ಗುರುವಾರ , ಆಗಸ್ಟ್ 22, 2019
25 °C
ಜಿಲ್ಲೆಯಲ್ಲಿ ಮೂರನೇ ದಿನವೂ ಸತತ ಮಳೆ

ಸೂರ್ಯನೂರಿನಲ್ಲಿ ಸೂರ್ಯ ಕಾಣಲಿಲ್ಲ...

Published:
Updated:
Prajavani

ಕಲಬುರ್ಗಿ: ಈ ಬೇಸಿಗೆಯಲ್ಲಿ 46 ಡಿಗ್ರಿ ಸೆಲ್ಸಿಯಸ್‌ಗೆ ಏರುವ ಮೂಲಕ ಜಿಲ್ಲೆಯ ಜನರ ಮುಖದಲ್ಲಿ ಬೆವರು ಬರಿಸಿದ್ದ ಸೂರ್ಯ ಶನಿವಾರ ಪತ್ತೆಯೇ ಇರಲಿಲ್ಲ. ಸತತ ಮೂರನೇ ದಿನವೂ ಮಳೆ ಸುರಿದಿದ್ದು, ಹಳೆ ಬಡಾವಣೆಗಳಲ್ಲಿನ ಮನೆಗಳು ಶಿಥಿಲಗೊಂಡು ಸೋರುತ್ತಿವೆ.

ಶನಿವಾರ ಜಿಲ್ಲೆಯಲ್ಲಿ 23 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಹೀಗಾಗಿ, ಇಡೀ ದಿನ ಚಳಿಯ ವಾತಾವರಣದಿಂದ ಜನರು ಮನೆಯಲ್ಲೇ ಉಳಿದು ಮಳೆಯ ಸುಖ ಅನುಭವಿಸಿದರು.

ನಗರ ಅಷ್ಟೇ ಅಲ್ಲದೇ ಜಿಲ್ಲೆಯ ಚಿಂಚೋಳಿ, ಕಮಲಾಪುರ, ಚಿತ್ತಾಪುರ, ವಾಡಿ, ಸೇಡಂನಲ್ಲಿ ಮಳೆ ಸುರಿಯಿತು. ನಗರದಲ್ಲಿ ಇಡೀ ದಿನ ಮೋಡ ಕವಿದ ವಾತಾವರಣವಿತ್ತು. 

ಕಳೆದ ಮೂರು ದಿನಗಳಲ್ಲಿ ಜಿಲ್ಲೆಯಾದ್ಯಂತ 91 ಮಿಲಿ ಮೀಟರ್ ಮಳೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 21 ಮಿಲಿ ಮೀಟರ್‌ ಮಳೆ ಸುರಿದಿದೆ. ವಾಡಿಕೆಯ ಮಳೆಗಿಂತ 16 ಮಿಲಿ ಮೀಟರ್‌ ಹೆಚ್ಚುವರಿ ಮಳೆ ಈ ಅವಧಿಯಲ್ಲಿ ಸುರಿದಂತಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ಅಂಕಿ ಅಂಶಗಳು ಹೇಳುತ್ತವೆ.

ಅರೆ ಮಲೆನಾಡಿನ ವಾತಾವರಣ ಹೊಂದಿದ ಚಿಂಚೋಳಿ ತಾಲ್ಲೂಕಿನಲ್ಲಿ ಪ್ರಕೃತಿ ಕಳೆಗಟ್ಟಿದ್ದು, ಬೇಸಿಗೆಯಲ್ಲಿ ಬರಡಾಗಿದ್ದ ಕಾಡು ಹಸಿರು ಭೂರಮೆಯಿಂದ ಕಂಗೊಳಿಸುತ್ತಿದೆ. ಸಣ್ಣ ಪುಟ್ಟ ಜಲಪಾತಗಳು ತುಂಬಿ ಹರಿಯುತ್ತಿವೆ. ಚಂದ್ರಂಪಳ್ಳಿ ಅಣೆಕಟ್ಟೆಯಲ್ಲಿ ನೀರು ಸಂಗ್ರಹವಾಗುತ್ತಿದೆ.

ಎರಡು ವರ್ಷಗಳ ಸತತ ಬರಲಾಗದಿಂದ ಬಳಲಿದ್ದ ಜಿಲ್ಲೆಯ ಜನರಿಗೆ ಈ ಮಳೆ ತುಸು ಸಮಧಾನ ನೀಡಿದೆ.

Post Comments (+)