ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಳಗಿ: ಪ್ರಶ್ನೆಪತ್ರಿಕೆ ಜೆರಾಕ್ಸ್‌ಗೆ ಶಿಕ್ಷಕರ ಪರದಾಟ

ಎಸ್.ಎಸ್.ಎಲ್.ಸಿ ಸಂಕಲನಾತ್ಮಕ ಮೌಲ್ಯಮಾಪನ-1
Published : 29 ಸೆಪ್ಟೆಂಬರ್ 2024, 5:58 IST
Last Updated : 29 ಸೆಪ್ಟೆಂಬರ್ 2024, 5:58 IST
ಫಾಲೋ ಮಾಡಿ
Comments

ಕಾಳಗಿ: ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಮತ್ತು ಪ್ರೌಢಶಾಲಾ ಶಿಕ್ಷಣ ಪರೀಕ್ಷೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಕೆ.ಎಸ್.ಇ.ಎ.ಬಿ) ಪ್ರಸ್ತುತ ವರ್ಷ ತೆಗೆದುಕೊಂಡಿರುವ ನಿರ್ಧಾರಕ್ಕೆ ಕೆಲಕಡೆ ಶಿಕ್ಷಕರು ಪರದಾಡಿದ ಪ್ರಸಂಗ ಶನಿವಾರ ಕಂಡುಬಂತು.

ತಾಲ್ಲೂಕಿನ 35ಕ್ಕೂ ಹೆಚ್ಚು ಪ್ರೌಢಶಾಲೆಗಳಲ್ಲಿ 8ರಿಂದ 9ನೇ ತರಗತಿ ಹಾಗೂ ಎಸ್.ಎಸ್.ಎಲ್.ಸಿ ಅರ್ಧವಾರ್ಷಿಕ ಪರೀಕ್ಷೆ (ಸಂಕಲನಾತ್ಮಕ ಮೌಲ್ಯಮಾಪನ-1) ಸೆ.24 ರಿಂದ ಶುರುವಾಗಿದ್ದು ಅ.1ಕ್ಕೆ ಕೊನೆಗೊಳ್ಳಲಿದೆ.

8ನೇ, 9ನೇ ತರಗತಿಗೆ ಜಿಲ್ಲಾಮಟ್ಟದಿಂದ ಸಿದ್ಧಪಡಿಸಿದ ಪ್ರಶ್ನೆಪತ್ರಿಕೆಗಳನ್ನು (ವಿಷಯವಾರು ಒಂದುಪ್ರತಿ) ಶಾಲಾ ಶಿಕ್ಷಣ ಇಲಾಖೆ ಆಯಾ ಶಾಲಾ ಮುಖ್ಯಶಿಕ್ಷಕರಿಗೆ ಪರೀಕ್ಷೆ ಮುನ್ನವೇ ಕೊಟ್ಟಿದೆ. ಮಕ್ಕಳ ಸಂಖ್ಯೆಗನುಗುಣವಾಗಿ ಪ್ರಶ್ನೆಪತ್ರಿಕೆ ಝರಾಕ್ಸ್ ಮಾಡಿಕೊಂಡು ವೇಳಾಪಟ್ಟಿಯಂತೆ ಪರೀಕ್ಷೆ ನಡೆಸಲಾಗುತ್ತಿದೆ.

ಆದರೆ ಎಸ್.ಎಸ್.ಎಲ್.ಸಿ ಮಕ್ಕಳಿಗೆ ಮಾತ್ರ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಆಯಾ ವಿಷಯದ ಒಂದುದಿನ ಮುಂಚೆ ಮಧ್ಯಾಹ್ನದ ವೇಳೆ ಶಾಲಾ ಲಾಗಿನ್‌ಗೆ ಪ್ರಶ್ನೆಪತ್ರಿಕೆ ನೀಡುತ್ತ ಬಂದಿದೆ.  ಮುಖ್ಯಶಿಕ್ಷಕರು ಅದನ್ನು ಡೌನ್ಲೋಡ್ ಮಾಡಿಕೊಂಡು ಮಕ್ಕಳ ಸಂಖ್ಯೆಗನುಸಾರ ಝರಾಕ್ಸ್ ಮಾಡಿಸಿ ಪರೀಕ್ಷೆ ನಡೆಸಿದ್ದಾರೆ. ಆದರೆ, ಎಲ್ಲೊ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ತಿಳಿದ ಮೌಲ್ಯನಿರ್ಣಯ ಮಂಡಳಿಯು ದಿಢೀರ್ ಆಗಿ ಲಾಗಿನ್‌ಗೆ ಪ್ರಶ್ನೆಪತ್ರಿಕೆ ಹಾಕುವ ಸಮಯವನ್ನು ಬದಲಾವಣೆ ಮಾಡಿದೆ.

ಶನಿವಾರ ಬೆಳಿಗ್ಗೆ 10ಗಂಟೆಗೆ ವಿಜ್ಞಾನ ವಿಷಯದ ಪರೀಕ್ಷೆ ಇದ್ದರೆ, ಆ ದಿನವೇ ಬೆಳಿಗ್ಗೆ 6ಗಂಟೆಗೆ ಪ್ರಶ್ನೆಪತ್ರಿಕೆ ಶಾಲಾ ಲಾಗಿನ್‌ಗೆ ಹಾಕಿದೆ. ಮುಖ್ಯಶಿಕ್ಷಕರು ಪ್ರಶ್ನೆಪತ್ರಿಕೆ ಡೌನ್ಲೋಡ್ ಮಾಡಿಕೊಂಡು ಝರಾಕ್ಸ್‌ಗಾಗಿ ಅಂಗಡಿಗಳ ಹುಡುಕಾಟದಲ್ಲಿ ಪರದಾಡಿದ್ದಾರೆ.

ಕೆಲಕಡೆ ಕರೆಂಟ್ ಕೈಕೊಟ್ಟಿದ್ದರಿಂದ ದೂರದ ಊರಿಗೂ ಹೋಗಿ ಝರಾಕ್ಸ್ ಅಂಗಡಿಗಳನ್ನು ತೆರೆಸಿ ಝರಾಕ್ಸ್ ಮಾಡಿಕೊಂಡು ಬಂದು ಮಕ್ಕಳಿಗೆ ಪರೀಕ್ಷೆ ನಡೆಸುವಲ್ಲಿ ಹರಸಾಹಸ ಪಟ್ಟಿದ್ದು ಕಂಡುಬಂದಿದೆ.

ಕೆಲವರಿಗೆ ಮಾತ್ರ ವೆಬ್ ಕಾಸ್ಟಿಂಗ್:

‘ಯಾವ ಶಾಲೆಗಳಲ್ಲಿ ಸಿಸಿಕ್ಯಾಮೆರಾ ವ್ಯವಸ್ಥೆ ಇದೆಯೋ ಅಲ್ಲಿ ಈ ಅರ್ಧವಾರ್ಷಿಕ ಪರೀಕ್ಷೆಯನ್ನು ವೆಬ್ ಕಾಸ್ಟಿಂಗ್‌ಗೆ ಒಳಪಡಿಸಲಾಗಿದೆ. ಆದರೆ ಕೆಲವು ಕೇಂದ್ರಗಳಲ್ಲಿ ಮಾತ್ರ ಜಾರಿಗೆ ಬಂದಂತಾಗಿದೆ’ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಹೆಚ್ಚುವರಿ ಸಮಯಕ್ಕೆ ಅವಕಾಶ’

‘ಎಲ್ಲೆಲ್ಲಿ ಸಿಸಿ ಕ್ಯಾಮರಾ ಅನುಕೂಲವಿದೆ ಅಲ್ಲಿ ವೆಬ್ ಕಾಸ್ಟಿಂಗ್ ಮಾಡಿ ಮಕ್ಕಳಲ್ಲಿ ಪರೀಕ್ಷೆ ಭಯ ಹೋಗಲಾಡಿಸಲು ಪ್ರ್ಯಾಕ್ಟಿಸ್ ಮಾಡಿಸಲಾಗುತ್ತಿದೆ ಈ ಪ್ರಯೋಗ 6ನೇ ತರಗತಿಯಿಂದಲೇ ಮಾಡಲು ತಿಳಿಸಿದೆ. ಸೆ.28ರಂದು ಎಸ್.ಎಸ್.ಎಲ್.ಸಿ ವಿಜ್ಞಾನ ಪ್ರಶ್ನೆಪತ್ರಿಕೆ ವಿತರಣೆಯಲ್ಲಿ ಕೆಲಕಡೆ ತೊಂದರೆ ಕಂಡುಬಂದಿದ್ದು ಹೆಚ್ಚುವರಿ ಸಮಯಕ್ಕೆ ಅವಕಾಶ ನೀಡಲಾಗಿದೆ’ ಎಂದು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಕಲಬುರಗಿ ಉಪನಿರ್ದೇಶಕ ಸೂರ್ಯಕಾಂತ ಮದನೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT