ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸೂತ್ರವಾಗಿ ನಡೆದ ಪಿಯು ಇಂಗ್ಲಿಷ್‌ ಪರೀಕ್ಷೆ

ಅಂತರ ಕಾಯ್ದುಕೊಂಡೇ ಪರೀಕ್ಷೆ ಬರೆದ ವಿದ್ಯಾರ್ಥಿಗಳು; 1,750 ವಿದ್ಯಾರ್ಥಿಗಳು ಗೈರು
Last Updated 18 ಜೂನ್ 2020, 15:04 IST
ಅಕ್ಷರ ಗಾತ್ರ

ಕಲಬುರ್ಗಿ: ಲಾಕ್‌ಡೌನ್‌ ಬಳಿಕ ರಾಜ್ಯದಾದ್ಯಂತ ಗುರುವಾರ ನಡೆದ ಪಿಯು ಇಂಗ್ಲಿಷ್‌ ಪರೀಕ್ಷೆ ಜಿಲ್ಲೆಯಲ್ಲಿ ಸುಸೂತ್ರವಾಗಿ ಮುಕ್ತಾಯವಾಯಿತು. ಮನೆಯಿಂದಲೇ ಮಾಸ್ಕ್‌ ಹಾಕಿಕೊಂಡು ಬಂದಿದ್ದ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್‌ ಮೂಲಕ ತಪಾಸಣೆ ಮಾಡಲಾಯಿತು.

ಪರೀಕ್ಷೆ 10.15ಕ್ಕೆ ಆರಂಭವಾದರೂ ವಿದ್ಯಾರ್ಥಿಗಳು ಬೆಳಿಗ್ಗೆ 8 ಗಂಟೆಯಿಂದಲೇ ಪರೀಕ್ಷಾ ಕೇಂದ್ರದತ್ತ ಬರಲು ಶುರು ಮಾಡಿದರು. ಮಕ್ಕಳನ್ನು ಪರೀಕ್ಷಾ ಕೇಂದ್ರದೊಳಗೆ ಕಳಿಸಿದ ಪೋಷಕರು ಹೊರಗಡೆಯೇ ಕಾಯ್ದು ನಿಂತಿದ್ದರು. ಮಾಸ್ಕ್‌ ಇಲ್ಲದೇ ಬಂದಿದ್ದವರಿಗೆ ಪರೀಕ್ಷಾ ಕೇಂದ್ರದಲ್ಲಿ ಮಾಸ್ಕ್ ಕೊಡಲಾಯಿತು.

ಕೊಠಡಿಯಲ್ಲಿಯೂ ಕೊರೊನಾ ಪ್ರಯುಕ್ತ ದೈಹಿಕ ಅಂತರ ಕಾಯ್ದುಕೊಳ್ಳಬೇಕಿದ್ದುದರಿಂದ ಚಿಕ್ಕ ಬೆಂಚುಗಳಿದ್ದರೆ ಪ್ರತಿಯೊಂದಕ್ಕೆ ಒಬ್ಬೊಬ್ಬ ವಿದ್ಯಾರ್ಥಿ, ದೊಡ್ಡ ಬೆಂಚ್‌ಗೆ ಇಬ್ಬರು ವಿದ್ಯಾರ್ಥಿಗಳನ್ನು ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ಪರೀಕ್ಷೆ ಮುಗಿದ ಬಳಿಕವೂ ಎಲ್ಲ ವಿದ್ಯಾರ್ಥಿಗಳನ್ನು ಒಟ್ಟಿಗೇ ಬಿಡುವ ಬದಲು ಒಂದೊಂದು ಬ್ಲಾಕ್‌ನ ವಿದ್ಯಾರ್ಥಿಗಳನ್ನು ಹೊರಗೆ ಕಳಿಸಲಾಯಿತು. ಇದಕ್ಕಾಗಿ ಮೇಲ್ವಿಚಾರಕರು ಮೈಕ್‌ ಮೂಲಕ ಸೂಚನೆ ನೀಡುತ್ತಿದ್ದರು.

ನಗರದ 25 ಹಾಗೂ ತಾಲ್ಲೂಕು, ಹೋಬಳಿಯಲ್ಲಿರುವ 22 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದವು.

1750 ವಿದ್ಯಾರ್ಥಿಗಳು ಗೈರು: ಪರೀಕ್ಷೆಗೆ 23,058 ವಿದ್ಯಾರ್ಥಿಗಳು ಕುಳಿತುಕೊಳ್ಳಬೇಕಿತ್ತು. ಆದರೆ, 21,308 ಮಾತ್ರ ಹಾಜರಾಗಿ ಉಳಿದ 1,750 ವಿದ್ಯಾರ್ಥಿಗಳು ಗೈರಾದರು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶನ ಶಿವಶರಣಪ್ಪ ಮುಳೆಗಾಂವ ತಿಳಿಸಿದರು.

‘ನಮ್ಮ ಕಾಲೇಜಿನಲ್ಲಿಪರೀಕ್ಷೆಗೆ 460 ವಿದ್ಯಾರ್ಥಿಗಳು ಹಾಜರಾಗಿದ್ದರು. ಪರೀಕ್ಷೆ ಸುಸೂತ್ರವಾಗಿ ನಡೆಯಿತು’ ಎಂದುಎಂ.ಎಸ್. ಇರಾಣಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಐ.ಕೆ. ಪಾಟೀಲ ಹೇಳಿದರು.

ಪರೀಕ್ಷೆ: ಯಾರು ಏನೆಂದರು?

ಇಂಗ್ಲಿಷ್‌ ಪರೀಕ್ಷೆ ಕೊರೊನಾ ಕಾರಣದಿಂದ ಮೂರು ತಿಂಗಳು ತಡೆವಾಗಿದ್ದು, ಒಳ್ಳೆಯದೇ ಆಯಿತು. ಇದರಿಂದ ಇನ್ನಷ್ಟು ಓದಿಕೊಳ್ಳಲು ಅನುಕೂಲವಾಯಿತು. ಪರೀಕ್ಷೆ ಚೆನ್ನಾಗಿ ಬರೆದಿದ್ದೇನೆ

ಐಶ್ವರ್ಯ ಪಾಟೀಲ, ವಿದ್ಯಾರ್ಥಿನಿ

***

ಪರೀಕ್ಷೆಗೆ ಮಾಸ್ಕ್‌ ಹಾಕಿಕೊಂಡು ಬರೆಯುತ್ತಿರುವುದು ಇದೇ ಮೊದಲು. ಆದರೆ, ನಮಗೆ ಗಾಬರಿಯೇನೂ ಆಗಿಲ್ಲ. ಲಾಕ್‌ಡೌನ್‌ ಇದ್ದಾಗಲೂ ಮಾಸ್ಕ್‌ ಹಾಕಿಕೊಂಡೇ ಇರುತ್ತಿದ್ದೆ. ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರಿಂದ ಸೋಂಕು ಹರಡುವ ಸಾಧ್ಯತೆ ಕಡಿಮೆಯಾದಂತೆ

ಚೈತ್ರಾ, ವಿದ್ಯಾರ್ಥಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT