ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ‘ಪೋಕ್ಸೊ’ ಜಾಗೃತಿ ಜಾಥಾ

ಪ್ರಮುಖ ರಸ್ತೆಗಳಲ್ಲಿ ಅರಿವಿನ ನಡೆ, ಘೋಷಣೆ ಮೊಳಗಿಸಿದ ವಿವಿಧ ಶಾಲೆ, ಕಾಲೇಜು ಮಕ್ಕಳು
Last Updated 13 ನವೆಂಬರ್ 2021, 4:52 IST
ಅಕ್ಷರ ಗಾತ್ರ

ಕಲಬುರಗಿ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯುವ ‘ಪೋಕ್ಸೊ’ ಮತ್ತು ಹದಿಹರೆಯದ ಹೆಣ್ಣು ಮಕ್ಕಳ ರಕ್ಷಣೆಗೆ ಇರುವ ಕಾಯ್ದೆಗಳ ಅರಿವು ಮೂಡಿಸಲು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ನಾಗರಿಕರ ಚಿತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು.‌‌

ಇಲ್ಲಿನ ಸಬರ್ಬನ್‌ ಪೊಲೀಸ್ ಉಪ ವಿಭಾಗ ಮತ್ತು ಸಬರ್ಬನ್‌ ಪೊಲೀಸ್‌ ಠಾಣೆಯ ವತಿಯಿಂದ ಹಮ್ಮಿಕೊಂಡಿದ್ದ ಜಾಥಾಗೆ ಡಿಸಿಪಿ ಅಡ್ಡೂರು ಶ್ರೀನಿವಾಸಲು ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ನಗರ ಪೊಲೀಸ್‌ ಕಮಿಷನರ್ ಕಚೇರಿಯಿಂದ ಆರಂಭವಾದ ಜಾಥಾವು ಜಗತ್‌ ವೃತ್ತದ ಮಾರ್ಗವಾಗಿ ಸಾಗಿ, ಸಿದ್ಧಿಪಾಷಾ ದರ್ಗಾ, ಕೆಬಿಎನ್ ಆಸ್ಪತ್ರೆ, ಜಿಲ್ಲಾಧಿಕಾರಿಗಳ ಕಚೇರಿ ರಸ್ತೆಯ ಮೂಲಕ ಸಂಚರಿಸಿ, ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತ ತಲುಪಿತು. ಅಲ್ಲಿ ಕೆಲ ಕಾಲ ಸಭೆಯಾಗಿ ಮಾರ್ಪಟ್ಟಿತು.

ನಗರದ ವಿವಿಧ ಶಾಲೆ ಹಾಗೂ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರೂ ಜಾಥಾದಲ್ಲಿ ಪಾಲ್ಗೊಂಡರು. ‘ಭೇಟಿ ಬಚಾವೋ, ಭೇಟಿ ಪಢಾವೋ...’ ಎಂಬ ಘೋಷಣೆ ನಿರಂತರ ಮೊಳಗಿಸಿದರು. ವಿದ್ಯಾರ್ಥಿನಿಯರು, ಯುವತಿಯರು, ಉದ್ಯೋಗಸ್ಥ ಮಹಿಳೆಯರು ತಮ್ಮ ವೈಯಕ್ತಿಕ ಸುರಕ್ಷತೆ ಅಗತ್ಯ ಎಂಬ ಬಿತ್ತಿಪ‍ತ್ರಗಳನ್ನು ಪ್ರದರ್ಶಿಸಿದರು. ಹೆಣ್ಣುಮಕ್ಕಳ ಮಹತ್ವ ಅರಿಯಿರಿ, ಅವರ ರಕ್ಷಣೆಗೆ ಮುಂದಾಗಿ ಎಂಬ ಸಂದೇಶ ಸಾರುವ ಕರಪತ್ರಗಳನ್ನು ಹಂಚಿದರು. ಹೆಣ್ಣು ಅಬಲೆಯಲ್ಲ ಸಬಲೆ, ಶಿಕ್ಷಣವೇ ಹೆಣ್ಣುಮಕ್ಕಳಿಗೆ ನೀಡುವ ಒಡವೆ... ಎಂಬ ನಾಣ್ಣುಡಿಗಳನ್ನು ಮಾರ್ಗದುದ್ದಕ್ಕೂ ಹೇಳಿದರು.‌

ತುರ್ತು ಸಹಾಯಕ್ಕೆ 112 ಸಂಖ್ಯೆಗೆ ಕರೆ ಮಾಡಿ ಅಥವಾ ಹತ್ತಿರದ ಪೊಲೀಸ್‌ ಠಾಣೆಗೆ ಓಡಿಬನ್ನಿ ಎಂದೂ ಮಕ್ಕಳಿಗೆ ತಿಳಿಹೇಳಲಾಯಿತು.‌

ಉತ್ತರ ಉಪ ವಿಭಾಗದ ಎಸಿಪಿ ದೀಪನ್, ಸಬರ್ಬನ್ ಉಪ ವಿಭಾಗದ ಎಸಿಪಿ ಜೆ.ಎಚ್.ಇನಾಮದಾರ, ಇನ್‍ಸ್ಪೆಕ್ಟರ್‌ಗಳಾದ ಪಂಡಿತ ಸಗರ, ಭಾಸು ಚವ್ಹಾಣ, ಶಾಂತಿನಾಥ, ರಾಘವೇಂದ್ರ, ಸಿದ್ಧರಾಮೇಶ ಗಡಾದ, ಪ್ರದೀಪ ಸಾಗರ, ಸಂತೋಷ ತಟ್ಟೆಪಳ್ಳಿ, ಪಿಎಸ್‍ಐಗಳಾದ ಭಾರತಿಬಾಯಿ ಧನ್ನಿ, ಶ್ರೀಶೈಲಮ್ಮ, ಸಾವಿತ್ರಮ್ಮ, ಕಾಶೀಬಾಯಿ, ಯಶೋದಾ ಕಟಕೆ, ಶಿಕ್ಷಕಿ ಕವಿತಾ, ವಿದ್ಯಾರ್ಥಿನಿ ಗಾಯತ್ರಿ ಜಾಥಾದ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT