ಬುಧವಾರ, ಡಿಸೆಂಬರ್ 1, 2021
20 °C

ಮಳೆ ಹಾನಿ: ಪರಿಹಾರಕ್ಕೆ ಆರ್‌ಕೆಎಸ್‌ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ರಾಜ್ಯದಲ್ಲಿ ಎರಡು ತಿಂಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರೈತರು ಬೆಳೆ ಹಾಗೂ ಮನೆಗಳನ್ನು ಕಳೆದುಕೊಂಡಿದ್ದಾರೆ. ಮನೆಗಳನ್ನು ಕಳೆದುಕೊಂಡವರಿಗೆ ಪುನರ್ವಸತಿ ಮತ್ತು ಮೃತರ ಕುಟಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ರೈತ ಕೃಷಿ ಕಾರ್ಮಿಕರ ಸಂಘಟನೆ (ಆರ್‌ಕೆಎಸ್‌) ರಾಜ್ಯ ಘಟಕದ ಅಧ್ಯಕ್ಷ ಡಾ.ಟಿ.ಎಸ್.ಸುನೀತ್ ಕುಮಾರ ಮತ್ತು ರಾಜ್ಯ ಕಾರ್ಯದರ್ಶಿ ಎಚ್.ವಿ. ದಿವಾಕರ್ ಆಗ್ರಹಿಸಿದ್ದಾರೆ.

ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಹವಾಮಾನ ವೈಪರೀತ್ಯದಿಂದಾಗಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಶೇಂಗಾ, ರಾಗಿ, ಜೋಳ, ತೊಗರಿ, ಮೆಣಸಿನಕಾಯಿ, ತರಕಾರಿ, ತೆಂಗು, ಅಡಿಕೆ, ಮೆಣಸಿನ ಬೆಳೆಗಳು ಸಂಪೂರ್ಣ ನಾಶವಾಗಿವೆ. ತೋಟಗಾರಿಕೆಯ ಬೆಳೆಗಳು ನಿಂತ ನೀರಿನಲ್ಲೇ ಕೊಳೆಯುತ್ತಿವೆ. ಹಸಿಬರದಿಂದಾಗಿ ಮುಂದಿನ ದಿನಗಳಲ್ಲಿ ಮೇವಿನ ಕೊರತೆ ತೀವ್ರವಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

‘ಮಳೆಯಿಂದಾಗಿ ಸಾವಿರಾರು ಮನೆಗಳು ಬಿದ್ದು ಹೋಗಿವೆ. ಜನ ಸೂರು ಕಳೆದುಕೊಂಡು ಮಳೆಯಲ್ಲಿ ಬೀದಿಗೆ ಬಂದಿದ್ದಾರೆ. ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಸರ್ಕಾರ ಮಾತ್ರ ಯೆಲ್ಲೋ ಅಲರ್ಟ್ ಘೋಷಿಸಿ ಕುಳಿತಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಹಾನಿಯ ಸಮೀಕ್ಷೆ ಆಮೆಯಂತೆ ನಡೆಯುತ್ತಿದೆ. ಸರ್ಕಾರ ಒಂದಷ್ಟು ಪರಿಹಾರದ ಹಣ ಬಿಡುಗಡೆಯಾಗಿದೆ ಎಂದು ಹೇಳುತ್ತಿದೆ. ಬೆಳೆ ನಷ್ಟಕ್ಕೆ ಮತ್ತು ಮನೆ ಹಾನಿಗೆ ನಿಗದಿಪಡಿಸಿರುವ ಮೊತ್ತ ಚಿಲ್ಲರೆ ದುಡ್ಡಷ್ಟೇ. ಅದೂ ಕೂಡ ಬರುವುದೆಂದು? ಅಲ್ಲಿಯವರೆಗೆ ಜನ ಕಾಯಲು ಸಾಧ್ಯವೇ?’ ಎಂದು ಪ್ರಶ್ನಿಸಿದ್ದಾರೆ.

‘ಸರ್ಕಾರ ಕೂಡಲೇ ಮಳೆ ಪೀಡಿತ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿ, ಬೆಳೆ ನಷ್ಟ ಪರಿಹಾರ ನೀಡಬೇಕು. ಹಾನಿಗೊಳಗಾದ ಮನೆಗಳನ್ನು ದುರಸ್ತಿ ಮಾಡಬೇಕು. ಪೂರ್ಣ ಹಾಳಾಗಿದ್ದರೆ ಹೊಸದಾಗಿ ಮನೆ ನಿರ್ಮಿಸಿ ಕೊಡಬೇಕು. ಸಾವಿಗೀಡಾದವರ ಕುಟುಂಬಗಳಿಗೆ ಶೀಘ್ರವಾಗಿ ಪರಿಹಾರ ನೀಡಬೇಕು. ಕೆರೆಗಳನ್ನು ದುರಸ್ತಿ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು