ಮಂಗಳವಾರ, ಆಗಸ್ಟ್ 3, 2021
26 °C
ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಸುರಿಯುತ್ತಿರುವ ರೋಹಿಣಿ; ರೈತರ ಮೊಗದಲ್ಲಿ ಹರ್ಷ

ಕರದಾಳ ಗ್ರಾಮದಲ್ಲಿ ಅತ್ಯಧಿಕ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ನಗರ ಸೇರಿದಂತೆ ಜಿಲ್ಲೆಯ ಚಿತ್ತಾಪುರ, ಶಹಾಬಾದ್‌, ಚಿಂಚೋಳಿ, ಕಾಳಗಿ, ಸೇಡಂ, ಅಫಜಲಪುರ ತಾಲ್ಲೂಕಿನ ಹಲವೆಡೆ ಭಾರಿ ಮಳೆಯಾಗಿದ್ದು, ಚಿತ್ತಾಪುರ ತಾಲ್ಲೂಕಿನ ಕರದಾಳದಲ್ಲಿ ಅತ್ಯಧಿಕ 72 ಮಿ.ಮೀ. ಮಳೆ ಸುರಿದಿದೆ.

ಅಳ್ಳೊಳ್ಳಿ ಹಾಗೂ ಗುಂಡೂರಿನಲ್ಲಿ 64 ಮಿಲಿ ಮೀಟರ್‌ ಮಳೆ ಸುರಿದಿದೆ. ಶಹಾಬಾದ್ ಬಳಿಯ ಭಂಕೂರು ಹಾಗೂ ಸೇಡಂ ತಾಲ್ಲೂಕಿನ ಮಳಖೇಡದಲ್ಲಿ ತಲಾ 62 ಮಿ.ಮೀ. ಮಳೆಯಾಗಿದೆ.

ಕಳೆದ ಎರಡು–ಮೂರು ದಿನಗಳಿಂದ ಸತತವಾಗಿ ಮಳೆಯಾಗುತ್ತಿದ್ದು, ರೈತರು ರೋಹಿಣಿ ಮಳೆಗೆ ಹರ್ಷಚಿತ್ತರಾಗಿದ್ದು, ಬಿತ್ತನೆಗಾಗಿ ಹೊಲಗಳನ್ನು ಸಜ್ಜುಗೊಳಿಸುತ್ತಿದ್ದಾರೆ. ಜಿಲ್ಲೆಯಲ್ಲಿನ ಕೃಷಿ ಹೊಂಡಗಳಲ್ಲಿಯೂ ನೀರು ತುಂಬಿಕೊಳ್ಳುತ್ತಿದೆ.

ಬಿರುಗಾಳಿ

 

ಕಾಳಗಿ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಸೋಮವಾರ ತಡರಾತ್ರಿ ಮತ್ತು ಮಂಗಳವಾರ ಬೆಳಗಿನ ಜಾವ ಬಿರುಗಾಳಿ ಬೀಸಿದ್ದಲ್ಲದೆ ಗುಡುಗು, ಮಿಂಚಿನ ಆರ್ಭಟದೊಂದಿಗೆ ಉತ್ತಮ ಮಳೆ ಸುರಿದಿದೆ. ಇದರಿಂದ ಮಧ್ಯರಾತ್ರಿ ಕೈಕೊಟ್ಟ ವಿದ್ಯತ್‌ ಮಂಗಳವಾರ ಕಣ್ಣುಮುಚ್ಚಾಲೆ ಆಟ ನಡೆಸಿತ್ತು. ಇಳೆ ತಣ್ಣಗಾಗಿ ಇಡೀ ದಿನ ತಂಪು ವಾತಾವರಣ ಇತ್ತು.

ಕಮಲಾಪುರದ‌ಲ್ಲೂ ತುಂತುರು ಮಳೆ: ತಾಲ್ಲೂಕಿನ ವಿವಿಧೆಡೆ ಸೋಮವಾರ ಬೆಳಗಿನ ಜಾವ ಸ್ವಲ್ಪ ಮಳೆಯಾಗಿದೆ. ಭೂಮಿಯಲ್ಲಿ ಅಲ್ಪ ಪ್ರಮಾಣದ ತೇವಾಂಶ ಕಂಡು ಬಂದಿದೆ, ಬಿತ್ತನೆಗೆ ಯೋಗ್ಯವಾಗಿಲ್ಲ. ಮಧ್ಯಾಹ್ನದಿಂದ ಮೋಡ ಕವಿದ ವಾತಾವರಣ ಇರುವುದರಿಂದ ಮಳೆಯಾಗುವ ಸಾಧ್ಯತೆ ಇದೆ ಎಂದು ರೈತರು ಬೀಜ, ಗೊಬ್ಬರ ಖರೀದಿಗೆ ಪಟ್ಟಣಕ್ಕೆ ಆಗಮಿಸಿರುವುದು ಕಂಡು ಬಂತು.

ಚಿತ್ತಾಪುರ ರೈತರ ಮೊಗದಲ್ಲಿ ಸಂತಸ: ತಾಲ್ಲೂಕಿನಲ್ಲಿ ಬಿಸಿಲಿನ ಬೇಗೆಯಿಂದ ಬಸವಳಿದ ಜನರಿಗೆ ಹಾಗೂ ಕಾದು ಕೆಂಡವಾಗಿದ್ದ ಇಳೆಗೆ ಸೋಮವಾರ ಮಳೆರಾಯ ತಂಪನ್ನೆರೆದ. ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗೆ ಅಗತ್ಯವಾಗಿದ್ದ ಮಳೆ ಬಂದಿದ್ದರಿಂದ ರೈತರ ಮೊಗದಲ್ಲಿ ಸಂತೋಷದ ಕಳೆ ಮೂಡಿದೆ. ಮಧ್ಯರಾತ್ರಿ 11.30 ಕ್ಕೆ ಶುರುವಾಗಿ ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು