ಕಲಬುರಗಿ: ಮಾಜಿ ದೇವದಾಸಿ ಮಹಿಳೆಯರ ಮಾಸಿಕ ಪಿಂಚಣಿಯ ಬಾಕಿ ಹಣ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ, ದೇವದಾಸಿ ಮಹಿಳಾ ವಿಮೋಚನಾ ಸಂಘ ಹಾಗೂ ರಾಜ್ಯ ಮಸಣ ಕಾರ್ಮಿಕರ ಸಂಘದ ಜಿಲ್ಲಾ ಸಮಿತಿಯ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಗುರುವಾರ ಪ್ರತಿಭಟಿಸಿದರು.
ಪಟ್ಟಿಯಲ್ಲಿ ಬಿಟ್ಟು ಹೋದ ಮಾಜಿ ದೇವದಾಸಿ ಮಹಿಳೆಯರ ಮತ್ತು ಅವರ ಗಂಡ ಬಿಟ್ಟ ಮಕ್ಕಳು ಸೇರಿ ಎಲ್ಲ ಸದಸ್ಯರ ಗಣತಿ ಆರಂಭಿಸಿ, ಮರು ವಸತಿ ಒದಗಿಸಬೇಕು ಎಂದು ಮನವಿ ಮಾಡಿದರು.
ಮಸಣ ಕಾರ್ಮಿಕರ ಗಣತಿ ಮಾಡಿ 45 ವರ್ಷ ಮೇಲಿನವರಿಗೆ ಮಾಸಿಕ ₹3,000 ಪಿಂಚಣಿ ಜಾರಿಗೊಳಿಸಬೇಕು. ಪ್ರತಿ ಕುಣಿ ಅಗೆದು ಮುಚ್ಚುವ ಕೆಲಸವನ್ನು ನರೇಗಾ ಕೆಲಸವೆಂದು ಪರಿಗಣಿಸಿ, ಕನಿಷ್ಠ ₹ 3,000 ನೀಡಬೇಕು. ಜತೆಗೆ ಸುರಕ್ಷತಾ ಕ್ರಮಗಳನ್ನು ಒದಗಿಸಬೇಕು.
ದಲಿತ ನಿರುದ್ಯೋಗ ಯುವಕ/ಯುವತಿಯರಿಗೆ ಮಾಸಿಕ ₹10,000 ನಿರುದ್ಯೋಗ ಭತ್ಯೆ ಒದಗಿಸಬೇಕು. ದಲಿತ ಮಹಿಳೆಯರ ಸ್ವಾವಲಂಬಿ ಬದುಕಿಗಾಗಿ ಶೇ 75ರಷ್ಟು ಸಹಾಯಧನದ ಬಡ್ಡಿರಹಿತ ₹10 ಲಕ್ಷ ಸಾಲ ಕೊಡಬೇಕು. ಬೇಸಾಯ ಮಾಡಲು ಬಯಸುವ ದಲಿತ ಕುಟುಂಬಗಳಿಗೆ ತಲಾ 5 ಎಕರೆ ಜಮೀನು ಕೊಡಬೇಕು ಎಂದು ಮನವಿ ಮಾಡಿದರು.
ಎಸ್‌ಸಿಎಸ್‌ಪಿ, ಟಿಎಸ್‌ಪಿ ಉಪಯೋಜನೆಯನ್ನು ಸಮರ್ಪಕ ಜಾರಿಗಾಗಿ ಇಲಾಖಾವಾರು ಪುನರ್ ಯೋಜನೆಗಳನ್ನು ರೂಪಿಸಿ ಜಾಗೃತ ದಳ ಸ್ಥಾಪಿಸಬೇಕು. ದಲಿತ ಯುವಜನರ ಸ್ವಯಂ ಉದ್ಯೋಗಕ್ಕಾಗಿ ಬಡ್ಡಿ ಮತ್ತು ಜಾಮೀನುರಹಿತ ₹25 ಲಕ್ಷ ಸಾಲ ನೀಡಬೇಕು ಎಂದಿದ್ದಾರೆ.
ಪ್ರತಿಭಟನೆಯಲ್ಲಿ ಪ್ರಮುಖರಾದ ಯು.ಬಸವರಾಜ, ಪಾಂಡುರಂಗ ಮಾವಿನಕರ್, ಚಂದಮ್ಮ ಗೋಳಾ, ಸುಧಾಮ ಧನ್ನಿ, ಕೆ.ನೀಲಾ, ಶ್ರೀಮಂತ ಬಿರಾದಾರ, ಶರಣಬಸಪ್ಪ ಮಮಶೆಟ್ಟಿ ಸೇರಿ ಹಲವರು ಉಪಸ್ಥಿತರಿದ್ದರು.