ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಗಿ | ಹೊಸ ಹೆಬ್ಬಾಳ ಬಳಿ ಬಸ್ ತಡೆದು ಪ್ರತಿಭಟನೆ: ವಿದ್ಯಾರ್ಥಿಗಳ ಪರದಾಟ

Published 20 ನವೆಂಬರ್ 2023, 5:41 IST
Last Updated 20 ನವೆಂಬರ್ 2023, 5:41 IST
ಅಕ್ಷರ ಗಾತ್ರ

ಕಾಳಗಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಹೊಸ ಹೆಬ್ಬಾಳ ಬಳಿ ಸೋಮವಾರ ಬೆಳಿಗ್ಗೆ ಮಂಗಲಗಿ–ಕಾಳಗಿ–ಸೂಪರ್ ಮಾರ್ಕೆಟ್ ಕಲಬುರಗಿ ಮಾರ್ಗದ ಬಸ್ಸು ನಿಲ್ಲಿಸದೆ ಇರುವುದನ್ನು ಖಂಡಿಸಿ ಬಸ್ ತಡೆದು ಸ್ಥಳೀಯ ಪ್ರಯಾಣಿಕರು ಪ್ರತಿಭಟನೆ ನಡೆಸಿದರು.

ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ ಆದರೆ ಕಾಳಗಿ–ಹೆಬ್ಬಾಳ–ಕಲಬುರಗಿ ಮಾರ್ಗದಲ್ಲಿ ಸಂಚರಿಸುವ ಬಸ್ಸುಗಳು ಅಷ್ಟೇ ಇವೆ. ಮೇಲಾಗಿ ಅವು ತೀರಾ ಹಳೆಯದಾಗಿವೆ. ಇದರಿಂದಾಗಿ ಓಡಾಡುವ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಬೆಳ್ಳಂಬೆಳಿಗ್ಗೆ ಸುತ್ತಲಿನ ಹಳ್ಳಿಗಳ ವಿದ್ಯಾರ್ಥಿಗಳು ಶಾಲಾ ಕಾಲೇಜಿಗಾಗಿ ಕಲಬುರಗಿಗೆ ತೆರಳುತ್ತಾರೆ. ಆದರೆ ಈ ಬಸ್ಸಿನ ಅವ್ಯವಸ್ಥೆಗೆ ನಲಗುವಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ಮುಂಚೆ ಹಳೆ ಹೆಬ್ಬಾಳ ಕಡೆಯಿಂದ ಪ್ರಯಾಣಿಕರಿಂದ ತುಂಬಿ ತುಳುಕಾಡುತ್ತ ಬಂದ ಕಾಳಗಿ ಡಿಪೊದ ಈ ಬಸ್ಸು, ಹೊಸ ಹೆಬ್ಬಾಳ ಬಳಿ ನಿಲ್ಲಿಸಲಿಲ್ಲ. ಇದರಿಂದ ರೊಚ್ಚಿಗೆದ್ದ ಸ್ಥಳೀಯ ವಿದ್ಯಾರ್ಥಿಗಳು, ಪ್ರಯಾಣಿಕರು ನಮ್ಮನ್ನು ಏರಿಸಿಕೊಳ್ಳದೆ ಹೋದರೆ ನೀವು ಬಸ್ ಮುಂದಕ್ಕೆ ಓಡಿಸುವಂತಿಲ್ಲ ಎಂದು ಹಟ ಮಾಡಿ ತಡೆದು ನಿಲ್ಲಿಸಿದರು. ಬಸ್ ಒಳಗಡೆಯಿದ್ದ ಮಂಗಲಗಿ, ಕಾಳಗಿ, ಕೊಡದೂರ, ಸೂಗೂರು, ಚಿಂಚೋಳಿ ಎಚ್. ಹಳೆ ಹೆಬ್ಬಾಳ ಮತ್ತಿತರ ಕಡೆಯ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಸಮಯಕ್ಕೆ ಕಲಬುರಗಿಗೆ ತಲುಪದೆ ಅರ್ಧದಾರಿಯಲ್ಲೇ ನಿಂತರು.

ಆ ಬಳಿಕ 9.15ರ ಸುಮಾರಿಗೆ ಬಂದ ಕಾಳಗಿ ಕಡೆಯ ಇನ್ನೊಂದು ಮಾರ್ಕೆಟ್ ಬಸ್ಸು ಸಹ ಬರುವಾಗಲೇ ಪ್ರಯಾಣಿಕರಿಂದ ತುಂಬಿ ಅದು ಕೂಡ ಇಲ್ಲಿನವರಿಗೆ ಏರಿಸಿಕೊಳ್ಳದಕ್ಕೆ ಅದಕ್ಕೂ ಸ್ಥಳೀಯರು ಮುಂದೆ ಬಿಡದೆ ನಿಲ್ಲಿಸಿ ಬಿಟ್ಟಿದ್ದರು. ಅದರ ಹಿಂದೆ ಬಂದ ಕಾಳಗಿ–ವಿಜಯಪುರ ಬಸ್ಸು ಹಾಗೂ ಕಲಬುರಗಿ ಕಡೆಯಿಂದ ಕಾಳಗಿಗೆ ಬರುತಿದ್ದ ಹೈದರಾಬಾದ್ ಬಸ್ಸನ್ನೂ ತಡೆದು ನಿಲ್ಲಿಸಿದ್ದಾರೆ. 10 ಗಂಟೆಯಾದ್ರೂ ಯಾವೊಂದು ಬಸ್ಸನ್ನೂ ಮುಂದಕ್ಕೆ ಬಿಡದ ಪರಿಣಾಮ ನೂರಾರು ಪ್ರಯಾಣಿಕರು, ವಿದ್ಯಾರ್ಥಿಗಳು ದಿಕ್ಕುತೋಚದೆ ಕುಳಿತಿದ್ದರು.

ಈ ಮಾಹಿತಿ ಲಭ್ಯವಾಗುತ್ತಿದ್ದಂತೆ ಕಾಳಗಿ ಸಿಪಿಐ ಜಗದೇವಪ್ಪ ಪಾಳಾ ಸೂಚನೆ ಮೇರೆಗೆ ಮಾಡಬೂಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಯಾಣಿಕರ ಮನವೊಲಿಸಿ ಬಸ್ ಬಿಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT