ಕಲಬುರಗಿ: ಚಿಂಚೋಳಿ ತಾಲ್ಲೂಕಿನ ಸಿದ್ಧಸಿರಿ ಇಥೆನಾಲ್ ಕಾರ್ಖಾನೆ ಪ್ರಾರಂಭ ಮಾಡಲು ತಡೆ ಒಡ್ಡಿದ ರಾಜಕೀಯ ಶಕ್ತಿಗಳ ವಿರುದ್ಧ ಸೆ.17ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಕಲಬುರಗಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಜಗದೀಶ ಪಾಟೀಲ ರಾಜಾಪುರ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಬೆಳಿಗ್ಗೆ ಸಾರ್ವಜನಿಕ ಉದ್ಯಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್‍ಯಾಲಿ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಲಾಗುವುದು’ ಎಂದರು.
‘ಕಳೆದ ಸಾಲಿನಲ್ಲಿ ಕಾರ್ಖಾನೆ ಮೇಲೆ ಅವಲಂಬಿತವಾಗಿ ಸುಮಾರು 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿತ್ತು. ಕಾರ್ಖಾನೆ ಆರಂಭವಾದ ಒಂದು ತಿಂಗಳಲ್ಲಿ ಪರಿಸರ ಮಾಲಿನ್ಯ ಮಂಡಳಿ ನೆಪ ನೀಡಿ ಕಬ್ಬು ಸಾಗಾಣೆ ಸ್ಥಗಿತ ಮಾಡಿದ್ದರಿಂದ ಸಾವಿರಾರು ರೈತರ ಬದುಕು ಬೀದಿಗೆ ಬಂದಿದೆ’ ಎಂದರು.
‘ಕಬ್ಬು ಕಟಾವು ನಿಲ್ಲಿಸಿದ್ದರಿಂದ ಸಾವಿರಾರು ಟನ್ ಕಬ್ಬು ಜಮೀನಿನಲ್ಲಿ ಒಣಗಿತು. ಕೆಲ ದಲ್ಲಾಳಿಗಳು ಪ್ರತಿ ಟನ್‌ಗೆ ₹1,000ರಿಂದ ₹1500ರಂತೆ ಖರೀದಿಸಿದರು. ಕಬ್ಬು ನಾಟಿ ಮಾಡಿದ ರೈತರು ಸಂಕಷ್ಟ ಅನುಭವಿಸಿದರು’ ಎಂದು ಹೇಳಿದರು.
‘ಈ ಹಂಗಾಮಿನಲ್ಲಿ ಚಿಂಚೋಳಿ ತಾಲ್ಲೂಕಿನ ಸೇಡಂ, ಚಿಂಚೋಳಿ, ಕಾಳಗಿ ತಾಲ್ಲೂಕು ಪ್ರದೇಶದಲ್ಲಿ ಸುಮಾರು 35 ಸಾವಿರ ಎಕರೆ ಪ್ರದೇಶದಲ್ಲಿ ರೈತರು ಕಬ್ಬು ಬೆಳೆದಿದ್ದಾರೆ. ಶೀಘ್ರದಲ್ಲಿ ಕಾರ್ಖಾನೆ ಪ್ರಾರಂಭಿಸಲು ಅನುಮತಿ ನೀಡಿ ರೈತರ ಹಿತ ಕಾಪಾಡಬೇಕು. ಇಲ್ಲವಾದರೆ ಈ ಭಾಗದ ರೈತರು ಆತ್ಮಹತ್ಯೆ ಹಾದಿ ತುಳಿಯುವ ಪ್ರಸಂಗ ಎದುರಿಸಬೇಕಾಗುತ್ತದೆ’ ಎಂದರು.
‘ರೈತರ ಹಿತ ಕಾಪಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈಯಕ್ತಿಕ ಕಾಳಜಿವಹಿಸಿ ರೈತರಿಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಒತ್ತಾಯಿಸಿದರು.
ಸಂಘಟನೆಯ ರಾಜ್ಯ ಉಪಾಧ್ಯಕ್ಷ ಬಸವರಾಜ ಪಾಟೀಲ ಅಂಕಲಗಿ, ಕಲಬುರಗಿ ತಾಲ್ಲೂಕು ಘಟಕದ ಅಧ್ಯಕ್ಷ ಶಾಂತವೀರ ಪಾಟೀಲ, ಜೇವರ್ಗಿ ತಾಲ್ಲೂಕು ಘಟಕದ ಅಧ್ಯಕ್ಷ ಶರಣು ಬಿಲ್ಲಾಡ, ರೈತ ಮುಖಂಡ ಶರಣಬಸಪ್ಪ ಜಿ.ಬೈರಪ್ಪ ರಟಕಲ, ಗುಂಡಪ್ಪ ಮಾಳಗೆ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.