ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಯೋಧ್ಯೆಯಲ್ಲಿ ಅಪಘಾತ: ಕಲಬುರಗಿಯ ಮೂವರ ಸಾವು

Published 26 ಮೇ 2024, 0:30 IST
Last Updated 26 ಮೇ 2024, 0:30 IST
ಅಕ್ಷರ ಗಾತ್ರ

ಕಲಬುರಗಿ: ಉತ್ತರ ಪ್ರದೇಶದ ಪ್ರಯಾಗರಾಜ್ ಹೆದ್ದಾರಿಯಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ ಅಯೋಧ್ಯೆಯ ರಾಮಲಲ್ಲಾನ ದರ್ಶನಕ್ಕೆ ತೆರಳುತ್ತಿದ್ದ ಕಲಬುರಗಿಯ ಮೂವರು ಯಾತ್ರಿಕರು ಮೃತಪಟ್ಟಿದ್ದು, 11 ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಓಂ ನಗರದ ನಿವಾಸಿಗಳಾದ ಶಿವರಾಜ್, ತಂಗೆಮ್ಮ ಸೇರಿ ಮೂವರು ಮೃತಪಟ್ಟಿದ್ದು, ಇನ್ನೊಬ್ಬರ ಹೆಸರು ತಿಳಿದುಬಂದಿಲ್ಲ ಎಂದು ಕೊತ್ವಾಲಿ ಠಾಣೆಯ ಪೊಲೀಸರು ತಿಳಿಸಿದ್ದಾರೆ.

‘ಯಾತ್ರಿಗಳನ್ನು ಹೊತ್ತ ಟಿಟಿ ವಾಹನವು ಅಯೋಧ್ಯೆಯತ್ತ ವೇಗವಾಗಿ ಹೋಗುತ್ತಿತ್ತು. ಪ್ರಯಾಗರಾಜ್‌ ಹೆದ್ದಾರಿಯಲ್ಲಿ ಎದುರಿಗೆ ಬರುತ್ತಿದ್ದ ಲಾರಿಗೆ ಉಜ್ಜಿಕೊಂಡು ಹೋಗಿದೆ. ಇದರ ಪರಿಣಾಮವಾಗಿ ಟಿಟಿಯ ಬಲಭಾಗ ಜಖಂಗೊಂಡಿದ್ದು, ಮೂವರಿಗೆ ಗಂಭೀರ ಹಾಗೂ ಉಳಿದವರಿಗೆ ಸಣ್ಣಪುಟ್ಟ ಗಾಯಗಳಾದವು. ಗಾಯಾಳುಗಳ ಪೈಕಿ ಆಸ್ಪತ್ರೆಯ ಮಾರ್ಗದಲ್ಲಿ ಒಬ್ಬರು ಹಾಗೂ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಇಬ್ಬರು ಮೃತಪಟ್ಟರು’ ಎಂದು ಬಿಕಾಪುರ್ ಠಾಣೆಯ ಇನ್‌ಸ್ಪೆಕ್ಟರ್ ಲಾಲ್‌ಚಂದ್ರ ಸರೋರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾಲ್ಕೈದು ದಿನಗಳ ಹಿಂದೆಯೇ ಕಲಬುರಗಿಯಿಂದ ರೈಲಿನ ಮುಖಾಂತರ ವಾರಣಾಸಿಗೆ ತೆರಳಿದ್ದರು. ಅಲ್ಲಿಂದ ಟಿಟಿ ಮಾಡಿಕೊಂಡು ಅಯೋಧ್ಯೆ ರಾಮಲಲ್ಲಾನ ದರ್ಶನಕ್ಕೆ ಹೋಗುತ್ತಿದ್ದರು. ಅಯೋಧ್ಯೆಯ 30 ಕಿ.ಮೀ. ಅಂತರದಲ್ಲಿ ಅಪಘಾತ ಸಂಭವಿಸಿದ್ದು, ಮೂರ್ನಾಲ್ಕು ಜನ ಮೃತಪಟ್ಟಿದ್ದಾಗಿ ಮಾಹಿತಿ ಇದೆ. ಆದರೆ, ಅವರ ಹೆಸರು ಸ್ಪಷ್ಟವಾಗಿ ಗೊತ್ತಾಗಿಲ್ಲ. ಆಸ್ಪತ್ರೆಗೆ ಹೋದ ಬಳಿಕವೇ ತಿಳಿಯಲಿದೆ’ ಎಂದು ಗಾಯಾಳು ಸಂಬಂಧ ನಿಜಲಿಂಗಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT