ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಹಸಿರಾದ ನೀರು- ನಿವಾಸಿಗಳಿಗೆ ದಿಗಿಲು

Last Updated 11 ಜೂನ್ 2022, 4:58 IST
ಅಕ್ಷರ ಗಾತ್ರ

ಕಲಬುರಗಿ: ನಗರದಶೋರ್ ಗುಂಬಜ್ ಸಮೀಪದ ಪುರಸಭೆ ನೀರು ಶುದ್ಧೀಕರಣ ಘಟಕದಿಂದ ಪೂರೈಕೆ ಆಗುತ್ತಿರುವ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ರೋಗ ಭೀತಿಯ ಆತಂಕದಿಂದ ನಿವಾಸಿಗಳು ಆ ನೀರನ್ನು ಮನೆಗೆಲಸಕ್ಕೆ ಬಳಸಲು ಹಿಂದೇಟು ಹಾಕುತ್ತಿದ್ದಾರೆ.

ಪುರಸಭೆ ನೀರು ಶುದ್ಧೀಕರಣ ಘಟಕವನ್ನು ಎಲ್‌ ಆ್ಯಂಡ್‌ ಟಿ ಕಂಪನಿ ನಿರ್ವಹಿಸುತ್ತದೆ. ಇಲ್ಲಿನ ನೀರು ವಿವೇಕಾನಂದ ನಗರ, ಲಕ್ಷ್ಮಿ ನಗರ, ಮಾತಾ ಮಾಣಿಕೇಶ್ವರಿ ನಗರ, ದೇವಿ ನಗರ, ಸಂಗಮತಾಯಿ ಕಾಲೊನಿ, ಸಂತೋಷ ಕಾಲೊನಿ ಸೇರಿ ಹಲವಡೆ ಪೂರೈಕೆ ಆಗುತ್ತದೆ.

‘ನಲ್ಲಿಯಿಂದ ಬಂದ ನೀರು ಸೋಸಿದರೂ ನೀರಿನ ಹಸಿರು ಬಣ್ಣ ಬದಲಾಗುತ್ತಿಲ್ಲ. ಒಂದೆರಡು ದಿನ ಬಿಟ್ಟರೆ ಪಾಚಿಯಾದ ಹಸಿರ ನೀರಿನಲ್ಲಿ ಚಿಕ್ಕ ಹುಳುಗಳು ಕಾಣಿಸಿಕೊಂಡು ದುರ್ವಾಸನೆ ಬರುತ್ತದೆ. ಕನಿಷ್ಠ ಶೌಚಾಲಯಕ್ಕೂ ಬಳಸಲು ಯೋಗ್ಯವಾಗಿಲ್ಲ. ಆದರೆ, ತಿಂಗಳಿಗೆ ತಪ್ಪದೆ ನೀರಿನ ಬಿಲ್‌ ವಸೂಲಿ ಮಾಡಲಾಗುತ್ತದೆ’ ಎಂದು ವಿವೇಕಾನಂದ ನಗರದ ನಿವಾಸಿ ಆರತಿ ಸಂಜಯ್ ಸಿಂಗ್ ತಿಳಿಸಿದರು.

‘ಪಾಚಿ ನೀರು ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮಕ್ಕಳಿಗೆ ಸ್ನಾನ ಮಾಡಿಸಲು ಆಗುತ್ತಿಲ್ಲ. ಮಧ್ಯಮ ವರ್ಗದವರು ದುಡಿದ ಹಣವನ್ನೆಲ್ಲ ನೀರಿಗಾಗಿ ಖರ್ಚು ಮಾಡುವಂತಹ ಪರಿಸ್ಥಿತಿ ಇದೆ. ಬಡಾವಣೆಯ ನಿವಾಸಿಗಳು ನಿತ್ಯವೂ ನರಕ ಯಾತನೆ ಅನುಭವಿಸುತ್ತಿದ್ದಾರೆ’ ಎಂದು ಅವರು ಹೇಳಿದರು.

‘ಮಲಿನ ನೀರಿನ ಕುರಿತು ದೂರು ನೀಡಿದ ಬಳಿಕ ಎಂಜಿನಿಯರ್ ಬಂದು, ಪರೀಕ್ಷೆಗೆಂದು ನೀರನ್ನು ಒಯ್ದರು. ಆದರೆ, ಶುದ್ಧ ನೀರು ಇನ್ನೂ ಪೂರೈಕೆಯಾಗುತ್ತಿಲ್ಲ. ಶುದ್ಧ ನೀರಿಗಾಗಿ ಪಾಲಿಕೆಗೆ, ಅಧಿಕಾರಿಗಳಿಗೆ ಕೋರಿದರೂ ಪ್ರಯೋಜನ ವಾಗಿಲ್ಲ.’ ಎಂದು ಮತ್ತೊಬ್ಬ ನಿವಾಸಿ ಸಾತಲಿಂಗ ಮಟೇಕಾರ ತಿಳಿಸಿದರು.

‘ಗಲೀಜು ನೀರು ಸ್ನಾನಕ್ಕೆ ಬಳಸುವುದರಿಂದ ಮೈಯಲ್ಲವೂ ತುರಿಕೆಯಾಗುತ್ತಿದೆ. ತಲೆಗೂದಲು ಉದುರುತ್ತವೆ. ಕಲುಷಿತ ನೀರು ಬಳಸುವುದರಿಂದ ಚರ್ಮ ಸಂಬಂಧಿತ ರೋಗಗಳ ಭೀತಿ ಆವರಿಸಿದೆ. ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು’ ಎಂದು ಅವರು ಹೇಳಿದರು.

‘ಶುದ್ಧೀಕರಣಕ್ಕೆ ಹಳೆ ಯಂತ್ರಗಳ ಬಳಕೆ’

‘ನಂದಿಕೂರನಲ್ಲಿನ ಚರಂಡಿ ನೀರು ಶುದ್ಧೀಕರಣ ಘಟಕ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದ ಕೊಳಚೆ ನೀರು ನೇರವಾಗಿ ಭೀಮಾ ನದಿಗೆ ಸೇರುತ್ತಿದೆ. ನದಿಯ ಹರಿಯುವಿಕೆ ಸಹ ನಿಂತಿದ್ದು, ಗಲೀಜಾದ ನದಿ ನೀರು ಪುರಸಭೆಯ ಜಲ ಶುದ್ಧೀಕರಣ ಘಟಕ ಮರಳಿ ಬರುತ್ತಿದೆ’ ಎಂದು ಎಲ್‌ ಆ್ಯಂಡ್ ಟಿ ಸಾಮಾಜಿಕ ಅಭಿವೃದ್ಧಿ ಅಧಿಕಾರಿ ಎಸ್.ವೈ.ಸಾಲಿಮನಿ ತಿಳಿಸಿದರು.

‘ಇಲ್ಲಿನ ಶುದ್ಧೀಕರಣ ಯಂತ್ರಗಳು 20 ವರ್ಷಗಳಷ್ಟು ಹಳೆಯದು. ಒಮ್ಮೆಯೂ ದುರಸ್ತಿಯಾಗಿಲ್ಲ. ಎಷ್ಟೇ ಪ್ರಯತ್ನಿಸಿದರೂ ಶುದ್ಧೀಕರಣದ ಗುಣಮಟ್ಟ ಸುಧಾರಿಸುತ್ತಿಲ್ಲ. ಹೆಚ್ಚಿನ ಟ್ರೀಟ್‌ಮೆಂಟ್ ಬಳಸಿ ಶುದ್ಧೀಕರಿಸಿದರೆ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ನೀರು ಶುದ್ಧೀಕರಣಕ್ಕೆ ಶಕ್ತಿ ಮೀರಿ ಯತ್ನಿಸುತ್ತಿದ್ದೇವೆ’ ಎಂದರು. ‘ಕೆಲ ಬಡಾವಣೆಗಳ ನಿವಾಸಿಗಳು ಅಕ್ರಮವಾಗಿ ಕೊಳವೆ ಮಾರ್ಗ ಸಂಪರ್ಕ ಪಡೆದಿದ್ದಾರೆ. ನೀರು ಪಡೆದ ಬಳಿಕ ಹಾಗೆಯೇ ಬಿಡುತ್ತಿದ್ದಾರೆ. ಪೈಪ್‌ಗಳಲ್ಲಿನ ರಂದ್ರಗಳಲ್ಲಿ ಚರಂಡಿ ನೀರು ಸೇರ್ಪಡೆ ಆಗುತ್ತಿದೆ. ಇದರಿಂದ ಮನೆಗಳ ನಲ್ಲಿಗಳಿಗೆ ಹಸಿರು ಬಣ್ಣಕ್ಕೆ ತಿರುಗುತ್ತಿದೆ’ ಎಂದು ಅವರು ಹೇಳಿದರು. ‘ನಲ್ಲಿ ನೀರು ಬಿಟ್ಟ 30 ನಿಮಿಷದ ಬಳಿಕ ಶುದ್ಧ ನೀರು ಬರುತ್ತದೆ. ಘಟಕದಲ್ಲಿ ಈಗಿರುವ ತಂತ್ರಜ್ಞಾನ 40 ವರ್ಷಗಳಷ್ಟು ಹಳೆಯದು. ಏರುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಕಾರ್ಯಕ್ಷಮತೆ ಹೆಚ್ಚಿರುವ ಯಂತ್ರಗಳ ಅಗತ್ಯವಿದೆ’ ಎಂದು ಅವರು ತಿಳಿಸಿದರು.

*ತಿಂಗಳಿಗೆ ನಾಲ್ಕು ಬಾರಿ ಹಸಿರು ಬಣ್ಣದ ನೀರು ಪೂರೈಸಲಾಗುತ್ತದೆ. ತಿಂಗಳಿಗೆ ತಪ್ಪದೇ ₹172 ಬಿಲ್ ವಸೂಲಿ ಮಾಡುತ್ತಾರೆ. ಎಷ್ಟೇ ಕೋರಿದರೂ ಶುದ್ಧ ನೀರು ಮಾತ್ರ ಪೂರೈಸುತ್ತಿಲ್
-ಆರತಿ ಸಂಜಯ್ ಸಿಂಗ್, ವಿವೇಕಾನಂದ ನಗರ ನಿವಾಸಿ

*ಶುದ್ಧ ನೀರು ಪೂರೈಸುವಂತೆ ಮನವಿ ಮಾಡಿದರೂ ಯಾರೂ ಸ್ಪಂದಿಸುತ್ತಿಲ್ಲ. ಉಳ್ಳವರು ಹಣ ಕೊಟ್ಟು ಖರೀದಿಸಿದರೇ ಬಡವರು ಅಶುದ್ಧ ನೀರನ್ನೇ ಬಳಸುತ್ತಿದ್ದಾರೆ
-ಸಾತಲಿಂಗ ಮಟೇಕಾರ, ವಿವೇಕಾನಂದ ನಗರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT