ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ‘27ರಂದು ಕೇಂದ್ರದ ವಿರುದ್ಧ ಒಗ್ಗಟ್ಟಿನ ಹೋರಾಟ’

Last Updated 25 ಸೆಪ್ಟೆಂಬರ್ 2021, 5:09 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದ ಕೃಷಿ ಹಾಗೂ ಕೃಷಿ ಸಂಬಂಧಿ ಕಾಯ್ದೆಗಳನ್ನು ವಿರೋಧಿಸಿ ಸೆ. 27ರಂದು ನಡೆಯಲಿರುವ ಭಾರತ ಬಂದ್‌ಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಬೆಂಬಲ ನೀಡಲಿದೆ. ಇದರ ಭಾಗವಾಗಿ ವಿವಿಧ ಹೋರಾಟಗಳನ್ನೂ ಮಾಡಲಿದೆ’ ಎಂದು ಸಮಿತಿಯ ಸಂಚಾಲಕ ಡಿ.ಜಿ. ಸಾಗರ ಹೇಳಿದರು.

‘ಕೋವಿಡ್‌ನಿಂದ ಉಂಟಾದ ಸಾವು, ನೋವು ಹಾಗೂ ನಿರುದ್ಯೋಗದ ಕಾರಣ ಜನ ಅತಂತ್ರ ಸ್ಥಿತಿಯಲ್ಲಿದ್ದಾರೆ. ಇದರ ಮಧ್ಯೆಯೂ ರಾಜ್ಯ ಹಾಗೂ ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡುವ ಮೂಲಕ ಮತ್ತೊಂದು ಹೊಡೆತ ನೀಡುತ್ತಿವೆ. ಇನ್ನೊಂದೆಡೆ‍ ‍ಪ‍್ರಧಾನಿ ಮೋದಿ ಅವರು ಅಸಂಬದ್ಧ ಕಾಯ್ದೆಗಳ ಮೂಲಕ ದೇಶವನ್ನೇ ಹಾಳು ಮಾಡಲು ಹೊರಟಿದ್ದಾರೆ. ಇದಕ್ಕೆ ತಕ್ಕ ಶಾಸ್ತಿ ಮಾಡಲು ಸಂಕಷ್ಟಕ್ಕೀಡಾದವರೆಲ್ಲ ಈಗ ಒಂದಾಗಿದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಕೃಷಿ, ಕೈಗಾರಿಕೆ ಹಾಗೂ ಸಾರ್ವಜನಿಕ ಕ್ಷೇತ್ರವನ್ನು ಹಾಳು ಮಾಡಿ ಬಡವರು, ಕಾರ್ಮಿಕರಿಗೆ ತೊಂದರೆ ಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಧೋರಣೆ ತಾಳಿದೆ. ಸಾಮಾನ್ಯ ಜನರನ್ನು ಲೂಟಿ ಮಾಡಿ ಇಡೀ ದೇಶದ ಉದ್ಯಮ ವಲಯವನ್ನು ಕಾರ್ಪೊರೇಟ್‌ ಕಂಪನಿಗಳ ಪಾಲು ಮಾಡಲು ಹೊರಟಿದೆ. ಈ ಖಾಸಗೀಕರಣ ವಿರೋಧಿಸಿ ಸಂಘಟನಾತ್ಮಕ ಹೋರಾಟ ನಡೆದಿದೆ’ ಎಂದರು.

30ರಂದು ಮತ್ತೆ ಪ್ರತಿಭಟನೆ: ‘ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸಮಿತಿಯಿಂದ ಸೆ.30ರಂದು ಮಧ್ಯಾಹ್ನ 12ಕ್ಕೆ ಜಗತ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಲಾಗುವುದು. ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಮಾಡಲಾಗುವುದು’ ಎಂದರು.

‘ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಇಳಿದಾಗಲೂ ದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇಳಿಸಿಲ್ಲ. ಕಳೆದ ಒಂದು ವರ್ಷದ ಅವಧಿಯಲ್ಲಿ 19 ಬಾರಿ ಈ ತೈಲಗಳ ಬೆಲೆ ಏರಿಸಲಾಗಿದೆ. ಹಿಂದೆ ₹ 150 ಇದ್ದ ಅಡುಗೆ ಅನಿಲ ಸಿಲಿಂಡರ್‌ನ ಬೆಲೆ ಈಗ ₹ 1000 ದಾಟಿದೆ’ ಎಂದರು.

‘ಜಾತಿ ಗಣತಿಗೆ ರಾಜ್ಯ ಸರ್ಕಾರ ಏಕೆ ಭಯ ಪಡುತ್ತಿದೆ ಎಂದು ಉತ್ತರಿಸಬೇಕು. ಸಿದ್ದರಾಮಯ್ಯ ಅವರು ಮುಖ್ಯಂತ್ರಿ ಆಗಿದ್ದ ಅವಧಿಯಲ್ಲೇ ಇದು ನಡೆಯಬೇಕಿತ್ತು. ಈಗಲಾದರೂ ರಾಜ್ಯ ಸರ್ಕಾರ ಈ ಗಣತಿ ಮಾಡಬೇಕು. ರಾಜ್ಯದಲ್ಲಿ ಯಾವ ಸಮಾಜದವರು ಎಷ್ಟಿದ್ದಾರೆ, ಅವರ ಜೀವನಮಟ್ಟ ಹೇಗಿದೆ ಎಂಬುದಾದರೂ ತಿಳಿಯುತ್ತದೆ’ ಎಂದೂ ಸಾಗರ ಹೇಳಿದರು.

ಸಮಿತಿ ಜಿಲ್ಲಾ ಸಂಚಾಲಕ ಸುರೇಶ ಹಾದಿಮನಿ, ಸಂಘಟನಾ ಸಂಚಾಲಕರಾದ ಉಮೇಶ ನರೋಣಾ, ರೇವಣಸಿದ್ಧಪ್ಪ ಜಾಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT