ಮಂಗಳವಾರ, ಜೂನ್ 28, 2022
28 °C
ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಹಿತ್ಯ ಲೋಕದ ಆಲದ ಮರವಾಗಿದ್ದ ಪ್ರೊ.ವಸಂತ ಕುಷ್ಟಗಿ

ಕಲಬುರ್ಗಿ: ಲೇಖನಿ ಕೆಳಗಿಟ್ಟ ‘ಹಾರಯಿಕೆಯ ಕವಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಹಾರಯಿಕೆಯ ಕವಿ’ ಎಂದೇ ರಾಜ್ಯದಲ್ಲಿ ಹೆಸರಾದ ಪ್ರೊ.ವಸಂತ ಕುಷ್ಟಗಿ ಅವರದು ಬಹುಮುಖ ವ್ಯಕ್ತಿತ್ವ. ಕಲ್ಯಾಣ ಕರ್ನಾಟಕ ಭಾಗದ ಸಾಹಿತ್ಯ ಹಾಗೂ ಇತಿಹಾಸದ ವಿಷಯ ಬಂದರಂತೂ ಮುಂಚೂಣಿಯಲ್ಲಿ ನಿಲ್ಲುವ ಹೆಸರು ಅವರದು. 60ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಅವರು, ಶುಕ್ರವಾರ 85ನೇ ವಯಸ್ಸಿನಲ್ಲಿ ತಮ್ಮ ‘ಲೇಖನಿ ಕೆಳಗಿಟ್ಟರು...’

1995ರಲ್ಲಿ ಕರ್ನಾಟಕ ಸರ್ಕಾರ ಪ್ರಕಟಿಸಿದ ಎಸ್ಸೆಸ್ಸೆಲ್ಸಿ ಪರಿಷ್ಕೃತ ಪಠ್ಯಕ್ರಮದಲ್ಲಿ, ಪ್ರೊ.ವಸಂತ ಕುಷ್ಟಗಿ ಅವರ ‘ಹಾರಯಿಕೆ’ ಕವನವು ಕನ್ನಡ ಪದ್ಯಭಾಗದ ಮೊದಲ ಕವನವಾಗಿ ಪ್ರಕಟಗೊಂಡಿತ್ತು. ಆ ವೇಳೆಯಿಂದಲೇ ಅವರು ‘ಹಾರಯಿಕೆಯ ಕವಿ’ ಎಂದೇ ಮನೆಮಾತಾದರು.‌

ಕುವೆಂಪು, ದ.ರಾ.ಬೇಂದ್ರೆ, ಆಲೂರು ವೆಂಕಟರಾಯರು, ವಿ.ಕೆ. ಗೋಕಾಕ್‌, ಸಿಂಪಿ ಲಿಂಗಣ್ಣ, ಮುಗಳಿ ಮುಂತಾದ ಹಿರಿಯ ಸಾಹಿತಿಗಳೊಂದಿಗೆ ಅವರು ಒಡನಾಟ ಇಟ್ಟುಕೊಂಡವರು. ಹಲವಾರು ನಾಟಕಗಳನ್ನು ಬರೆದ ವರು, ರಂಗನಟರಾಗಿಯೂ ಗುರುತಿಸಿಕೊಂಡಿದ್ದಾರೆ.‌

ವಿಮೋಚನಾ ಹೋರಾಟದಲ್ಲೂ ಭಾಗಿ: ಹೈದರಾಬಾದ್‌ ಕರ್ನಾಟಕ ವಿಮೋಚನಾ ಹೋರಾಟದ ಮುಂಚೂಣಿ ನಾಯಕರಲ್ಲಿ ಪ್ರೊ.ಕುಷ್ಟಗಿ ಅವರೂ ಇದ್ದಾರೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಮರಾಠಿ, ತೆಲಗು, ಉರ್ದು ಭಾಷೆಗಳ ಒತ್ತಡದ ನಡುವೆಯೂ ಕನ್ನಡ ಅಸ್ಮಿತೆಯನ್ನು ಉಳಿಸಿ, ಬೆಳೆಸುವಲ್ಲಿ ಅವರ ಕೊಡುಗೆ ದೊಡ್ಡದು. ಸಾಹಿತ್ಯ, ಐತಿಹಾಸಿಕ ಚಟುವಟಿಕೆ, ಹೋರಾಟಗಳು, ಚಾರಿತ್ರಿಕ ಘಟನೆಗಳಲ್ಲಿ ಅವರ ಹೆಸರು ಯಾವಾಗಲೂ ಮುಂದಿರುತ್ತಿತ್ತು. ಭೀಮಸೇನರಾವ್‌ ತಾವಗೆ ಅವರೊಂದಿಗೆ ಸೇರಿಕೊಂಡು 1935ರಲ್ಲಿಯೇ ಕಲಬುರ್ಗಿಯಲ್ಲಿ ಕನ್ನಡ ಸಂಘ ಕಟ್ಟಿ ಹೋರಾಡಿದ್ದು ಅವರ ಹಿರಿಮೆ.

ಕೊರೊನಾ ಉಪಟಳದ ಸಂದರ್ಭದಲ್ಲಿಯೂ ಅವರು ಕ್ರಿಯಾಶೀಲರಾಗಿದ್ದರು. ಎರಡು ತಿಂಗಳ ಹಿಂದೆಯೇ ನಗರದಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮದಲ್ಲಿಯೂ ಪಾಲ್ಗೊಂಡಿದ್ದರು.

ಜನನ ಮತ್ತು ಬಾಲ್ಯ: ಈಗಿನ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ 1936ರ ಅಕ್ಟೋಬರ್‌ 10ರಂದು ಜನಿಸಿದರು. ಅವರ ತಂದೆ ರಾಘವೇಂದ್ರ ಅವರು ನಿಜಾಂ ಆಡಳಿತದ ಜಿರಾಯತ್‌ (ವ್ಯವಸಾಯ) ಖಾತೆಯಲ್ಲಿ ಮದದ್‌ಗಾರ (ಸಹಾಯಕ) ಆಗಿ ಕೆಲಸ ಮಾಡಿದವರು. ತಾಯಿ ಸುಂದರಾಬಾಯಿ ಗೃಹಿಣಿ.

ತಂದೆಗೆ ಪದೇಪದೇ ವರ್ಗವಾಗುತ್ತಿದ್ದ ಕಾರಣ ವಸಂತ ಅವರ ಶಿಕ್ಷಣ ಬೇರೆಬೇರೆ ಊರುಗಳಲ್ಲಿ ಆಯಿತು. ಯಾದಗಿರಿಯಲ್ಲಿ ಅವರು ಉರ್ದು ಭಾಷೆಯಲ್ಲೇ ತಮ್ಮ ಪ್ರಾರಂಭಿಕ ಶಿಕ್ಷಣ ಪಡೆದರು. ಮಾಧ್ಯಮಿಕ ಅಭ್ಯಾಸ ಶಹಾಪುರದಲ್ಲಿ, ಕಾಲೇಜನ್ನು ಗುಲಬರ್ಗಾದ ನೂತನ ವಿದ್ಯಾಲಯದಲ್ಲಿ ಕಲಿತರು. ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಪ್ರಥಮ ದರ್ಜೆಯಲ್ಲಿ ಪಡೆದ ಎಂ.ಎ ಪದವಿ ಪಡೆದರು.

ಸೇವೆ ಸಲ್ಲಿಸಿದ ಸಂಸ್ಥೆಗಳು: ಬೀದರಿನ ಎಚ್‌.ಕೆ.ಇ. ಸಂಸ್ಥೆಯ ಟಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ನಂತರ ಶಹಾಬಾದಿನ ಎಸ್‌.ಎಸ್‌.ಎಂ. ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಕಲಬುರ್ಗಿಯ ನೂತನ ವಿದ್ಯಾಲಯ ಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ನಿವೃತ್ತಿಯ ನಂತರವೂ ಸ್ವಾಮಿ ರಾಮಾನಂದ ತೀರ್ಥ ಸಂಶೋಧನಾ ಸಂಸ್ಥೆಯಲ್ಲಿ ಗೌರವ ನಿರ್ದೇಶಕರಾಗಿ, ಗುಲಬರ್ಗಾ ವಿ.ವಿ ಸ್ಥಾಪನೆಯಾದಾಗ (1980–82) ಉಪಕುಲಪತಿಯಾಗಿ, ಪ್ರಸಾರಾಂಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದವರು.

ತಮ್ಮ ಉಸಿನ ಕೊನೆಯ ಕ್ಷಣದವರೆಗೂ ಅವರು ಸ್ವಾಮಿ ರಮನಂದ ತೀರ್ಥ ಸಂಶೋಧನಾ ಸಂಸ್ಥೆಯ ಗೌರವ ನಿರ್ದೇಶಕರಾಗಿದ್ದರು. 

ಕಲ್ಯಾಣ ಕರ್ನಾಟಕ ಭಾಗದ ಹಲವು ಯುವ ಸಾಹಿತಿಗಳಿಗೆ ಅವರು ಆಲದ ಮರದಂತೆ ಆಸರೆಯಾಗಿದ್ದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಸೇರಿದಂತೆ ರಾಜ್ಯ ಹಲವು ಸಾಹಿತಿಗಳು, ಗಣ್ಯರು ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.

ಹುಲುಸಾದ ಸಾಹಿತ್ಯ ಕೃಷಿ
ಸಾಹಿತ್ಯದ ವಾತಾವರಣದಲ್ಲೇ ಬೆಳೆದ ವಸಂತ ಕುಷ್ಟಗಿ ಅವರು ‘ನನ್ನ ಮನೆ ಹಾಲಕೆನೆ’ ಎಂಬ ಕವಿತೆಯನ್ನು ಐದನೆಯ ತರಗತಿಯಲ್ಲಿದ್ದಾಗಲೇ ಬರೆದಿದ್ದರು ಎಂದು ಅವರೊಂದಿಗೆ ಒಡನಾಟ ಇಟ್ಟುಕೊಂಡ ಸಾಹಿತಿ ಸ್ವಾಮಿರಾವ್‌ ಕುಲಕರ್ಣಿ ಅವರು ಸ್ಮರಿಸುತ್ತಾರೆ.

ಅವರ ಮೊದಲ ಕವನ ಸಂಕಲನ ‘ಭಾವದೀಪ್ತಿ’ ಪ್ರಕಟವಾದದ್ದು 1970ರಲ್ಲಿ. ನಂತರ ಹೊಸಹೆಜ್ಜೆ, ಗಾಂಧಾರಿಯ ಕರುಣೆ, ದಿಬ್ಬಣದ ಹಾಡು, ಬೆತ್ತಲೆಯ ಬಾನು, ಹಾರಯಿಕೆ ಮುಂತಾದ ಒಂಬತ್ತು ಕವನ ಸಂಕಲನಗಳನ್ನೂ ಹೊರತಂದರು.

ಗದ್ಯ ಸಾಹಿತ್ಯದಲ್ಲಿಯೂ ಹಲವಾರು ಕೃತಿ ರಚಿಸಿರುವ ವಸಂತ ಕುಷ್ಟಗಿ ಅವರು ಬರೆದ ಮೊದಲ ಕೃತಿ ಭಕ್ತಿಗೋಪುರ. ಮುಂಡರಗಿ ಭೀಮರಾಯ, ಮದನಮೋಹನ ಮಾಳವೀಯ, ಕಲಬುರಗಿಯ ಶ್ರೀ ಮಹಾದೇವಪ್ಪ ರಾಂಪುರೆ ಮುಂತಾದ ವ್ಯಕ್ತಿ ಚಿತ್ರ ಕೃತಿಗಳು, ಜಗನ್ನಾಥ ದಾಸರ ಹಿರಿಮೆ, ದಾಸ ಸಾಹಿತ್ಯದ ಹಾದಿಯಲ್ಲಿ, ವಿಜಯನಗರ ಸಾಮ್ರಾಜ್ಯದ ಪತನಾ ನಂತರದ ಹರಿದಾಸ ಸಾಹಿತ್ಯ... ಮುಂತಾದ ದಾಸ ಸಾಹಿತ್ಯದ ಕೃತಿಗಳು.

ಹೊತ್ತಿಗೆಗಳ ಸೊಗಡು, ಓದಿ ಪುಸ್ತಕ ಓದು, ಅಸಂಗತ ಸ್ವಗತ... ಮೊದಲಾದ ಸಾಹಿತ್ಯ ಪರಿಚಯಾತ್ಮಕ ಕೃತಿಗಳೂ ಸೇರಿ ಸುಮಾರು 60 ಕ್ಕೂ ಹೆಚ್ಚೂ ಕೃತಿಗಳನ್ನು ರಚಿಸಿದ್ದಾರೆ.

ಕಾವ್ಯಶ್ರೀ, ತೊದಲು, ಅಜ್ಜಿ ಹೇಳಿದ್ದು ಮೊಮ್ಮಕ್ಕಳು ಬರೆದದ್ದು, ಶ್ರೀರಾಘವೇಂದ್ರ ಮಹಿಮೆ, ಕಂದಗಲ್‌ ಕೃತ ಶ್ರೀ ಚಂದ್ರಲಾ ಪರಮೇಶ್ವರಿ ನಾಟಕ... ಮುಂತಾದ ವಿವಿಧ ಪ್ರಕಾರಗಳ ಸುಮಾರು 30ಕ್ಕೂ ಹೆಚ್ಚು ಕೃತಿಗಳನ್ನು ಸಂಪಾದಿಸಿದ್ದಾರೆ.

ಭಕ್ತಿ ಗೋಪುರ, ಹೊಸ ಹೆಜ್ಜೆ, ಗಾಂಧಾರಿಯ ಕರುಣೆ, ಬೆತ್ತಲೆಯ ಬಾನು, ಚಂದ್ರಲಾ, ಮಾನ್ಯಖೇಟ ಮತ್ತು ಇತ್ತೀಚೆಗಿನ ಅಪ್ ಅಂಡ್ ಡೌನ್ ಋತುಚಕ್ರ... ಮುಂತಾದ ಕೃತಿಗಳು ಬಹು ಜನಪ್ರಿಯವಾಗಿವೆ.

ರಾಜ್ಯೋತ್ಸವ ಪ್ರಶಸ್ತಿ ಗರಿಮೆ
ಎನ್‌. ಧರ್ಮಸಿಂಗ್‌ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ವಸಂತ ಕುಷ್ಟಗಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಂದಿತು.

ಅದಕ್ಕೂ ಮುನ್ನ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ವಾರಂಬಳ್ಳಿ ಪ್ರಶಸ್ತಿ, ರತ್ನಾಕರವರ್ಣಿ ಮುದ್ದಣ – ಆನಾಮಿಕ ದತ್ತಿ ಪ್ರಶಸ್ತಿ, ಭಾರತ ರತ್ನ ಸರ್. ಎಂ.ವಿ. ಪ್ರತಿಷ್ಠಾನ ಪ್ರಶಸ್ತಿ, ಉಡುಪಿ ಜಿಲ್ಲೆಯ ಬೇಲಾಡಿ ಮಾರಣ್ಣ ಮಾಡ ಪ್ರಶಸ್ತಿ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಗುಲಬರ್ಗಾ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ಕೂಡ ನೀಡಿದೆ.

ಮೇದಕ್ಕಿಯಲ್ಲಿ ನಡೆದ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳಾನಧ್ಯಕ್ಷತೆ, ಕಲಬುರ್ಗಿ ಜಿಲ್ಲಾ 9ನೇ ಸಾಹಿತ್ಯ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ವಹಿಸಿದ್ದು ಅವರ ಹಿರಿಮೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು