ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘50 ಸಾವಿರ ಕಸಾಪ ಸದಸ್ಯತ್ವ ಗುರಿ’

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ
Last Updated 2 ಡಿಸೆಂಬರ್ 2021, 16:34 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಸದಸ್ಯರ ಸಂಖ್ಯೆ ಸದ್ಯಕ್ಕೆ 16,621 ಇದ್ದು, ಮುಂದಿನ ದಿನಗಳಲ್ಲಿ ಆ ಸಂಖ್ಯೆಯನ್ನು 50 ಸಾವಿರಕ್ಕೆ ಹೆಚ್ಚಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಕಸಾಪ ಕೇಂದ್ರ ಸಮಿತಿ ಅಧ್ಯಕ್ಷ ಡಾ.ಮಹೇಶ ಜೋಶಿ ಅವರೊಂದಿಗೆ ಚರ್ಚಿಸಿ ಸದಸ್ಯತ್ವ ಹೆಚ್ಚಳ ಮಾಡುತ್ತೇವೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಪ್ರಕಟಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸದಸ್ಯರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಆಗಿರಲಿಲ್ಲ. ಇನ್ನು ಮುಂದೆ ಎಲ್ಲರನ್ನೂ ತೊಡಗಿಸಿಕೊಂಡು ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಕಾರ್ಯಕ್ರಮಗಳನ್ನು ನಿಯಮಿತವಾಗಿ ನಡೆಯುವಂತೆ ಯೋಜನೆ ರೂಪಿಸಲಾಗುವುದು’ ಎಂದರು.

‘ಕೆಲವೇ ದಿನಗಳಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಪದಾಧಿಕಾರಿಗಳನ್ನು ಪೂರ್ಣ ಪ್ರಮಾಣದಲ್ಲಿ ನೇಮಕ ಮಾಡಲಾಗುವುದು. ತಾಲ್ಲೂಕು ಅಧ್ಯಕ್ಷರನ್ನು ಆ ಭಾಗದ ಕಸಾಪ ಸದಸ್ಯರು, ಹಿರಿಯರ ಅಭಿಪ್ರಾಯ ಪಡೆದು ನೇಮಕ ಮಾಡಲಾಗುವುದು. ಇದೇ 12ರಂದು ಕಲಬುರಗಿಯ ಕಸಾಪ ಕಚೇರಿಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರು, ಗೌರವ ಕಾರ್ಯದರ್ಶಿಗಳು, ಕೋಶಾಧ್ಯಕ್ಷರು ಹಾಗೂ ಸದಸ್ಯರ ಅಧಿಕಾರ ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದು ಹೇಳಿದರು. ‌

‘ಕನ್ನಡ ಭವನದಲ್ಲಿರುವ ಬಾಪೂಗೌಡ ದರ್ಶನಾಪೂರ ರಂಗಮಂದಿರದಲ್ಲಿ ಮಾರಾಟ ಮೇಳಕ್ಕೆ ಬಾಡಿಗೆ ಕೊಡುವುದನ್ನು ತಕ್ಷಣಕ್ಕೆ ನಿಲ್ಲಿಸುವುದಿಲ್ಲ. ಆದರೆ, ಅಲ್ಲಿ ಹೆಚ್ಚು ಕಸಾಪ ಕಾರ್ಯಕ್ರಮಗಳನ್ನು ನಡೆಸಲು ಆದ್ಯತೆ ನಡೆಸಲಾಗುವುದು. ಚಿತ್ರಕಲಾ ಪ್ರದರ್ಶನ, ಸಂಗೀತ ಗೋಷ್ಠಿಗಳನ್ನು ರಂಗಮಂದಿರದಲ್ಲಿ ನಿಯಮಿತವಾಗಿ ಆಯೋಜಿಸಲಾಗುವುದು’ ಎಂದರು.

ಸದ್ಯಕ್ಕೆ ಕಸಾಪ ಚಟುವಟಿಕೆಗಳನ್ನು ನಿರ್ವಹಣೆ ಮಾಡಲು ಯಾವುದೇ ಹಣಕಾಸಿನ ತೊಂದರೆ ಇಲ್ಲ. ರಂಗಮಂದಿರ ಹಾಗೂ ಸುವರ್ಣ ಭವನದಲ್ಲಿ ನಡೆಯುವ ಕಾರ್ಯಕ್ರಮಗಳಿಂದ ಬಾಡಿಗೆ ಬರುತ್ತಿದೆ. ಸ್ವಂತ ಭವನವೇ ಇರುವುದರಿಂದ ಕಸಾಪ ಕಾರ್ಯಕ್ರಮಗಳನ್ನು ಆಯೋಜಿಸಲು ಹೆಚ್ಚು ಖರ್ಚು ತಗಲುವುದಿಲ್ಲ ಎಂದು ತೇಗಲತಿಪ್ಪಿ ತಿಳಿಸಿದರು.

ಕೆಲವು ತಾಲ್ಲೂಕುಗಳಲ್ಲಿ ಕನ್ನಡ ಭವನಗಳಿಲ್ಲ. ಆ ಕೊರತೆಯನ್ನು ನೀಗಿಸಲು ಶೀಘ್ರವೇ ಆಯಾ ಕ್ಷೇತ್ರಗಳ ಸದಸ್ಯರನ್ನು ಭೇಟಿ ಮಾಡಿ ನಿವೇಶನ ಒದಗಿಸುವಂತೆ ಕೋರಿಕೆ ಸಲ್ಲಿಸಲಾಗುವುದು. ನಿವೇಶನ ಮಂಜೂರಾತಿ ಪಡೆದು ಕಟ್ಟಡ ನಿರ್ಮಿಸಲಾಗುವುದು. ಈಗಾಗಲೇ ಇರುವ ತಾಲ್ಲೂಕು ಕನ್ನಡ ಭವನದಲ್ಲಿ ಸಕ್ರಿಯವಾಗಿ ಸಾಹಿತ್ಯಿಕ ಕಾರ್ಯಕ್ರಮಗಳನ್ನು ನಡೆಸುವಂತೆ ಉತ್ತೇಜಿಸಲಾಗುವುದು ಎಂದು ಹೇಳಿದರು.

ಸುರೇಶ ಬಡಿಗೇರ, ಶಿವರಾಜ ಅಂಡಗಿ, ಶರಣರಾಜ ಛಪ್ಪರಬಂದಿ ಗೋಷ್ಠಿಯಲ್ಲಿದ್ದರು.

ಬಡಿಗೇರ, ಅಂಡಗಿ ನೇಮಕ

ಜಿಲ್ಲಾ ಕಸಾಪ ನೂತನ ಗೌರವ ಕಾರ್ಯದರ್ಶಿಗಳನ್ನಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ, ಶರಣ ಸಾಹಿತ್ಯ ಪರಿಷತ್ತಿನ ಯುವ ಘಟಕದ ಅಧ್ಯಕ್ಷ ಶಿವರಾಜ ಎಸ್.ಅಂಡಗಿ ಹಾಗೂ ಗೌರವ ಕೋಶಾಧ್ಯಕ್ಷರನ್ನಾಗಿ ಶರಣರಾಜ್ ಛಪ್ಪರಬಂದಿ ಅವರನ್ನು ನೇಮಿಸಲಾಗಿದೆ ಎಂದು ವಿಜಯಕುಮಾರ ತೇಗಲತಿಪ್ಪಿ ತಿಳಿಸಿದರು.

ಪೂರ್ಣ ಪ್ರಮಾಣದ ಜಿಲ್ಲಾ ಘಟಕವನ್ನು ಶೀಘ್ರ ನೇಮಕ ಮಾಡಲಾಗುವುದು. ಇಬ್ಬರು ಮಹಿಳಾ ಪ್ರತಿನಿಧಿಗಳು ಇರಲಿದ್ದಾರೆ. ಮೂವರು ಗೌರವ ಕಾರ್ಯದರ್ಶಿಗಳನ್ನು ನೇಮಕ ಮಾಡುವ ಚಿಂತನೆ ಇದ್ದು, ಮತ್ತೊಬ್ಬ ಗೌರವ ಕಾರ್ಯದರ್ಶಿಯಾಗಿ ಮಹಿಳೆಯನ್ನು ನೇಮಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT