ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ಕಾಮಗಾರಿಗೆ ಅಗೆದ ರಸ್ತೆ: ಸಂಚಾರಕ್ಕೆ ಸಂಕಟ

ಕೇಂದ್ರ ಬಸ್ ನಿಲ್ದಾಣದ ಬಳಿ ಟ್ರಾಫಿಕ್ ಸಮಸ್ಯೆ; ಜನರು ಹೈರಾಣ
Published 24 ಜೂನ್ 2023, 4:17 IST
Last Updated 24 ಜೂನ್ 2023, 4:17 IST
ಅಕ್ಷರ ಗಾತ್ರ

ಕಲಬುರಗಿ: ರಸ್ತೆಯ ಪಕ್ಕದಲ್ಲಿ ಗುಂಡಿಗಳು, ರಸ್ತೆ ತುಂಬೆಲ್ಲ ದೂಳಿನ ಕಣ, ಮೇಲೆದ್ದ ಜಲ್ಲಿಕಲ್ಲು, ಜಲಮಂಡಳಿ ವತಿಯಿಂದ ಪೈಪ್‌ಲೈನ್‌ ಕಾಮಗಾರಿಗೆ ಅಗೆದ ರಸ್ತೆಗಳಿಂದ ಸಾರ್ವಜನಿಕರಿಗೆ ನಿತ್ಯ ಕಿರಿಕಿರಿ.

ನಗರದ ಕೇಂದ್ರ ಬಸ್‌ನಿಲ್ದಾಣ, ಜೇವರ್ಗಿ ರಸ್ತೆ, ಅಫಜಲಪುರ ರಸ್ತೆ, ಹೀರಾಪುರ ರಸ್ತೆ, ಜೇವರ್ಗಿ ಕಾಲೊನಿ, ಲಾಲ್‌ ಬಹದ್ದೂರ ಶಾಸ್ತ್ರಿ ನಗರದ ಸೇರಿದಂತೆ ವಿವಿಧ ಬಡಾವಣೆಯಲ್ಲಿ ಎಲ್‌ ಅಂಡ್‌ ಟಿ ಕಂಪನಿಯಿಂದ ಕಾಮಗಾರಿ ಮಾಡಲಾಗಿದೆ. ಡಾಂಬರು ಹಾಗೂ ಸಿಸಿ ರಸ್ತೆ ಇರುವುದನ್ನು ಅಗೆದು ಪೈಪ್‌ಗಳನ್ನು ಅಳವಡಿಕೆ ಮಾಡಲಾಗಿದೆ. ಆದರೆ ರಸ್ತೆ ದುರಸ್ತೆ ಮಾಡದೇ ಹಾಗೇ ಬಿಟ್ಟಿದ್ದಾರೆ.

ಕೇಂದ್ರ ಬಸ್ ನಿಲ್ದಾಣದ ಬಳಿ ಸರಿಯಾಗಿದ್ದ ರಸ್ತೆಯನ್ನು ಅಗೆದು ಪೈಪ್‌ಗಳನ್ನು ಹಾಕಲಾಗಿದೆ. ಇಲ್ಲಿ ಇಕ್ಕಟವಾದ ಜಾಗವಿದ್ದು, ಆಟೊ ನಿಲ್ದಾಣವೂ ಇದೆ. ಬೇರೆ ತಾಲ್ಲೂಕುಗಳಿಂದ ಬರುವ ಬಸ್‌ಗಳು ಹಾಗೂ ಖಾಸಗಿ ನೂರಾರು ವಾಹನಗಳು ಸಂಚರಿಸುತ್ತವೆ. ಇದರಿಂದ ಟ್ರಾಫಿಕ್‌ ಸಮಸ್ಯೆಯಾಗುತ್ತಿದೆ. ಅಗೆದ ರಸ್ತೆಯನ್ನು ದುರಸ್ತೆ ಮಾಡಿ ಡಾಂಬರ್‌ ಹಾಕಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ರಸ್ತೆ ಅಗೆದಿರುವುದರಿಂದ ಜೆಲ್ಲಿಕಲ್ಲುಗಳು ರಸ್ತೆ ತುಂಬೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇದು ವಾಹನ ಸವಾರರಿಗೆ ಸಂಚಕಾರವಾಗಿ ಪರಿಣಮಿಸಿದೆ. ರಾತ್ರಿ ವೇಳೆಯಲ್ಲಿ ರಸ್ತೆ ಮೇಲೆ ಬೈಕ್‌ ಸ್ಕಿಡ್‌ ಆಗಿ ಅನೇಕರು ಬಿದ್ದು ಗಾಯಗೊಂಡಿರುವ ಪ್ರಕರಣಗಳು ಸಾಕಷ್ಟಿವೆ. ಆದರೂ ಈ ಸಮಸ್ಯೆಗೆ ಪರಿಹಾರ ದೊರಕಿಸಲು ಮಹಾನಗರ ಪಾಲಿಕೆಯವರು ಮುಂದಾಗಿಲ್ಲ.

ನಗರದ ಕೇಂದ್ರ ಬಸ್‌ ನಿಲ್ದಾಣದ ಹಿಂದಿನ ರಸ್ತೆ, ವಿದ್ಯಾನಗರ, ಎಂ.ಎಸ್‌.ಕೆ. ಮಿಲ್‌ ರಸ್ತೆ, ಶಾಂತಿ ನಗರ, ರಾಮನಗರ ಬಡಾವಣೆಯಲ್ಲಿಯೂ ರಸ್ತೆ ಅಗೆಯಲಾಗಿದೆ. ಮಳೆಗಾಲ ಆರಂಭವಾಗುತ್ತಿದ್ದು, ಸ್ವಲ್ಪ ಮಳೆಯಾದರೂ ಸಾಕು ಪ್ರಯಾಣಿಕರು ಹರಸಾಹಸ ಪಡಬೇಕಾದ ಅನಿವಾರ್ಯತೆ ಎದುರಾಗಿದೆ. ಅಗೆದ ಸ್ಥಳದಲ್ಲಿ ಕಾಂಕ್ರಿಟ್‌ ಹಾಕಿ ರಸ್ತೆ ದುರಸ್ತಿ ಮಾಡಬೇಕು ಎಂದು ಬಡಾವಣೆ ನಿವಾಸಿಗಳ ಆಗ್ರಹವಾಗಿದೆ.

ವಿವಿಧ ಕಾಮಗಾರಿಗೆ ಅಗೆದ ರಸ್ತೆಗಳನ್ನು ಮರು ನಿರ್ಮಾಣ ಮಾಡಬೇಕು ಎಂಬುವ ನಿಯಮವಿದೆ. ಆದರೆ ಇದನ್ನು ಪಾಲನೆ ಮಾಡುತ್ತಿಲ್ಲ ಎನ್ನುವ ಆರೋಪವಿದೆ. ಪಾಲಿಕೆ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರು ಮುತರ್ಜಿ ವಹಿಸಿ ರಸ್ತೆ ನಿರ್ಮಾಣ ಮಾಡಲು ಸೂಚಿಸಬೇಕು ಎಂಬುದು ಜನರ ಒತ್ತಾಯ.

ಕಲಬುರಗಿಯ ಹೊಸ ಜೇವರ್ಗಿ ರಸ್ತೆಯ ಬಳಿ ಪೈಪ್‌ಲೈನ್‌ ಕಾಮಗಾರಿಗೆ ಅಗೆದ ರಸ್ತೆಯಲ್ಲಿ ಜಲ್ಲಿಕಲ್ಲು ತೆರೆದಿರುವುದು –ಪ್ರಜಾವಾಣಿ ಚಿತ್ರ
ಕಲಬುರಗಿಯ ಹೊಸ ಜೇವರ್ಗಿ ರಸ್ತೆಯ ಬಳಿ ಪೈಪ್‌ಲೈನ್‌ ಕಾಮಗಾರಿಗೆ ಅಗೆದ ರಸ್ತೆಯಲ್ಲಿ ಜಲ್ಲಿಕಲ್ಲು ತೆರೆದಿರುವುದು –ಪ್ರಜಾವಾಣಿ ಚಿತ್ರ

ಜಲಮಂಡಳಿ ವತಿಯಿಂದ ನೀರು ಸರಬರಾಜು ಮಾಡುವ ಪೈಲ್‌ಲೈ‌ನ್‌ ಕಾಮಗಾರಿಗೆ 7 ತಿಂಗಳ ಹಿಂದೆ ಡಾಂಬರ್‌ ರಸ್ತೆಯನ್ನು ಅಗೆಯಲಾಗಿದೆ. ಇಲ್ಲಿಯವರೆಗೆ ಮರು ಡಾಂಬರಿಕರಣ ಮಾಡಿಲ್ಲ.

-ಲಕ್ಷ್ಮಿಕಾಂತ ತಳವಾರ ವಿದ್ಯಾನಗರ ನಿವಾಸಿ

‘ರಸ್ತೆ ನಿರ್ಮಾಣ ಕಾಮಗಾರಿ ಆರಂಭ’ ಈಗಾಗಲೇ ಅಗೆದ ರಸ್ತೆಯನ್ನು ಮುಚ್ಚಲು ಎಲ್‌ ಅಂಡ್‌ ಟಿ ಅವರಿಗೆ ನೋಟಿಸ್‌ ನೀಡಲಾಗಿದೆ. ಹೀರಾಪುರ ಸಮೀಪದಲ್ಲಿ ರಸ್ತೆ ಮೇಲೆ ಒಂದು ಹಂತದ ರಸ್ತೆ ನಿರ್ಮಾಣ ಆರಂಭವಾಗಿದ್ದು 4 ರಿಂದ 5 ದಿನಗಳಲ್ಲಿ ಎಲ್ಲ ಕಡೆ ಕೆಲಸ ಆರಂಭವಾಗಲಿದೆ ಎಂದು ಮಹಾನಗರ ಪಾಲಿಕೆಯ ಉಪ ಆಯುಕ್ತ (ಅಭಿವೃದ್ಧಿ) ಆರ್‌.ಪಿ.ಜಾಧವ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT