‘ಅಕ್ರಮವಾಗಿ ಬಡಾವಣೆ ನಿರ್ಮಿಸಿಕೊಂಡ ಹಲವರಿಗೆ ನೋಟಿಸ್ ನೀಡಲಾಗಿದೆ. 15 ಮಂದಿ ವಿರುದ್ಧ ದೂರು ದಾಖಲಾಗಿದ್ದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ’ ಎಂದು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಗಂಗಾಧರ ಎಸ್.ಮಾಳಗಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಬಡಾವಣೆ ಅಭಿವೃದ್ಧಿಗೆ ಬಂದಂತಹ ಅರ್ಜಿಗಳನ್ನು ಪರಿಶೀಲನೆ ಮಾಡಿ ಸಭೆ ನಡೆಸಿ ಸರ್ಕಾರ ನಿಗದಿಪಡಿಸಿದ ಶುಲ್ಕ ಪಡೆದುಕೊಂಡು ಅನುಮೋದನೆ ಕೊಡುತ್ತಿದ್ದೇವೆ. ಆದರೂ ಜನರು ಯಾವ ಉದ್ದೇಶಕ್ಕಾಗಿ ಅಕ್ರಮ ಬಡಾವಣೆಗಳು ಅಭಿವೃದ್ಧಿ ಪಡಿಸುತ್ತಿದ್ದಾರೆ ಗೊತ್ತಾಗುತ್ತಿಲ್ಲ. ‘ಕುಡಾ’ ಅಧ್ಯಕ್ಷರು ಸಭೆ ನಡೆಸಿ ಅಕ್ರಮ ಬಡಾವಣೆಗಳ ಪಟ್ಟಿ ಮಾಡಿಕೊಳ್ಳಲಾಗಿದೆ. ಹೊಸದಾಗಿ ಬಡಾವಣೆ ಮಾಡಿಕೊಂಡಿದ್ದರೆ ತಂಡ ರಚನೆ ಮಾಡಿಕೊಂಡು ತಡೆಗಟ್ಟಲಾಗುವುದು’ ಎಂದರು. ‘ಅಕ್ರಮ ಬಡಾವಣೆಗಳು ಕಂಡುಬಂದಲ್ಲಿ ಸಾರ್ವಜನಿಕರು ಪ್ರಾಧಿಕಾರದ ಆಯುಕ್ತರ ಮೊಬೈಲ್‌ಗೆ ಅಥವಾ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಿಗೆ ಕರೆ ಮಾಡಬಹುದು. ಮುಂದಿನ ದಿನಗಳಲ್ಲಿ ಸಹಾಯವಾಣಿ ಸ್ಥಾಪಿಸುವ ಚಿಂತನೆಯೂ ಇದೆ’ ಎಂದು ಮಾಹಿತಿ ನೀಡಿದರು.