ಗುರುವಾರ , ಜುಲೈ 29, 2021
20 °C

ಬಿಸಿಎಂ ಅಧಿಕಾರಿ ಸಂಗಾ ಅಮಾನತಿಗೆ ಆಗ್ರಹ

ಪ್ರಜಾವಾಣಿ ವಾರ್ತೆ‌‌ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ‘ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರ ವಿರುದ್ಧ ಆರೋಪ ಮಾಡಿರುವ ಜಿಲ್ಲಾ ಬಿಸಿಎಂ ಇಲಾಖೆ ಜಿಲ್ಲಾ ಅಧಿಕಾರಿ ರಮೇಶ ಸಂಗಾ ಅವರ ವಿರುದ್ಧ ಇಲಾಖಾ ತನಿಖೆ ನಡೆಸಬೇಕು. ಅಲ್ಲಿಯವರೆಗೂ ಅವರನ್ನು ಅಮಾನತು ಮಾಡಬೇಕು‘ ಎಂದು ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಗಾ ಅವರು ನಿಯಮ ಉಲ್ಲಂಘಿಸಿ, ಮೇಲಧಿಕಾರಿಗಳ ಗಮನಕ್ಕೆ ತಾರದೆ ಮಾಧ್ಯಮಗಳ ಎದುರು ಆರೋಪ ಮಾಡಿದ್ದಾರೆ. ಸಿವಿಲ್ ಸರ್ವಿಸ್ ನಿಯಮಾವಳಿ ಅನ್ವಯ ಅವರ ವಿರುದ್ಧ ಇಲಾಖಾ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಶಾಸಕರ ಆಪ್ತ ಸಹಾಯಕ ಪ್ರವೀಣ ಅವರು ಕರೆ ಮಾಡಿ ಹಣ ಕೇಳಿದ್ದಾರೆ ಎಂದು ಸಂಗಾ ಆರೋಪಿಸಿದ್ದಾರೆ. ಆದರೆ, ಪ್ರವೀಣ ಅವರು ಎಲ್ಲಿಯೂ ಹಣ ಕೇಳಿಲ್ಲ. ಪ್ರವೀಣ ಕರೆ ಮಾಡಿದ್ದಾರೆ ಎನ್ನಲಾದ ದೂರವಾಣಿ ಸಂಖ್ಯೆ ಅವರ ಹೆಸರಿನಲ್ಲಿ ನೋಂದಣಿ ಆಗಿಲ್ಲ. ಅದು ಯಾರ ಧ್ವನಿ, ಯಾರ ಹೆಸರಲ್ಲಿ ದೂರವಾಣಿ ಸಂಖ್ಯೆ ನೋಂದಣಿ ಆಗಿದೆ ಎಂಬ ಬಗ್ಗೆಯೂ ತನಿಖೆ ನಡೆಯಬೇಕು ಎಂದು ಹೇಳಿದರು.

ರಮೇಶ ಸಂಗಾ ಅವರು ಶಾಸಕರ ವಿರುದ್ಧ ಮಾಡಿರುವ ಯಾವುದೇ ಆರೋಪದಲ್ಲಿ ಹುರುಳಿಲ್ಲ. ಈ ಬಗ್ಗೆ ಅವರ ಬಳಿ ಯಾವುದೇ ದಾಖಲೆಗಳೂ ಇಲ್ಲ ಎಂದರು.

ಹಳೆ ಜೇವರ್ಗಿ ರಸ್ತೆಯಲ್ಲಿರುವ ಪಿಡಬ್ಲುಡಿ ಕ್ವಾಟ್ರಸ್‌ನಲ್ಲಿ ಕ್ವಾರಂಟೈನ್ ಕೇಂದ್ರ ತೆರೆಯಲು ಶಾಸಕರು ಅಡ್ಡಿಪಡಿಸಿಲ್ಲ. ಅಲ್ಲದೆ, ಅದು ಶಾಸಕರ ಮನೆ ಸಮೀಪವೂ ಇಲ್ಲ. ಅಲ್ಲಿನ ನಿವಾಸಿಗಳು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದ್ದರು. ಜನವಸತಿ ಪ್ರದೇಶದಲ್ಲಿ ಕ್ವಾರಂಟೈನ್ ಕೇಂದ್ರ ತೆರೆದರೆ ತೊಂದರೆಯಾಗುತ್ತದೆ ಎಂದು ಅದನ್ನು ಸ್ಥಳಾಂತರಿಸಲು ಸೂಚಿಸಿದ್ದರು ಎಂದರು.

ಶಾಸಕರು ಅಧಿಕಾರಿಯ ಕೆಲಸದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಕ್ವಾರಂಟೈನ್ ಕೇಂದ್ರಗಳಿಗೆ ತಾಲ್ಲೂಕು ಪಂಚಾಯಿತಿ ಇಒ ಅವರೊಂದಿಗೆ ಭೇಟಿ ನೀಡಿದ್ದ ವೇಳೆ ಕ್ವಾರಂಟೈನ್‌ಗೆ ಒಳಗಾದವರು ಗುಣಮಟ್ಟದ ಊಟ ನೀಡುವಂತೆ ಶಾಸಕರ ಗಮನ ಸೆಳೆದಿದ್ದರು. ಹೀಗಾಗಿ ಕ್ವಾರಂಟೈನ್ ಕೇಂದ್ರಗಳಿಗೆ ಊಟ ಪೂರೈಸುವಂತೆ ಕರೆ ಮಾಡಿ ಹೇಳಿದ್ದಾರೆ. ಅವರು ಪಕ್ಷದ ಕಾರ್ಯಕರ್ತರಿಗೆ, ಕಾರ್ಯಕ್ರಮಕ್ಕೆ ಊಟ ಕೊಡುವಂತೆ ಹೇಳಿಲ್ಲ ಎಂದು ತಿಳಿಸಿದರು.

ಸಭೆಯಲ್ಲಿ ಶಾಸಕರು ತಮ್ಮನ್ನು ಏಕವಚನದಲ್ಲಿ ನಿಂದಿಸಿದ್ದಾರೆ ಎಂದು ಸಂಗಾ ಆರೋಪಿಸಿದ್ದಾರೆ. ಈ ಬಗ್ಗೆ ಅವರು ಆಡಿಯೊ ಬಿಡುಗಡೆ ಮಾಡಿದ್ದು, ತಮಗೆ ಬೇಕಾದವರು ಆಡಿಯೊ ನೀಡಿದ್ದಾರೆ ಎಂದು ಹೇಳಿದ್ದಾರೆ. ಈ ಆಡಿಯೊ ಕೊಟ್ಟ ವ್ಯಕ್ತಿ ಯಾರು, ಆಡಿಯೊ ರೆಕಾರ್ಡ್ ಮಾಡಲು ಮೇಲಧಿಕಾರಿಗಳ ಅನುಮತಿ ಪಡೆಯಲಾಗಿತ್ತೇ ಎಂದು ಪ್ರಶ್ನಿಸಿದರು.

ಶಾಸಕರು ಬೆಂಬಲಿಗರು ಕರೆ ಮಾಡಿ ಜೀವ ಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಂತೆ ವಿಶ್ವವಿದ್ಯಾಲಯ ಠಾಣೆಯಲ್ಲಿ ಈಗಾಗಲೇ ಪ್ರಕರಣ ದಾಖಲಾಗಿದೆ. ತಪ್ಪು ಮಾಡಿದ್ದು ಸಾಬೀತಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದರು.‌

ಜಿಡಿಎ ಮಾಜಿ ಅಧ್ಯಕ್ಷ ದಯಾನಂದ ಧಾರವಾಡಕರ್, ಮಹಾನಗರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಉಮೇಶ ಪಾಟೀಲ, ಸೂರಜ್ ತಿವಾರಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಅಪ್ಪು ಕಣಕಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು