ಭಾನುವಾರ, ಸೆಪ್ಟೆಂಬರ್ 26, 2021
21 °C
ಮುಖ್ಯಮಂತ್ರಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಆರೋಪ

ಬಿ.ಎಸ್.ಯಡಿಯೂರಪ್ಪ ವಿರುದ್ಧ ಖಾಸಗಿ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸದನದಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಶಾಸಕ ಬಿ.ಎಸ್.ಯಡಿಯೂರಪ್ಪ ವಿರುದ್ಧ ದೂರು ದಾಖಲಿಸಲು ಅನುಮತಿ ನೀಡುವಂತೆ ಕೋರಿ ಎಚ್.ಡಿ.ಕುಮಾರಸ್ವಾಮಿ ಅಭಿಮಾನಿಗಳ ಸಂಘದ ರಾಜ್ಯ ಘಟಕದ ಅಧ್ಯಕ್ಷ ವೀರಣ್ಣ ಕೊರಳ್ಳಿ ಅವರು 5ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ.

‘ಅಧಿವೇಶನದಲ್ಲಿ ಮಾತನಾಡಿದ್ದ ಯಡಿಯೂರಪ್ಪ ಅವರು ಕುಮಾರಸ್ವಾಮಿ ರಕ್ತದಲ್ಲೇ ಮೋಸ, ವಂಚನೆ ಇದೆ, ಅವರೊಬ್ಬ ವಚನಭ್ರಷ್ಟ ಎಂದು ಹೇಳಿಕೆ ನೀಡಿದ್ದಾರೆ. ಇದರಿಂದ ಕುಮಾರಸ್ವಾಮಿ ಅಭಿಮಾನಿಗಳಿಗೆ ನೋವುಂಟಾಗಿದೆ. ಆದ್ದರಿಂದ ಅವರ ವಿರುದ್ಧ ಸಂಬಂಧಿಸಿದ ನ್ಯಾಯಾಲಯ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಸಿಆರ್‌ಪಿಸಿ 156 (3) ಅಡಿ ಪ್ರಕರಣ ದಾಖಲಿಸಲು ಅನುಮತಿ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.

‘ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋಗಿದ್ದೆ. ಅವರು ದೂರು ದಾಖಲಿಸಿಕೊಳ್ಳಲು ಬರುವುದಿಲ್ಲ ಎಂದು ಹೇಳಿದರು. ಹೀಗಾಗಿ ನ್ಯಾಯಾಲಯದ ಮೊರೆ ಹೋಗಿದ್ದೇನೆ’ ಎಂದು ದೂರುದಾರ ವೀರಣ್ಣ ಕೊರಳಿ ತಿಳಿಸಿದ್ದಾರೆ.

‘ಜು.25ರಂದು ದೂರಿನ ವಿಚಾರಣೆ ನಡೆಸಿರುವ 5ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರು, ಖಾಸಗಿ ದೂರು (ಪಿಸಿ ನಂ.664/2018) ದಾಖಲಿಸಿಕೊಳ್ಳುವಂತೆ ಆದೇಶಿಸಿದ್ದು, ಮುಂದಿನ ವಿಚಾರಣೆಯನ್ನು ಜು.30ರಂದು ನಿಗದಿಪಡಿಸಿದ್ದಾರೆ. ವಾದ–ಪ್ರತಿವಾದ ಆಲಿಸಿದ ಬಳಿಕ ಅಂತಿಮ ತೀರ್ಪು ನೀಡಲಿದ್ದಾರೆ’ ಎಂದು ದೂರುದಾರರ ಪರ ವಕೀಲ ಹಣಮಂತ ಯಳಸಂಗಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು