ಭಾನುವಾರ, ಸೆಪ್ಟೆಂಬರ್ 22, 2019
27 °C
ಕಲಬುರ್ಗಿಯ ನೂತನ ಪೊಲೀಸ್‌ ಕಮಿಷನರ್‌ ಎಂ.ಎನ್‌.ನಾಗರಾಜ ಸುದ್ದಿಗೋಷ್ಠಿ

ಜನಸ್ನೇಹಿ ಪೊಲೀಸ್‌ ವ್ಯವಸ್ಥೆ ಜಾರಿಗೆ ಯತ್ನ

Published:
Updated:
Prajavani

ಕಲಬುರ್ಗಿ: ಪೊಲೀಸರೆಂದರೆ ಜನರು ಹೆದರುವ ಪರಿಸ್ಥಿತಿ ಇದ್ದು, ಈ ಭಾವನೆಯನ್ನು ಹೋಗಲಾಡಿಸಿ ಜನಸ್ನೇಹಿ ಪೊಲೀಸ್‌ ವ್ಯವಸ್ಥೆಯನ್ನು ರೂಪಿಸಲು ಪ್ರಯತ್ನಿಸುವೆ ಎಂದು ನೂತನ ಪೊಲೀಸ್‌ ಕಮಿಷನರ್‌ ಎಂ.ಎನ್‌.ನಾಗರಾಜ ಭರವಸೆ ನೀಡಿದರು.

ಕಮಿಷನರೇಟ್‌ನ ಮೊದಲ ಪೂರ್ಣ ಪ್ರಮಾಣದ ಕಮಿಷನರ್‌ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ‘ಬಡಾವಣೆಯ ಪ್ರತಿಯೊಂದು ಮನೆಗೂ ನಮ್ಮ ಪೊಲೀಸರು ಭೇಟಿ ನೀಡಲಿದ್ದಾರೆ. ಏನಾದರೂ ಅನಾಹುತಗಳು, ಕಳ್ಳತನದಂತಹ ಪ್ರಕರಣಗಳು ನಡೆದ ಸಂದರ್ಭದಲ್ಲಿ ಯಾರನ್ನು ಸಂಪರ್ಕಿಸಬೇಕು ಎಂಬ ಬಗ್ಗೆ ಮಾಹಿತಿಯುಳ್ಳ ಕರಪತ್ರಗಳನ್ನು ಮನೆ ಮನೆಗೆ ತಲುಪಿಸಲಿದ್ದಾರೆ. ಮನೆಯ ಮುಖ್ಯಸ್ಥರ ಮೊಬೈಲ್‌ ಸಂಖ್ಯೆಯನ್ನು ಪಡೆಯಲಿದ್ದು, ಆ ವ್ಯಾಪ್ತಿಯ ಪೊಲೀಸ್‌ ಠಾಣೆ ಹಾಗೂ ತಮ್ಮ ಮೊಬೈಲ್‌ ಸಂಖ್ಯೆಗಳನ್ನು ಪೊಲೀಸರು ಹಂಚಿಕೊಳ್ಳಲಿದ್ದಾರೆ. ಇದರಿಂದಾಗಿ ತುರ್ತು ಸಂದರ್ಭಗಳಲ್ಲಿ ಸಂಪರ್ಕಿಸಲು ಸಹಕಾರಿಯಾಗಲಿದೆ’ ಎಂದರು.

ಆಟೊ ರಿಕ್ಷಾ ಸಂಘಟನೆಗಳೊಂದಿಗೆ ಮಾತುಕತೆ: ‘ಎಲ್ಲೆಲ್ಲಿ ರಿಕ್ಷಾ ನಿಲ್ದಾಣಗಳಿವೆ ಎಂಬ ಮಾಹಿತಿ ಕಲೆ ಹಾಕುತ್ತೇನೆ. ಆಟೊ ರಿಕ್ಷಾ ಸಂಘಟನೆಗಳ ಸದಸ್ಯರ ಸಭೆ ಕರೆದು ಕಟ್ಟುನಿಟ್ಟಾಗಿ ಮೋಟಾರು ವಾಹನ ಕಾಯ್ದೆಯನ್ನು ಪಾಲಿಸುವಂತೆ ಕಟ್ಟುನಿಟ್ಟಿನ ಚಾಲನೆ ನೀಡಲಾಗುವುದು. ಆರಕ್ಕಿಂತ ಹೆಚ್ಚು ಶಾಲಾ ಮಕ್ಕಳನ್ನು ಕರೆದೊಯ್ಯುವಂತಿಲ್ಲ. ಈ ನಿಯಮ ಉಲ್ಲಂಘನೆಯಾದರೆ ಚಾಲಕರ ಲೈಸೆನ್ಸ್‌ ಹಾಗೂ ಆರ್‌.ಸಿ. ರದ್ದುಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಕಮಿಷನರೇಟ್‌ ಆದ ಬಳಿಕ ನಗರದ ವಿವಿಧ ಠಾಣೆಗಳಿಗೆ ಪೊಲೀಸ್‌ ಸಿಬ್ಬಂದಿ ಅಗತ್ಯವಿದೆ. 887 ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್‌ನವರು ನಮಗೆ ಕೊಡಬೇಕಿದೆ. 543 ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕಿದೆ. ಅಂದಾಗ ಕಾನೂನು ಮತ್ತು ಸುವ್ಯವಸ್ಥೆ, ಸಂಚಾರ, ಅಪರಾಧ ಪ್ರಕರಣಗಳ ನಿರ್ವಹಣೆಯನ್ನು ಇನ್ನಷ್ಟು ದಕ್ಷತೆಯಿಂದ ಮಾಡಬಹುದು. 

ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಡಿ.ಕಿಶೋರಬಾಬು, ಎಸಿಪಿ ವಿಜಯಕುಮಾರ್‌ ಸಿ.ಎಚ್‌. ಗೋಷ್ಠಿಯಲ್ಲಿದ್ದರು.

Post Comments (+)