ಶಹಾಬಾದ್: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ದಲಿತ ಮಾದಿಗ ಸಮನ್ವಯ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು. ಬಳಿಕ ಗ್ರೇಡ್ 2 ತಹಶೀಲ್ದಾರ್ ಗುರುರಾಜ ಸಂಗಾವಿ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಡಿಎಂಎಸ್‌ಎಸ್ ಜಿಲ್ಲಾ ಪ್ರತಿನಿಧಿ ರವಿ ಬೆಳಮಗಿ ಮಾತನಾಡಿ, ‘ಒಳಮೀಸಲಾತಿ ಜಾರಿಗೆ ಸುಪ್ರೀಂ ಕೋರ್ಟ್ ಅನುಮತಿಸಿದೆ. ಇದರಿಂದ ಸಮಾನತೆಗೆ ಧಕ್ಕೆಯಾಗುವುದಿಲ್ಲ. ಸಂವಿಧಾನದ ಆಶಯದಂತೆ ನ್ಯಾಯ ಮೂರ್ತಿ ಸದಾಶಿವ ಆಯೋಗದ ವರದಿ ಅನುಸಾರವಾಗಿ ಒಳ ಮೀಸಲಾತಿ ಜಾರಿಗೊಳಿಸಿದರೆ ರಾಜ್ಯ ಸರ್ಕಾರದಿಂದ ಕಾನೂನು ಉಲ್ಲಂಘನೆ ಆಗುವುದಿಲ್ಲ ಎಂದು ಸುಪ್ರಿಂ ಕೋರ್ಟ ಆದೇಶ ನೀಡಿದೆ. ಆದರೆ ತಿಂಗಳಾದರೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದೆ’ ಎಂದು ಕಿಡಿಕಾರಿದರು.
ಡಿಎಂಎಸ್‌ಎಸ್ ತಾಲ್ಲೂಕು ಅಧ್ಯಕ್ಷ ಶಿವರಾಜ ಕೋರೆ ಮಾತನಾಡಿ, ‘ಕರ್ನಾಟಕದಲ್ಲಿ ಮೂರು ದಶಕಗಳ ಸತತವಾಗಿ ಮಾದಿಗ ಸಮಾಜದ ಹೋರಾಟಗಾರರು ನ್ಯಾಯ ಮೂರ್ತಿ ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಸುಪ್ರೀಂ ಕೋರ್ಟ್ ಐತಿಹಾಸಿಕ ನಿರ್ಣಯ ಪ್ರಕಟಿಸುವ ಮೂಲಕ ಮಾದಿಗ ಸಮಾಜಕ್ಕೆ ನ್ಯಾಯ ನೀಡಿದೆ. ಜಾರಿ ವಿಳಂಬವಾದಲ್ಲಿ ರಾಜ್ಯಾದ್ಯಂತ ದಲಿತ ಮಾದಿಗ ಸಮನ್ವಯ ಸಮಿತಿ ಸಂಘಟನೆ ಉಗ್ರ ಹೋರಾಟ ಮಾಡಲಾಗುತ್ತದೆ’ ಎಂದು ಹೇಳಿದರು.
ಕಾರ್ಯದರ್ಶಿ ನಾಗಪ್ಪ ರಾಯಚೂರಕರ, ಶಿವಶರಣಪ್ಪ ಗೋಳಾ, ಹಣಮಂತ ಜಂಬಗಿ, ಪ್ರಕಾಶ, ನೀಲೂ, ನಾಮದೇವ ಸೇರಿದಂತೆ ಅನೇಕರು ಹಾಜರಿದ್ದರು.