ಗುರುವಾರ , ಸೆಪ್ಟೆಂಬರ್ 24, 2020
24 °C

ಕಲಬುರ್ಗಿ | ಪ್ರಮುಖ ಸ್ಥಳಗಳಿಗೆ ಭದ್ರತೆ ಒದಗಿಸಲು ಪ್ರಿಯಾಂಕ್‌ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಜಲಾಶಯ, ವಿದ್ಯುತ್ ಸ್ಥಾವರ, ವಿಮಾನ ನಿಲ್ದಾಣ ಹಾಗೂ ಹೈಕೋರ್ಟ್‌ಗೆ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತೆ ಪಡೆಯಿಂದ ಭದ್ರತೆ ಒದಗಿಸಬೇಕು’ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

‘ಭಯೋತ್ಪಾದಕರ‌ ದಾಳಿ ತಪ್ಪಿಸಲು ಹಾಗೂ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ರಾಜ್ಯದ ಪ್ರಮುಖ ಜಲಾಶಯಗಳು, ವಿದ್ಯುತ್ ಸ್ಥಾವರಗಳು, ವಿಮಾನ‌ನಿಲ್ದಾಣ ಹಾಗೂ ಹೈ ಕೋರ್ಟ್‌ಗೆ ಕರ್ನಾಟಕ‌ ರಾಜ್ಯ ಕೈಗಾರಿಕಾ‌ಭದ್ರತೆ ಪಡೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನೇಮಿಸಲಾಗಿದ್ದು, ನಾಲ್ಕು ಬಟಾಲಿಯನ್ ಕರ್ತವ್ಯ ನಿರ್ವಹಿಸುತ್ತಿವೆ. ಅದರಂತೆ, ಕಲ್ಯಾಣ ಕರ್ನಾಟಕ ಭಾಗದ ಬಿಟಿಪಿಎಸ್ ಕುಡಿತಿನಿ, ಕೇಂದ್ರ ಕಾರಾಗೃಹ ಬಳ್ಳಾರಿ ಹಾಗೂ‌ ಕಲಬುರ್ಗಿ ವಿಮಾನ ನಿಲ್ದಾಣಗಳಿಗೂ ಸದರಿ ಪಡೆ ಭದ್ರತೆ ಒದಗಿಸಿದೆ. ಆದರೆ‌, ಕಲ್ಯಾಣ ಕರ್ನಾಟಕ ಭಾಗದ ಇತರೆ ಬೃಹತ್ ಕೈಗಾರಿಕೆಗಳು, ಕಲಬುರ್ಗಿ ಹೈಕೋರ್ಟ್ ಸೇರಿದಂತೆ ಇತರೆ ಪ್ರಮುಖ ಸ್ಥಳಗಳಿಗೆ ಭದ್ರತೆ ಒದಗಿಸಲು ಮತ್ತೊಂದು ಬಟಾಲಿಯನ್ ಅವಶ್ಯಕತೆ ಇದೆ’ ಎಂದೂ ಅವರು ತಿಳಿಸಿದ್ದಾರೆ.

‘ರಾಯಚೂರು ಶಾಖೋತ್ಪನ್ನ ಕೇಂದ್ರ, ಯರಮರಸ್ ಶಾಖೋತ್ಪನ್ನ ಕೇಂದ್ರ, ಹಟ್ಟಿ ಚಿನ್ನದ ಗಣಿ, ತುಂಗಭದ್ರಾ ಜಲಾಶಯ, ಬಸವಸಾಗರ ಜಲಾಶಯ, ಕಾರಂಜಾ ಜಲಾಶಯ, ಕೇಂದ್ರ ಕಾರಾಗೃಹ ಕಲಬುರ್ಗಿ, ಬೀದರ್ ವಿಮಾನ ನಿಲ್ದಾಣ, ಜಿಂದಾಲ್ ವಿಮಾನ ನಿಲ್ದಾಣ– ತೋರಣಗಲ್, ಹೈ ಕೋರ್ಟ್– ಕಲಬುರ್ಗಿ, ನಾರಿಹಳ್ಳ ಜಲಾಶಯ, ಹಗರಿಬೊಮ್ಮನಹಳ್ಳಿ ಯೋಜನೆ, ಹಿರೇಹಳ್ಳ ಯೋಜನೆ, ಸಿಂಗಟಾಲೂರು ಏತ ನೀರಾವರಿ, ಮಸ್ಕಿ ನಾಲಾ ಯೋಜನೆ, ಕನಕ ನಾಲಾ ಯೋಜನೆ, ಬೆಣ್ಣೆತೊರಾ ಯೋಜನೆ, ಹರಿನಾಲಾ ಯೋಜನೆ, ಗಂಡೋರಿ‌ನಾಲಾ ಯೋಜನೆ, ಮುಲ್ಲಾಮಾರಿ, ಅಮರ್ಜಾ, ಭೀಮಾ‌ಏತ ನೀರಾವರಿ ಯೋಜನೆ ಹಾಗೂ ಮುನಿರಾಬಾದ್ ಪವರ್ ಸ್ಟೇಷನ್ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಭದ್ರತೆ ಒದಗಿಸಲು ಮುಂದಾಗಬೇಕು’ ಎಂದೂ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಕೊರೊನಾ ಸಾವಿನ ಪಟ್ಟಿಯಲ್ಲಿ ಜಿಲ್ಲೆಗೆ ಸ್ಥಾನ: ಪ್ರಿಯಾಂಕ್‌ ಬೇಸರ
ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಹೆಚ್ಚು ಕೊರೊನಾ ಸೋಂಕಿನ ಸಾವಿನ ಜಿಲ್ಲೆಗಳ ಪಟ್ಟಿಯಲ್ಲಿ ಕಲಬುರ್ಗಿಯೂ ಸ್ಥಾನ ಪಡೆದಿದ್ದಕ್ಕೆ ಶಾಸಕ ಪ್ರಿಯಾಂಕ್‌ ಖರ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

‘ಕೊರೊನಾ ಸೋಂಕಿನಿಂದಾಗಿ ರಾಷ್ಟ್ರದಲ್ಲಿಯೇ ಮೊಟ್ಟ ಮೊದಲ ಸಾವು ಕಲಬುರ್ಗಿಯಲ್ಲಿ ಸಂಭವಿಸಿ ದೇಶದ ಗಮನ ಸೆಳೆದಿತ್ತು. ಇದೀಗ ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಅತಿಹೆಚ್ಚು ಸಾವು ಸಂಭವಿಸಿದ ಜಿಲ್ಲೆಗಳ ಪಟ್ಟಿಯಲ್ಲಿಯೂ ಜಿಲ್ಲೆ ಸ್ಥಾನ ಪಡೆದಿದೆ. ಇದು ದುರ್ದೈವದ ಸಂಗತಿ’ ಎಂದು ಅವರು ಟ್ವೀಟ್‌ನಲ್ಲಿ ಬೇಸರ ಹೊರಹಾಕಿದ್ದಾರೆ.

‘ರಾಷ್ಟ್ರದಲ್ಲೇ ಮೊದಲ ಕೊರೊನಾ ಸಾವು ಕಲಬುರ್ಗಿಯಲ್ಲೇ ಸಂಭವಿಸಿದ್ದರೂ, ರಾಜ್ಯ ಸರ್ಕಾರ ಯಾವ ಪಾಠವನ್ನೂ ಕಲಿಯಲಿಲ್ಲ. ಕಟ್ಟುನಿಟ್ಟಿನ‌ ಕ್ರಮ ಕೈಗೊಂಡು ಸೋಂಕು ತಡೆಗೆ ಮುಂದಾಗಲಿಲ್ಲ. ಸರ್ಕಾರಗಳು ಸಂಪೂರ್ಣ ನಿಷ್ಕ್ರಿಯ ಆಗಿವೆ’ ಎಂದೂ ಅವರು ದೂರಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು