ಸೇಡಂ: ‘ಪದವಿ ಪಡೆದು ಬರೆದ ಸಾಹಿತ್ಯದ ಬರಹಕ್ಕಿಂತ ಅನುಭವದಿಂದ ಹೊರಬಂದ ಸಾಹಿತ್ಯಕ್ಕೆ ಹೆಚ್ಚಿನ ಮೌಲ್ಯವಿದೆ’ ಎಂದು ನೃಪತುಂಗ ಅಧ್ಯಯನ ಸಂಸ್ಥೆ ಅಧ್ಯಕ್ಷ ಪ್ರಭಾಕರ ಜೋಶಿ ಹೇಳಿದರು.
ಪಟ್ಟಣದ ಸಜ್ಜನಶೆಟ್ಟಿ ಕಲ್ಯಾಣ ಮಂಟಪದಲ್ಲಿ ಕವಿ ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನ ಮತ್ತು ಕೊಡೆಕಲ್ಲ ಚೆನ್ನಬಸವಣ್ಣ ಅಭಿಮಾನಿ ಜಂಟಿಯಾಗಿ ಶನಿವಾರ ಆಯೋಜಿಸಿದ್ಧ ಶಿಕ್ಷಕ ಮುರಗೆಪ್ಪ ಹಣಮನಳ್ಳಿ ರಚಿತ ಕೃತಿ ‘ಹ್ಯಾಂಗಾನ ಗುರುವು ಹ್ಯಾಂಗಾನೋ' ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ತತ್ವಪದಗಳು ಭಕ್ತಿಯಿಂದ ಉದ್ಭವಿಸಿವೆ. ಅವುಗಳು ಅಲೌಕಿಕ ಸಂಗತಿಗಳಿಂದ ಕೂಡಿರುತ್ತವೆ. ಓದುವುದಕ್ಕಿಂತ ಜೀವನದಲ್ಲಿ ಕಂಡುಕೊಂಡು, ಅಳವಡಿಸಿಕೊಳ್ಳುವುದು ಬಹಳ ಮುಖ್ಯವೆನಿಸುತ್ತದೆ. ಸೇಡಂನಿಂದ ವಿಭಿನ್ನ ಪ್ರಕಾರದ ಕೃತಿಗಳು ಹೊರಬರುತ್ತಿದ್ದು, ತತ್ವಪದಗಳು ಕೃತಿಗಳು ಪ್ರಕಟಗೊಳ್ಳುತ್ತಿರುವುದು ಶ್ಲಾಘನೀಯ’ ಎಂದರು.
ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ ಮಾತನಾಡಿ, ‘ತತ್ವ ಪದಗಳಲ್ಲಿ ಬಹಳ ಗೂಢಾರ್ಥಗಳಿವೆ. ಕಡಕೋಳ ಮಡಿವಾಳಪ್ಪನವರ ತತ್ವಪದಗಳು ಇಡೀ ಮನುಕುಲದೇಳಿಗೆಗೆ ಪ್ರೇರಣದಾಯಕವಾಗಿವೆ. ಮಹಾನ್ ವ್ಯಕ್ತಿಗಳು ಸಮಾಜಕ್ಕೆ ಸಂದೇಶ ನೀಡುವಾಗ ಸಮನ್ವಯದ ದೃಷ್ಟಿಯಿಂದ ನೀಡುತ್ತಾರೆ. ಅಂತಹ ತತ್ವ ಪದಗಳು ಸಮಾಜಕ್ಕೆ ಇಂದಿಗೂ ಪ್ರಸ್ತುತ ಎನಿಸಿಕೊಳ್ಳುತ್ತಿರುವುದು ಬರಹದಲ್ಲಿನ ವಿಚಾರದಿಂದ’ ಎಂದು ಹೇಳಿದರು.
ಹಿರಿಯ ಸಾಹಿತಿ ಲಿಂಗಾರೆಡ್ಡಿ ಶೇರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಸಾಗರ, ತತ್ವಪದಕಾರ ಮುರಗೆಪ್ಪ ಹಣಮನಳ್ಳಿ, ಕವಿ ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನ ಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ ಮಾತನಾಡಿದರು.
ತತ್ವಪದಕಾರ ಮುರಗೆಪ್ಪ ಹಣಮನಳ್ಳಿ, ಮಲ್ಕಮ್ಮ, ಮುಖಪುಟ ವಿನ್ಯಾಸಕ ಮಹಾದೇವರೆಡ್ಡಿ ಮುನ್ನೂರ ಅವರನ್ನು ಸತ್ಕರಿಸಲಾಯಿತು.
ಜಾಕನಪಲ್ಲಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಹಣಮಂತ, ಶಿಕ್ಷಕ ಕರಿಗೂಳಿ ದುಗನೂರ ಕಲಾ ತಂಡದವರಿಂದ ತತ್ವಪದ ಗಾಯನ ನಡೆಯಿತು.
ಅಜೀಮ್ ಪ್ರೇಮಜಿ ಫೌಂಡೇಶನ್ ತಾಲ್ಲೂಕು ಸಂಯೋಜಕ ಗಂಗಾಧ ಸ್ವಾಮಿ ಅವರು, ತತ್ವಪದಗಳ ಕೃತಿ ಪರಿಚಯಿಸಿದರು.
ಸರ್ಕಾರಿ ನೌಕರರ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಶಿವಶಂಕ್ರಯ್ಯಾಸ್ವಾಮಿ ಇಮಡಾಪುರ, ಸಮೂಹ ಸಂಪನ್ಮೂಲಗಲ ವ್ಯಕ್ತಿ ಹಂಪಯ್ಯ ವಿಶ್ವಕರ್ಮ, ರವಿರಾಜ ಆವಂಟಿ, ಮುರುಗೆಪ್ಪ ಹಣಮನಳ್ಳಿ, ಪ್ರತಿಷ್ಠಾನ ಕಾರ್ಯದರ್ಶಿ ಮಹಿಪಾಲರೆಡ್ಡಿ ಮುನ್ನೂರ, ಲಕ್ಷ್ಮಣ ರಂಜೋಳಕರ ಹಾಜರಿದ್ದರು.