ಭಾನುವಾರ, ಜನವರಿ 19, 2020
23 °C
ತೊಗರಿ ನೋಂದಣಿ ಜೊತೆಗೆ ಖರೀದಿಯನ್ನೂ ಆರಂಭಿಸಲು ಒತ್ತಾಯ

ಸಂಸದರ ಕಚೇರಿ ಎದುರು ನಾಳೆ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ತೊಗರಿ ನೋಂದಣಿಯನ್ನು ಮಾಡುವುದರ ಜೊತೆಗೇ ಖರೀದಿಯನ್ನೂ ಆರಂಭಿಸಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಇದೇ 16ರಂದು ಮಿನಿ ವಿಧಾನಸೌಧದ ಬಳಿ ಇರುವ ಸಂಸದ ಡಾ.ಉಮೇಶ ಜಾಧವ್‌ ಅವರ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಮಾರುತಿ ಮಾನ್ಪಡೆ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರತಿ ರೈತರಿಂದ 10 ಕ್ವಿಂಟಲ್ ತೊಗರಿ ಖರೀದಿ ಮಾಡಲು ಸರ್ಕಾರ ನಿರ್ಧರಿಸಿ ಆದೇಶ ಹೊರಡಿಸಿದೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಮಾರುಕಟ್ಟೆಯಲ್ಲಿ ಬೆಂಬಲ ಬೆಲೆಗಿಂತಲೂ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿರುವುದರಿಂದ ರೈತರು ಬೆಳೆದಂತಹ ಎಲ್ಲಾ ತೊಗರಿ ಖರೀದಿ ಮಾಡಲು ಸರ್ಕಾರ ತೀರ್ಮಾನ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯದಲ್ಲಿ 11 ಲಕ್ಷ ಹೆಕ್ಟೇರ್‌ನಲ್ಲಿ 11 ಲಕ್ಷ ಟನ್‌ ತೊಗರಿ ಉತ್ಪಾದನೆ ನಿರೀಕ್ಷೆ ಇದೆ. ರಾಜ್ಯ ಸರ್ಕಾರ 10.70 ಲಕ್ಷ ಟನ್‌ ಉತ್ಪಾದನೆಯೆಂದು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಪಿಎಸ್‌ಎಸ್‌ ಯೋಜನೆಯಡಿ ಒಟ್ಟು ಬೆಳೆಯಲಾದ ತೊಗರಿ ಪೈಕಿ ಶೇ 25ರಷ್ಟು ಮಾತ್ರ ಖರೀದಿ ಮಾಡಲು ಕೇಂದ್ರ ಸರ್ಕಾರ ಆದೇಶ ಹೊರಿಸಿದೆ. 1.85 ಲಕ್ಷ ಟನ್‌ ಮಾತ್ರ ಖರೀದಿಗೆ ಕೇಂದ್ರ ಸರ್ಕಾರವು ಅನುಮತಿ ನೀಡಿದೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದ್ದು, 5.5 ಲಕ್ಷ ಟನ್‌ ಖರೀದಿಗೆ ಒಪ್ಪಿಗೆ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಬೇಕು’ ಎಂದರು.

ನಷ್ಟ ತುಂಬಿಕೊಡಿ: ‘ಕಾಳಗಿ ಗ್ರಾಮದಲ್ಲಿ 1500 ಕುಟುಂಬಗಳು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಗ್ರಾಮೀಣ ಖಾತ್ರಿ ಯೋಜನೆಯಡಿ ಸತತ 14 ವರ್ಷಗಳಿಂದ ವರ್ಷದಲ್ಲಿ 100 ದಿನದ ಕೆಲಸ ಮಾಡುತ್ತಿದ್ದರು. ಕಾಳಗಿ ಪಟ್ಟಣ ಪಂಚಾಯಿತಿ ಆಗಿರುವುದರಿಂದ ಪ್ರತಿ ಕುಟುಂಬಕ್ಕೆ ವಾರ್ಷಿಕ ₹ 25 ಸಾವಿರದಂತೆ ಗ್ರಾಮದ ಕೂಲಿಕಾರರಿಗೆ ₹ 3.07 ಕೋಟಿ ನಷ್ಟವಾಗಿದೆ. ಈ ನಷ್ಟ ತುಂಬಿಕೊಡಲು ಜಿಲ್ಲಾಡಳಿತ ಮುಂದಾಗಬೇಕು. ಕೆಲಸ ಹುಡುಕಿಕೊಂಡ ವಲಸೆ ಹೋಗುವುದನ್ನು ತಪ್ಪಿಸಲು ಪರ್ಯಾಯ ಉದ್ಯೋಗ ಒದಗಿಸಬೇಕು’ ಎಂದು ಒತ್ತಾಯಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಎಐಕೆಎಸ್‌ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ, ಕಾರ್ಯದರ್ಶಿ ಅಶೋಕ ಮ್ಯಾಗೇರಿ, ರೈತ ಮುಖಂಡ ಅಲ್ತಾಫ್‌ ಇನಾಮದಾರ ಗೋಷ್ಠಿಯಲ್ಲಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು