಾಖೆ ಹೆಚ್ಚುವರಿ ಆಯುಕ್ತ (ತಪಾಸಣೆ) ವೆಂಕಟರಾಜನ್ ಟ್ರೋಫಿ ವಿತರಿಸಿದರು.

ಎಂ.ಎಸ್ಸಿ, ಎಂ.ಟೆಕ್, ಬಿಬಿಎ, ಬಿ.ಇಡಿ, ಬಿ. ಫಾರ್ಮಾ ಓದಿದವರು ಇಲ್ಲಿ ಆಯ್ಕೆಯಾಗಿ ತರಬೇತಿ ‌ಮುಗಿಸಿದರು.

118 ಪ್ರಶಿಕ್ಷಣಾರ್ಥಿಗಳ‌ ಪೈಕಿ 77 ಪುರುಷರು, 41 ಮಹಿಳೆಯರು. ಇವರ ಪೈಕಿ ಐವರು ಮಾಜಿ ಸೈನಿಕರಿದ್ದಾರೆ.

ಪಥಸಂಚಲನದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಹೆಚ್ಚುವರಿ ಅಬಕಾರಿ ಆಯುಕ್ತ (ಕೇಂದ್ರ ಮತ್ತು ತಪಾಸಣೆ) ವೆಂಕಟ್ ರಾಜ್, ‘ನಾವು ಸರ್ಕಾರದ ಪ್ರತಿನಿಧಿಗಳಾಗಿ ಸಾರ್ವಜನಿಕರ ಒಳಿತಿಗಾಗಿ ಕಾರ್ಯನಿರ್ವಹಿಸಬೇಕು ಎಂದರು. ಪೊಲೀಸ್ ಸಮವಸ್ತ್ರ ಧರಿಸಿದರೆ ಹೆಮ್ಮೆಯ ಭಾವನೆ ಮೂಡುತ್ತದೆ. ಗುರುತು ಲಭಿಸುತ್ತದೆ ಹಾಗೂ ಜೀವನೋದ್ದೇಶ ಏನೆಂದು ಅರ್ಥವಾಗುತ್ತದೆ’ ಎಂದರು.

‘118 ಪ್ರಶಿಕ್ಷಣಾರ್ಥಿಗಳ ಪೈಕಿ 41 ಮಹಿಳಾ ಅಧಿಕಾರಿಗಳು ಹಾಗೂ 77 ಪುರುಷ ಅಧಿಕಾರಿಗಳು ತರಬೇತಿ ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಅಣಿಯಾಗಿದ್ದು, ಇದರಲ್ಲಿ ಮಹಿಳಾ ಅಧಿಕಾರಿಗಳ ಸಂಖ್ಯೆ ಹೆಚ್ಚಿರುವುದು ಸಂತಸ ತಂದಿದೆ. ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ’ ಎಂದು ಹೇಳಿದರು.

ವರದಿ ವಾಚನ ಮಾಡಿದ ನಾಗನಹಳ್ಳಿ ಪೊಲೀಸ್‌ ತರಬೇತಿ ಮಹಾವಿದ್ಯಾಲಯದ ಪ್ರಾಂಶುಪಾಲ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, 2003ರಲ್ಲಿ ಆರಂಭವಾದ ತರಬೇತಿ ಕೇಂದ್ರವು ಇದುವರೆಗೆ ಪಿಎಸ್ಐ, ಆರ್‌ಎಸ್ಐ ಮತ್ತು ಅಬಕಾರಿ ಉಪ ನಿರೀಕ್ಷಕರು ಸೇರಿ ಒಟ್ಟು 1699 ಹಾಗೂ ಸಿಪಿಸಿ, ಎಪಿಸಿ, ಕೆಎಸ್ಐಎಸ್ಎಫ್ ಹಾಗೂ ಅಬಕಾರಿ ರಕ್ಷಕರು ಸೇರಿದಂತೆ ಒಟ್ಟು 4796 ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡಿದೆ. ಪ್ರಸ್ತುತ 3ನೇ ತಂಡದ ಅಬಕಾರಿ ಉಪ ನಿರೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನಕ್ಕೆ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರು ಪರೇಡ್ ಕಮಾಂಡರನ್ನಾಗಿ ನೇಮಿಸಿದ್ದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಬಹುಮಾನ ವಿತರಣೆ: ತರಬೇತಿ ಸಮಯದಲ್ಲಿ ಏರ್ಪಡಿಸಿದ್ದ ಒಳಾಂಗಣ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಜೋಸ್ಲಿನ್ ಫರ್ನಾಂಡಿಸ್, ಹೊರಾಂಗಣ ವಿಭಾಗದಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿದ ಪುಷ್ಪಾ ಸದಾಶಿವ ಗದಾಡಿ, 9 ಎಂ.ಎಂ ಪಿಸ್ತೂಲ್ ಶೂಟಿಂಗ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದ ದಿಲೀಪ್ ಸಿಂಗ್ ಠಾಕೂರ್, ಪಾಯಿಂಟ್ 303 ರೈಫಲ್ ಶೂಟಿಂಗ್‌ನಲ್ಲಿ ಪ್ರಥಮ ಸ್ಥಾನ ಪಡೆದ ಕಿರಣ್ ಜುಲ್ಫಿ ಹಾಗೂ ಒಟ್ಟಾರೆ ಉತ್ತಮ ಸಾಧನೆ ಮಾಡಿದ ಮ್ಯಾಥ್ಯೂ ಕಾರ್ಲೊ ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ನಿರ್ಗಮನ ಪಥಸಂಚಲನದ ಪರೇಡ್‌ನ ಕಮಾಂಡರ್‌ ಆಗಿ ಪುಷ್ಪಾ ಸದಾಶಿವ ಗದಾಡಿ ಹಾಗೂ ದ್ವಿತೀಯ ಕಮಾಂಡರ್‌ ಆಗಿ ಅಬಕಾರಿ ಉಪ ನಿರೀಕ್ಷಕ ನಾಗರಾಜ ಎನ್. ಮುಂದಾಳತ್ವ ವಹಿಸಿದ್ದರು. ಅನಿಲ ಜೋಗದಂಡೆ, ಗಂಗಾಧರ ಅಂತರಶೆಟ್ಟಿ, ಬಸವರಾಜ ಸಿ. ಗುಗ್ಗರಿ ಹಾಗೂ ದಿನೇಶ್ ಕೆ. ತಮ್ಮ ತುಕಡಿಗಳನ್ನು ಮುನ್ನಡೆಸಿದರು.

ಎಸ್ಪಿ ಡಾ. ಸಿಮಿ ಮರಿಯಮ್ ಜಾರ್ಜ್, ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಡಿ. ಕಿಶೋರಬಾಬು, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ ಇದ್ದರು.

ಉಪ ಪ್ರಾಂಶುಪಾಲ ಹಾಗೂ ಕಲಬುರ್ಗಿಯ ಐಎಸ್‌ಡಿ ಎಸ್ಪಿ ಅರುಣ ರಂಗರಾಜನ್ ಸ್ವಾಗತಿಸಿದರು. ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ವಂದಿಸಿದರು. ಶಶಿಕಲಾ ಜಡೆ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT