ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತೃತೀಯ ಲಿಂಗಿಗಳನ್ನು ಮನುಷ್ಯರಂತೆ ಕಾಣಿ’

ರಾಮನಗರ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂವಾದ ಕಾರ್ಯಕ್ರಮ
Last Updated 17 ಮಾರ್ಚ್ 2018, 8:57 IST
ಅಕ್ಷರ ಗಾತ್ರ

ರಾಮನಗರ: ಸಮಾಜ ಹಾಗೂ ಸರ್ಕಾರಗಳು ಲೈಂಗಿಕ ಅಲ್ಪಸಂಖ್ಯಾತರನ್ನು ಕೀಳಾಗಿ ಕಾಣುವ ಮನೋಭಾವ ಬದಲಾಗಬೇಕಿದೆ ಎಂದು ತೃತೀಯ ಲಿಂಗಿ ಸಮುದಾಯದ ಸಂಪನ್ಮೂಲ ವ್ಯಕ್ತಿ ಸೌಮ್ಯ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ, ತೃತೀಯ ಲಿಂಗಿ ಸಮುದಾಯದವರು ಬದುಕಿನಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅವರು ಮಾತನಾಡಿದರು.

‘ಕುಟುಂಬ ಮತ್ತು ಸಮುದಾಯ ಎರಡೂ ನಮ್ಮನ್ನು ದೂರ ಮಾಡುತ್ತವೆ. ಇಂತಹ ಸ್ಥಿತಿಯಲ್ಲಿ ಏಕಾಂಗಿಯಾಗುವ ನಾವು ಅನಿವಾರ್ಯವಾಗಿ ಲೈಂಗಿಕ ಕಾರ್ಯಕರ್ತೆಯರಾಗಿ ಅಥವಾ ಬಿಕ್ಷಾಟನೆಯಲ್ಲಿ ತೊಡಗಿಕೊಳ್ಳಬೇಕಾಗುತ್ತದೆ’ ಎಂದರು.

ತೃತೀಯ ಲಿಂಗಿಗಳಿಗಾಗಿಯೇ ಸುಪ್ರೀಂ ಕೋರ್ಟ್ 2014ರಲ್ಲಿ ನೀಡಿರುವ ತೀರ್ಪಿನ ಅನ್ವಯ ಅವರನ್ನು ಒಬಿಸಿ ಎಂದು ಪರಿಗಣಿಸಿ ಆಯಾ ರಾಜ್ಯ ಸರ್ಕಾರಗಳು ಮಾರ್ಗದರ್ಶಿ ಸೂತ್ರಗಳನ್ನು ರಚಿಸಬೇಕೆಂದಿದೆ. ಆದರೂ ಬಹಳಷ್ಟು ರಾಜ್ಯಗಳು ಈ ಪ್ರಯತ್ನ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

‘ನಮ್ಮಂತಹ ಲಿಂಗತ್ವ ಅಲ್ಪಸಂಖ್ಯಾತರನ್ನು ಸಮಾಜ, ಕುಟುಂಬ ಹಾಗೂ ಸರ್ಕಾರಗಳು ಮೊದಲು ಮನುಷ್ಯರಾಗಿ ಕಾಣುವ ಮನೋಭಾವವನ್ನು ತಾಳಬೇಕು. ಹೆಣ್ಣು ಮತ್ತು ಗಂಡುಗಳು ತಮಗೆ ದಕ್ಕುವ ಎಲ್ಲಾ ಸ್ಥಾನಮಾನಗಳನ್ನು ನಮಗೂ ದಕ್ಕಿಸಿಕೊಳ್ಳುವ ಅವಕಾಶವನ್ನು ಸಮಾಜ ನೀಡಬೇಕಾಗುತ್ತದೆ’ ಎಂದರು.

ಸಮಾಜ ವಿಜ್ಞಾನ ವಿಭಾಗದ ಮುಖ್ಯಸ್ಥ ಮೋಹನ್‌ದಾಸ್‌ ಮಾತನಾಡಿ, ಸ್ವಾಭಾವಿಕವಾಗಿ ಪುರುಷ ಅಥವಾ ಮಹಿಳೆಯರ ಪಡಿಯಚ್ಚುಗಳಿಂದ ಭಿನ್ನವಾಗಿರುವ ಮೂರನೇ ಲಿಂಗವಾಗಿ ತಮ್ಮನ್ನು ಗುರುತಿಸಿಕೊಳ್ಳುತ್ತಿರುವ ಇವರ ಸಮೂಹ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ವರ್ಗದ ಜನರು ಸಂಪನ್ಮೂಲ ಬಳಕೆಯಲ್ಲಿ ತಾರತಮ್ಯವನ್ನು ಎದುರಿಸುತ್ತಿದೆ ಎಂದು ತಿಳಿಸಿದರು.

ಸಾರ್ವಜನಿಕ ಸಂಪನ್ಮೂಲ ಬಳಕೆಯ ಅಧಿಕಾರದಿಂದ ಇವರು ವಂಚಿತರಾಗಿದ್ದಾರೆ. ನಿರಂತರವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಕಿರುಕುಳ, ಹಿಂಸೆ, ಸೇವೆಗಳನ್ನು ನೀಡಲು ನಿರಾಕರಣೆ, ಅವಮಾನಕರ ಮತ್ತು ಅವಹೇಳನಕಾರಿಯಾಗಿ ನಡೆಸಿಕೊಳ್ಳುವುದು, ಹಿಯಾಳಿಕೆ, ಬೈಗುಳ, ಅಲ್ಲದೇ ಲೈಂಗಿಕ ಕಿರುಕುಳ ಮತ್ತು ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದರು.

ಕಾಲೇಜಿನ ಪ್ರಾಚಾರ್ಯೆ ಟಿ.ಡಿ. ಕನಕಾ, ಮನಶಾಸ್ತ್ರಜ್ಞ ಡಾ. ಆದರ್ಶ, ಸಾಮಾಜಿಕ ಕಾರ್ಯಕರ್ತೆ ಎಸ್. ಪದ್ಮರೇಖಾ, ತೃತೀಯ ಲಿಂಗಿಗಳಾದ ಕ್ರಿಸ್ತಯರಾಜ್, ಅರುಂಧತಿ ಇದ್ದರು.

*
ಹುಟ್ಟುವಾಗ ಹೆಣ್ಣಾಗಿದ್ದವಳು ಮುಂದೆ ಗಂಡಾಗುವ ಹಾಗೂ ಗಂಡಾಗಿದ್ದವನು ಹೆಣ್ಣಾಗುವ ಸ್ಥಿತ್ಯಂತರದಲ್ಲಿ ಆಗುವ ದೈಹಿಕ ಮತ್ತು ಮಾನಸಿಕ ಘಾಸಿಯನ್ನು ತಡೆದುಕೊಳ್ಳುವಲ್ಲಿ ನಾವು ಸಾಕಷ್ಟು ಕಷ್ಟ ಎದುರಿಸುತ್ತೇವೆ.
–ಸೌಮ್ಯ, ಸಂಪನ್ಮೂಲ ವ್ಯಕ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT